ಜನವರಿ 14 ಕ್ಕೆ ಅತಿಶಯ ಶ್ರೀ ಕ್ಷೇತ್ರ ಕುಂದಾದ್ರಿಯಲ್ಲಿ ವಾರ್ಷಿಕ ಜಾತ್ರ ಮಹೋತ್ಸವ
Published Date: 07-Jan-2025 Link-Copied
ತೀರ್ಥಹಳ್ಳಿ : ಅತಿಶಯ ಶ್ರೀ ಕ್ಷೇತ್ರ ಹೊಂಬುಜ ಜೈನ ಮಠದ ಶಾಖಾ ಕ್ಷೇತ್ರ ಅಚಾರ್ಯ ಶ್ರೀ ಕುಂದ ಕುಂದಾಚಾರ್ಯ ತಪೋಭೂಮಿ ಶ್ರೀ ಕ್ಷೇತ್ರ ಕುಂದಾದ್ರಿಯಲ್ಲಿ ಭಗವಾನ್ ಶ್ರೀ 1008 ಪಾರ್ಶ್ವನಾಥ ಸ್ವಾಮಿ ಹಾಗೂ ಜಗನ್ಮಾತೆ ಶ್ರೀ ಪದ್ಮಾವತಿ ಅಮ್ಮನವರ ವಾರ್ಷಿಕ ಜಾತ್ರ ಮಹೋತ್ಸವ 14-1-2025ನೇ ಮಂಗಳವಾರ ಪರಮಪೂಜ್ಯ ಜಗದ್ಗುರು ಸ್ವಸ್ತೀಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರ ಪಾವನ ಸಾನಿಧ್ಯದಲ್ಲಿ ಜರುಗಲಿದೆ. ಕಲಿಕುಂಡ ಯಂತ್ರಾರಾಧನೆ, ಬ್ರಹ್ಮ ಯಕ್ಷ ಆರಧಾನೆ, ವಿಶೇಷ ಅಭಿಷೇಕ ಪೂಜೆ ಸಹಿತ ಅನೇಕ ದಾರ್ಮಿಕ ವಿಧಿಗಳ ಜೊತೆಗೆ ಜಿನ ಭಜನೆ, ಸಾಂಸ್ಕ್ರತಿಕ ಕಾರ್ಯಕ್ರಮ ಹಾಗೂ ಧಾರ್ಮಿಕ ಸಭೆ, ದೀಪೋತ್ಸವ ನಡೆಯಲಿದೆ. ಶ್ರೀ ಕ್ಷೇತ್ರ ಕುಂದಾದ್ರಿ ವಾರ್ಷಿಕ ಜಾತ್ರ ಮಹೋತ್ಸವ ಇದು ಕುಂದಾದ್ರಿ ಬೆಟ್ಟದ ಸುಂದರ ಮನಮೋಹಕ ದೃಶ್ಯ. ಈ ಬೆಟ್ಟವು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿದೆ. ತೀರ್ಥಹಳ್ಳಿಯಿಂದ ಆಗೊಂಬೆ ಕಡೆಗೆ ಪಯಣಿಸಿದಾಗ ಗುಡ್ಡಕೇರಿ ಗ್ರಾಮಕ್ಕೆ ತಲುಪುತ್ತೇವೆ. ಅಲ್ಲಿಂದ 9ಕಿ. ಮೀ ಮುಂದುವರಿದರೆ ಕುಂದಾದ್ರಿ ಬೆಟ್ಟವನ್ನು ಸೇರುತ್ತೇವೆ. ಈ ಬೆಟ್ಟವು 1343ಮೀ ಎತ್ತರವಿದ್ದು, ಬೆಟ್ಟವನ್ನು ತಲುಪಲು ಡಾಂಬರು ರಸ್ತೆಯಿದೆ. ಕಾಲುನಡಿಗೆಯಲ್ಲಿ ಬೆಟ್ಟದೆಡೆ ಬರುವವರಿಗೆ ಬಹು ಹತ್ತಿರದ ಕಾಲುದಾರಿಯೂ ಇದೆ. ಬೆಟ್ಟದ ಮೇಲೆ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿಯ ಬಸದಿ ಇದ್ದು, ಹತ್ತಿರದಲ್ಲಿ ಬೆಟ್ಟದ ಕಲ್ಲಿನಲ್ಲಿಯೇ ಕೊರೆದ ವರ್ಷ ಪೂರ್ತಿ ನೀರು ತುಂಬಿರುವ ಕೆರೆಯೂ ಇದೆ. ಇವುಗಳನ್ನು ನೋಡಲೆಂದೇ ಪ್ರತಿ ವರ್ಷ ಸಾವಿರಾರು ಪ್ರವಾಸಿಗರು, ಭಕ್ತರು ಭೇಟಿ ನೀಡುತ್ತಾರೆ. ಇದು ಚಾರಣ ಪ್ರಿಯ ಸ್ಥಳವೂ ಹೌದು. ಬೆಟ್ಟದ ಮೇಲಿಂದ್ದ ಕಾಣುವ ಪ್ರಕೃತಿ ಸೌಂದರ್ಯ ಕಣ್ಣಿಗೆ ಬಹು ಹಬ್ಬವಾಗುತ್ತದೆ. ಮನಸ್ಸಿಗೆ ಮುದವಾಗುತ್ತದೆ. ಸೂರ್ಯೋದಯ ಮತ್ತು ಸೂರ್ಯಾಸ್ತ ನೋಡುವುದಕ್ಕೆ ವಿಸ್ಮಯವೋ ವಿಸ್ಮಯ. ಜೈನ ಮುನಿ ಶ್ರೇಷ್ಠರಾದ ಕುಂದಕುಂದಾಚಾರ್ಯರ ತಪೋ ಭೂಮಿಯಾಗಿದ್ದರಿಂದ ಈ ಬೆಟ್ಟಕ್ಕೆ ಕುಂದಾದ್ರಿ ಬೆಟ್ಟ ಎಂಬ ಹೆಸರು ಬಂದಿದೆ ಎನ್ನಲಾಗಿದೆ.