Mon, Jan 6, 2025

Mon, Jan 6, 2025


ಧರ್ಮಸ್ಥಳ: ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ೫೭ನೇ ವರ್ಧಂತ್ಯುತ್ಸವ


Logo

Published Date: 25-Oct-2024

ಉಜಿರೆ: ರಾಷ್ಟ್ರಕವಿ ಕುವೆಂಪು ಸಾರಿದ ವಿಶ್ವಮಾನವ ಸಂದೇಶವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಕ್ಷರಶಃ ಸೇವಾ ರೂಪದಲ್ಲಿ ಮಾಡಿ ತೋರಿಸಿದ್ದಾರೆ. ಜೈನಧರ್ಮಕ್ಕೂ ಹಿಂದೂ ಧರ್ಮಕ್ಕೂ ಅವಿನಾಭಾವ ಸಂಬಂಧವಿದ್ದು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ – ಎಲ್ಲಾ ರಂಗಗಳಲ್ಲಿಯೂ ಹೆಗ್ಗಡೆಯವರು ಹೊಗಳಿಕೆಗೆ ಹಿಗ್ಗದೆ, ಟೀಕೆಗಳಿಗೆ ಅಂಜದೆ, ಸ್ಥಿತಪ್ರಜ್ಞೆಯಿಂದ ಎಲ್ಲಾ ಮಠ-ಮಂದಿರಗಳಿಗೂ ಮಾದರಿಯಾಗಿ ಅನವರತ ಸೇವೆ ಮಾಡಿ ಧರ್ಮಸ್ಥಳದ ಕೀರ್ತಿಯನ್ನು ಜಾಗತಿಕ ಮಟ್ಟಕ್ಕೆ ಪಸರಿಸಿದ್ದಾರೆ ಎಂದು ಮೂಡಬಿದ್ರೆ ಜೈನಮಠದ ಪೂಜ್ಯ ಚಾರುಕೀರ್ತಿಭಟ್ಟಾರಕ ಸ್ವಾಮೀಜಿ ಹೇಳಿದರು. ಅವರು ಗುರುವಾರ ಧರ್ಮಸ್ಥಳದಲ್ಲಿ ಮಹೋತ್ಸವ ಸಭಾಭವನದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ೫೭ನೆ ವರ್ಧಂತ್ಯುತ್ಸವ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ಜನರು ರಾಜಕಾರಣಿಗಳಿಗಿಂತಲೂ ಹೆಚ್ಚು ಧರ್ಮಾಧಿಕಾರಿಗಳಾದ ಹೆಗ್ಗಡೆಯವರಿಂದ ನಿರೀಕ್ಷೆ ಮಾಡುತ್ತಾರೆ. ಮಾತು ಬಿಡ ಮಂಜುನಾಥ ಎಂಬ ಮಾತಿನಿಂತೆ ಚತುರ್ವಿಧ ದಾನ ಪರಂಪರೆಯೊಂದಿಗೆ ಅರಿಷಡ್ವರ್ಗಗಳನ್ನು ಗೆದ್ದು ಬಹುಮುಖಿ ಸಮಾಜಸೇವಾ ಕಾರ್ಯಗಳಿಂದ ಇಂದು ಹೆಗ್ಗಡೆಯವರು ವಿಶ್ವ ಮಾನವರಾಗಿದ್ದಾರೆ ಎಂದು ಸ್ವಾಮೀಜಿ ಶ್ಲಾಘಿಸಿ ಅಭಿನಂದಿಸಿದರು. ಸರ್ವಜನಾಂಗದ ಶಾಂತಿಯ ತೋಟ ಧರ್ಮಸ್ಥಳ: ಪೂಜ್ಯ ಡಿ. ವೀರೇಂದ್ರ ಹೆಗ್ಗಡೆಯವರ ಪ್ರತಿಮೆ ಅನಾವರಣ ಮಾಡಿ ಶುಭಾಶಂಸನೆ ಮಾಡಿದ ಬೆಂಗಳೂರು ಗ್ರಾಮಾಂತರದ ಸಂಸದ ಡಾ. ಸಿ.ಎನ್. ಮಂಜುನಾಥ್ ಮಾತನಾಡಿ, ದೈಹಿಕ ಆರೋಗ್ಯಕ್ಕಿಂತಲೂ ಮಾನಸಿಕಆರೋಗ್ಯ ಮುಖ್ಯವಾದುದರಿಂದ ಸರ್ವಧರ್ಮೀಯರಿಗೂ ಶ್ರದ್ಧಾ-ಭಕ್ತಿಯ ಕೇಂದ್ರವಾದ ಧರ್ಮಸ್ಥಳವು ಮಾನಸಿಕ ಶಾಂತಿ-ನೆಮ್ಮದಿ ನೀಡುವ ಸರ್ವಜನಾಂಗದ ಶಾಂತಿಯ ತೋಟವಾಗಿದೆ ಎಂದು ಬಣ್ಣಿಸಿದರು. ಲಕ್ಷಾಂತರ ಮನೆಗಳಲ್ಲಿ ಇಂದು ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ, ಉಚಿತ ಸಾಮೂಹಿಕ ವಿವಾಹ, ಸ್ವ-ಉದ್ಯೋಗ ತರಬೇತಿ ಕೇಂದ್ರ ಇತ್ಯಾದಿ ಯೋಜನೆಗಳಿಂದ ಜನರು ಸಾರ್ಥಕ ಬದುಕನ್ನು ಕಟ್ಟಿಕೊಂಡು ಎಲ್ಲಾ ಮನೆಗಳಲ್ಲಿ ನಂದಾದೀಪದಂತೆ ಬೆಳಗುತ್ತಿದ್ದಾರೆ. ಯಾವುದೇ ವ್ಯಾಪಾರೀಕರಣದ ಭಾವನೆಯಿಲ್ಲದೆ ನಿಸ್ವಾರ್ಥ ಸೇವಾ ಮನೋಭಾವದಿಂದ ಆರೋಗ್ಯ ಶಿಸ್ತು, ಸಂಯಮ, ಉತ್ತಮ ಸಂಸ್ಕಾರ ಮೂಡಿಸಿರುವುದು ಸಮಾಜಕ್ಕೆ ಕೊಟ್ಟ ಅಮೂಲ್ಯ ಕೊಡುಗೆಯಾಗಿದೆ. ಹುಂಡಿಯ ಹಣವನ್ನು ಲೋಕಕಲ್ಯಾಣಕ್ಕಾಗಿ ಬಳಿಸಿದ ಏಕೈಕ ಕ್ಷೇತ್ರ ಧರ್ಮಸ್ಥಳ ಆಗಿದೆ ಎಂದು ಅವರು ಶ್ಲಾಘಿಸಿದರು. ಅನುದಾನಕ್ಕಿಂತ ಅನುಷ್ಠಾನ ಮುಖ್ಯ. ಅನುಷ್ಠಾನಕ್ಕಿಂತ ನಿರ್ವಹಣೆ ಮುಖ್ಯ. ಧರ್ಮಸ್ಥಳದ ಸಮಾಜಮುಖಿ ಸೇವಾಕಾರ್ಯಗಳಿಂದಾಗಿ ಇಂದು ಕೂಲಿಕಾರ್ಮಿಕರು ಮಾಲಿಕರಾಗಿದ್ದಾರೆ. ಪೂಜಾ ಕ್ಷೇತ್ರವನ್ನು ಸೇವಾ ಕ್ಷೇತ್ರವಾಗಿ ರೂಪಿಸಿದ ಹೆಗ್ಗಡೆಯವರು ದೈವತ್ವ ಮತ್ತು ಮಾನವೀಯತೆಯೊಂದಿಗೆ ಬಡವರ ಕಣ್ಣೀರು ಒರೆಸುವ ಕಾಯಕ ಮಾಡಿದ್ದಾರೆ. ದೃಷ್ಠಿ ಇದ್ದರೆ ಸಾಲದು, ದೂರದೃಷ್ಠಿ ಇರಬೇಕು. ಜಾಣ್ಮೆ ಇದ್ದರೆ ಸಾಲದು, ತಾಳ್ಮೆ ಇರಬೇಕು. ಸಂಪತ್ತಿನಲ್ಲಿ ಸರಳತೆ, ಅಧಿಕಾರದಲ್ಲಿ ಸೌಮ್ಯ ಸ್ವಭಾವ ಹಾಗೂ ಕೋಪದಲ್ಲಿ ಮೌನ ಇರಬೇಕು ಎಂದು ಅವರು ಹೇಳಿದರು. ಕಾಲ ಬದಲಾಗಿಲ್ಲ ಆದರೆ ಜನರ ಆಸೆ-ಆಕಾಂಕ್ಷೆಗಳು, ನಿರೀಕ್ಷೆಗಳು ಹೆಚ್ಚಾಗಿವೆ. ಶೇ. 75ರಷ್ಟು ಜನ ಇಂದು ಮದ್ಯಪಾನಕ್ಕೆ ಬಲಿಯಾಗಿ ಅಧಿಕಾರ, ಆರೋಗ್ಯ, ಸ್ಥಾನ-ಮಾನ ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಆದುದರಿಂದಲೇ ಕ್ಯಾನ್ಸರ್, ಮಧುಮೇಹ, ರಕ್ತದೊತ್ತಡದಂತಹ ಭೀಕರ ರೋಗಳಿಂದ ಎಳೆಯ ಪ್ರಾಯದವರೂ ಸಾವನ್ನಪ್ಪುತ್ತಿರುವುದು ಖೇದಕರವಾಗಿದೆ ಎಂದರು. ಇನ್‌ಕಮ್ ಇದ್ದವರನ್ನು ಮಾತ್ರ ಇಂದು ವೆಲ್‌ಕಮ್ ಮಾಡುತ್ತಾರೆ. ಅಧಿಕ ಹಣ ಮತ್ತು ಸಂಚಾರಿ ದೂರವಾಣಿ ಬಳಕೆಯಿಂದ ಇಡೀ ಸಮಾಜವೇ ಹಾಳಾಗುತ್ತಿದೆ. ಆದರ್ಶ ವ್ಯಕ್ತಿತ್ವದಿಂದ ಮಾತ್ರ ನಮಗೆ ಗೌರವ ಸಿಗುತ್ತದೆ. ಧರ್ಮಸ್ಥಳವು ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಸಂಜೀವಿನಿಯಾಗಿದೆ ಎಂದು ಅವರು ಅಭಿಪಾಯಪಟ್ಟರು. ಜಪ, ತಪ, ಉಪವಾಸ, ಧ್ಯಾನ, ವಿಶ್ರಾಂತಿ, ಒಳ್ಳೆಯ ನಿದ್ರೆ, ದಯೆ, ಅನುಕಂಪ, ಕೃತಜ್ಞತೆ ಮೊದಲಾದ ಮಾನವೀಯ ಮೌಲ್ಯಗಳಿದ್ದಾಗ ಮನೆಯೇ ಶಾಂತಿ, ನೆಮ್ಮದಿಯ ಸಾಂತ್ವನ ಕೇಂದ್ರವಾಗುತ್ತದೆ ಎಂದು ಅವರು ಹೇಳಿದರು. ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಮಾತನಾಡಿ, ಹೆಗ್ಗಡೆಯವರು ಮಾಡುತ್ತಿರುವ ಬಹಮುಖಿ ಸಮಾಜಸೇವೆಗೆ ಅಭಿನಂದಿಸಿದರು. ಹೆಗ್ಗಡೆಯವರಿಂದ ನೂತನ ಯೋಜನೆಗಳ ಪ್ರಕಟ: ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಧರ್ಮಸ್ಥಳದಲ್ಲಿ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆ ಮಾಡಿ ಭಕ್ತಾದಿಗಳಿಗೆ ಅನೇಕ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು. ಇದೇ ನವೆಂಬರ್ 8ರಂದು ಧರ್ಮಸ್ಥಳದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಆರಾಮದಾಯಕ ಸರತಿ ಸಾಲಿನ ಸೌಲಭ್ಯವನ್ನು ಉದ್ಘಾಟಿಸಲಿದ್ದಾರೆ ಎಂದು ಪ್ರಕಟಿಸಿದರು. ಸೇವಾಕಾರ್ಯಗಳ ಮೂಲಕ ಜನರ ಹೃದಯ ಪರಿವರ್ತನೆಯ ಕಾರ್ಯಮಾಡಲಾಗುತ್ತದೆ. ತನ್ಮೂಲಕ ನವಚೈತನ್ಯದೊಂದಿಗೆ ಪರಿವರ್ತನೆ ಹಾಗೂ ಪ್ರಗತಿಯ ಹರಿಕಾರರನ್ನು ರೂಪಿಸಲಾಗುತ್ತದೆ. ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ದೇಶದಲ್ಲಿ ಇನ್ನೂ 120 ಹೊಸ ರುಡ್‌ಸೆಟ್ ಸಂಸ್ಥೆಗಳನ್ನು ಸದ್ಯದಲ್ಲಿಯೇ ಪ್ರಾರಂಭಿಸಲಾಗುವುದು ಎಂದು ಹೆಗ್ಗಡೆಯವರು ತಿಳಿಸಿದರು. ಹೇಮಾವತಿ ವಿ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್ ಮತ್ತು ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ ಸ್ವಾಗತಿಸಿದರು. ಪಟ್ಟಾಭಿಷೇಕ ವರ್ಧಂತ್ಯುತ್ಸವ ಸಮಿತಿ ಸಂಚಾಲಕ ಹಾಗೂ ದೇವಳ ಪಾರುಪತ್ಯಗಾರ್ ಲಕ್ಷ್ಮೀನಾರಾಯಣ ರಾವ್ ಧನ್ಯವಾದವಿತ್ತರು. ಅನ್ನಪೂರ್ಣ ಛತ್ರದ ಪ್ರಬಂಧಕ ಸುಬ್ರಹ್ಮಣ್ಯ ಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img