ಜೈನ ಧರ್ಮದ ನವರಾತ್ರಿ ಜೀವದಯಾಷ್ಟಮಿ ಆಚರಣೆ
Published Date: 04-Oct-2024 Link-Copied
ಜೈನ ಧರ್ಮದಲ್ಲಿ ಆಚರಿಸುವ ಹಬ್ಬಗಳು ಕೆಲವೊಂದು ರೀತಿಯಲ್ಲಿ ಭಿನ್ನವಾಗಿವೆ. ಹಬ್ಬಗಳ ಆಚರಣೆಯಲ್ಲಿ ಪ್ರಾದೇಶಿಕ ವ್ಯತ್ಯಾಸ ಇರಬಹುದು. ಆದರೆ ಉದ್ದೇಶ ಮತ್ತು ಸಾಫಲ್ಯತೆಯಲ್ಲಿ ಭಿನ್ನತೆ ಇಲ್ಲ. ಆಶ್ವೇಜ ಮಾಸದ ಶುಕ್ಲ ಪಾಡ್ಯದಿಂದ ದಶಮಿವರೆಗೆ ನವರಾತ್ರಿ ಆಚರಿಸಲಾಗುತಿದೆ.ಹೆಚ್ಚು ವಿಜೃಂಬರಣೆಯಿಲ್ಲದೆ ತಮ್ಮತಮ್ಮ ಕುಲದೇವಿಯರ ಬಸದಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಯಕ್ಷಿಣಿ ದೇವತೆಗಳನ್ನು ಷೋಡಶ ವಿಧಗಳಲ್ಲಿ ಅರ್ಚನೆ ಮಾಡಿ ಅಲಂಕೃತ ದೇವಿಯರನ್ನು ಪೂಜಿಸುವರು. ಜೈನರ 24 ತೀರ್ಥಂಕರರಿಗೂ ಯಕ್ಷ ಮತ್ತು ಯಕ್ಷಿಣಿಯರು ಇರುವರು. ತೀರ್ಥಂಕರರ ಬಲಭಾಗದಲ್ಲಿ ಇರುವುದೇ ಯಕ್ಷ,ಎಡಭಾಗದಲ್ಲಿ ಇರುವುದು ಯಕ್ಷಿಣಿಯರು. ತೀರ್ಥಂಕರರ ಪೂಜೆ ಮಾಡಿದರೆ ಇವರು ಫಲ ಕೊಡುವರು ಮತ್ತು ತೀರ್ಥಂಕರರ ಸೇವಕರೂ ಆಗಿರುವರು. ಆದರೆ ಜೈನ ಮುನಿಗಳು ಇವರನ್ನು ಪೂಜಿಸುವುದಿಲ್ಲ. 2024ನೇ ಅಕ್ಟೋಬರ್ 3ರಂದು (ಆಶ್ವೀಜ ಶುಕ್ಲ ಪಾಡ್ಯ) ಮೊದಲನೇ ತೀರ್ಥಂಕರ ಶ್ರೀಆದಿನಾಥರ ಯಕ್ಷಿಣಿ ಶ್ರೀಚಕ್ರೇಶ್ವರಿ ದೇವಿಯನ್ನು ಪೂಜಿಸುವರು. ಬಿದಿಗೆಯಂದು (22ನೇ ತೀರ್ಥಂಕರ) ಶ್ರೀ ನೇಮಿನಾಥ ಸ್ವಾಮಿಯವರ ಯಕ್ಷಿಣಿ ಶ್ರೀ ಕೂಷ್ಮಾಂಡಿನಿ ದೇವಿ ಅಲಂಕಾರ ಮಾಡಿ ಷೋಡಷೋಪಚಾರಗಳಿಂದ ಪೂಜಿಸುವರು. ತದಿಗೆಯಂದು (11 ನೇ ತೀರ್ಥಂಕರ) ಶ್ರೀ ಶ್ರೇಯಾಂಸನಾಥ ಸ್ವಾಮಿಯವರ ಯಕ್ಷಿಣಿ ಶ್ರೀಗೌರಿ ದೇವಿಯನ್ನು ಪೂಜಿಸುವರು. ಚೌತಿಯಂದು (9ನೇ ತೀರ್ಥಂಕರ) ಶ್ರೀಪುಷ್ಪದಂತ ಸ್ವಾಮಿಯವರ ಯಕ್ಷಿಣಿ ಶ್ರೀಮಹಾಂಕಾಳಿ ದೇವಿಯನ್ನು ಪೂಜಿಸುವರು. ಪಂಚಮಿಯಂದು (14 ನೇ ತೀರ್ಥಂಕರ) ಶ್ರೀಅನಂತನಾಥ ಸ್ವಾಮಿಯವರ ಯಕ್ಷಿಣಿ ಅನಂತಮತಿ ದೇವಿಯನ್ನು ಪೂಜೆಮಾಡುವರು. ಷಷ್ಠಿಯಂದು(8 ನೇ ತೀರ್ಥಂಕರ) ಶ್ರೀಚಂದ್ರಪ್ರಭ ಸ್ವಾಮಿಯವರ ಯಕ್ಷಿಣಿ ಶ್ರೀಜ್ವಾಲಾಮಾಲಿನಿ ದೇವಿಯವರನ್ನು ಪೂಜಿಸುವರು. ಸಪ್ತಮಿಯಂದು (23ನೇ ತೀರ್ಥಂಕರ) ಶ್ರೀ ಪಾರ್ಶ್ವನಾಥ ಸ್ವಾಮಿಯವರ ಯಕ್ಷಿಣಿಶ್ರೀಪದ್ಮಾವತಿ ದೇವಿಯನ್ನು ಪೂಜಿಸುವರು. ಅಷ್ಟಮಿಯಂದು ಅಂದರೆ ಅಕ್ಟೋಬರ್ 11ರಂದು ತೀರ್ಥಂಕರ ಶ್ರೀಮುನಿಸುವ್ರತ ಸ್ವಾಮಿಯವರ ಯಕ್ಷಿಣಿ ಶ್ರೀಬಹುರೂಪಿಣಿ ದೇವಿಯನ್ನು ಪೂಜಿಸುವರು.ನವಮಿಯಂದು (24 ನೇ ತೀರ್ಥಂಕರ) ಶ್ರೀಮಹಾವೀರ ಸ್ವಾಮಿಯವರ ಯಕ್ಷಿಣಿ ಶ್ರೀಸಿದ್ದಾಯಿನಿ ದೇವಿಯನ್ನು ಪೂಜಿಸುವರು. ನವರಾತ್ರಿ ಕೊನೇಯ ದಿನ ದಶಮಿಯಂದು (10ನೇ ತೀರ್ಥಂಕರ) ಶ್ರೀ ಶೀತಲನಾಥಸ್ವಾಮಿಯಕ್ಷಿಣಿ ಶ್ರೀಸರಸ್ವತಿ ದೇವಿ ಪೂಜೆ ಮಾಡುತ್ತಾರೆ. ಮೊದಲನೇ ತೀರ್ಥಂಕರ ಶ್ರೀ ಆಧಿನಾಥರ ಪುತ್ರ ಭರತೇಶ ಚಕ್ರವರ್ತಿ ತನ್ನ ದಿಗ್ವಿಜಯಕ್ಕೆ ಮೊದಲು, ಆಯುಧಾಗಾರದಲ್ಲಿ ಹುಟ್ಟಿದ ಚಕ್ರರತ್ನ ಸಹಿತ ಇತರ ಆಯುಧಗಳ ವಿಶೇಷ ಪೂಜೆ ಮಾಡಿದ ದಿನವನ್ನು ನೆನೆದು ಮಾಡುವ ಹಬ್ಬದಾಚಾರಣೆವಾಗಿದೆ. ಅಲ್ಲದೆ ಈ ಅವಧಿಯಲ್ಲಿ ಅಶ್ವಯುಜ ಶುದ್ಧ ಅಷ್ಟಮಿಯಂದು ಆಚರಿಸುವ 'ಜೀವದಯಾಷ್ಟಮಿ' ಬಹಳ ಮುಖ್ಯವಾದ ಪವಿತ್ರ ಹಬ್ಬ. ಸಂಕಲ್ಪ ಹಿಂಸೆಯಿಂದಾಗುವ ಅನಾಹುತಗಳನ್ನು ನಿರೂಪಿಸುವ ಹಬ್ಬವಿದು. ಹಿಟ್ಟಿನ ಕೋಳಿಯನ್ನು ಬಲಿ ಕೊಡಲು ಹೋದ ಯಶೋಧರ ಹಿಂಸೆಗೆ ಒಳಗಾಗಿ ಏಳೇಳು ಭವಗಳಲ್ಲಿ ತೊಳಲಾಡಿದ 'ಯಶೋಧರ ಚರಿತ್ರೆ'ಯ ಹಿನ್ನೆಲೆಯಲ್ಲಿ ಈ ಜೀವದಯಾಷ್ಟಮಿಗೆ ಬಹಳ ಮಹತ್ವವಿದೆ. ಜೈನ ಧರ್ಮದ ಅಹಿಂಸೆಯ ಮಹತ್ವವನ್ನು ಎತ್ತಿ ಹಿಡಿದ ಹಬ್ಬವಿದು. ಜೈನರೆಲ್ಲರೂ ಬಹು ಶ್ರದ್ಧಾ ಭಕ್ತಿಗಳಿಂದ ಶ್ರವಣಬೆಳಗೊಳ ಮೂಡಬಿದ್ರಿ , ಕಾರ್ಕಳ, ವೇಣೂರು, ವರಂಗ, ಹುಂಬುಜ, ಎನ್.ಆರ್.ಪುರ ಮುಂತಾದ ಪುಣ್ಯಕ್ಷೇತ್ರಗಳಿಗೆ ತೆರಳಿ ಜೈನಬಸದಿಗಳ ದರ್ಶನ, ಜಿನಪೂಜೆ ಇತ್ಯಾದಿ ಪುಣ್ಯ ಕಾರ್ಯಗಳ ಮೂಲಕ ಹಿಂಸಾರಹಿತ ದಿನವಾಗಿ ಈ ಹಬ್ಬವನ್ನು ಆಚರಿಸುತ್ತಾರೆ. -ಪ್ರೊ.ಅಕ್ಷಯ ಕುಮಾರ್, ಮಳಲಿ.