ಧರ್ಮಸ್ಥಳದಲ್ಲಿ 26ನೆ ವರ್ಷದ ಭಜನಾ ತರಬೇತಿ: ಸಮಾರೋಪ ಸಮಾರಂಭ
Published Date: 29-Sep-2024 Link-Copied
ಉಜಿರೆ: ಆಡು ಮುಟ್ಟದ ಸೊಪ್ಪಿಲ್ಲ, ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾಡದ ಸೇವೆ ಇಲ್ಲ. ಗ್ರಾಮಾಭಿವೃದ್ಧಿ, ಆರೋಗ್ಯ, ಶಿಕ್ಷಣ, ದೇವಸ್ಥಾನಗಳ ಜೀರ್ಣೋದ್ಧಾರ, ಶುದ್ಧನೀರಿನ ಘಟಕಗಳು, ಕೆರೆಗಳ ಪುನಶ್ಚೇತನ, ಮಹಿಳಾ ಸಬಲೀಕರಣ, ಜನಜಾಗೃತಿ ವೇದಿಕೆ ಮೂಲಕ ವ್ಯಸನಮುಕ್ತ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಇತ್ಯಾದಿ ಸೇವಾಕಾರ್ಯಗಳು ವಿಶ್ವಮಾನ್ಯವಾಗಿವೆ ಎಂದು ಕುಂದಗೋಳ ಕಲ್ಯಾಣಪುರ ಮಠದ ಪೂಜ್ಯ ಬಸವಣ್ಣಜ್ಜನವರು ಹೇಳಿದರು. ಅವರು ಭಾನುವಾರ ಧರ್ಮಸ್ಥಳದಲ್ಲಿ 26ನೆ ವರ್ಷದ ಭಜನಾ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಭಜನಾ ಸಂಸ್ಕ್ರತಿಯಿಂದ ನಮ್ಮ ಸನಾತನ ಧರ್ಮ ಮತ್ತು ಸಂಸ್ಕ್ರತಿಯ ರಕ್ಷಣೆ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ನಶಿಸಿ ಹೋಗುತ್ತಿರುವ ಭಜನಾ ಸಂಸ್ಕ್ರತಿಗೆ ನವಚೈತನ್ಯದೊಂದಿಗೆ ಜೀವಕಳೆ ನೀಡಿ ರಾಗ, ತಾಳ, ಲಯಬದ್ಧವಾಗಿ ಶಿಸ್ತಿನಿಂದ ಹೇಗೆ ಭಜನೆ ಮಾಡಬೇಕೆಂದು ಅವರು ಕಳೆದ 25 ವರ್ಷಗಳಿಂದ ತರಬೇತಿ ನೀಡಿ ವಿಶಿಷ್ಟ ಭಜನಾಪಟುಗಳನ್ನು ರೂಪಿಸಿದ್ದಾರೆ. ಇವರು ಧರ್ಮ ಮತ್ತು ಸಂಸ್ಕ್ರತಿಯ ಸಂರಕ್ಷಣೆಯ ರೂವಾರಿಗಳಾಗಿ ಆರೋಗ್ಯಪೂರ್ಣ ಸಮಾಜ ರೂಪಿಸಬೇಕೆಂದು ಸ್ವಾಮೀಜಿ ಸಲಹೆ ನೀಡಿದರು. ಸಂಸದ ಬ್ರಿಜೇಶ್ ಚೌಟ ಶುಭಾಶಂಸನೆ ಮಾಡಿ, ಭಜನೆಯಿಂದ ನಮ್ಮ ಭವ್ಯ ಪರಂಪರೆ ಮತ್ತು ಸಂಸ್ಕ್ರತಿಯನ್ನು ರಕ್ಷಿಸಬಹುದು. ತರಬೇತಿ ಪಡೆದ ಭಜನಾಪಟುಗಳು ಅವರವರ ಊರಿನಲ್ಲಿ ಭಜನಾ ಸಂಸ್ಕ್ರತಿಯನ್ನು ಮುಂದುವರಿಸಬೇಕೆಂದು ಸಲಹೆ ನೀಡಿದರು. ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹನಾಯಕ್ ಭಾಷಣದ ಬದಲು ಭಜನೆಯೊಂದನ್ನು ಸುಶ್ರಾವ್ಯವಾಗಿ ಹಾಡಿದರು. ಶಾಸಕ ಹರೀಶ್ ಪೂಂಜ ಮಾತನಾಡಿ, ಮಕ್ಕಳಲ್ಲಿ ಮತ್ತು ಯುವಜನತೆಯಲ್ಲಿ ಭಜನಾ ಸಂಸ್ಕ್ರತಿಯನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು. ಮುಂದೆ ತಾನು ಭಾಗವಹಿಸುವ ಎಲ್ಲಾ ಸಭೆ-ಸಮಾರಂಭಗಳಲ್ಲಿ ಭಜನೆಯ ಮಹತ್ವದ ಬಗ್ಗೆಯೂ ಉಲ್ಲೇಖಿಸುವುದಾಗಿ ತಿಳಿಸಿದರು. ರಾಸಾಯನಿಕಗಳನ್ನು ಬಳಸಿ ಬೆಳೆಸಿದ ವಿಷಪೂರಿತ ಆಹಾರಗಳ ಸೇವನೆಯಿಂದ ನಮ್ಮ ಆರೋಗ್ಯಕ್ಕೆ ಹಾನಿಯಾಗುತ್ತಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಕ್ಯಾನ್ಸರ್ ರೋಗಿಗಳು ಇರುವ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದರು. ಸಾಧ್ಯವಾದಷ್ಟು ನಾವು ಹೊಲ, ತೋಟಗಳಲ್ಲಿ ಭತ್ತ, ತರಕಾರಿಗಳನ್ನು ಬೆಳೆಸಿ ಬಳಸಬೇಕೆಂದು ಅವರು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಎಲ್ಲರೂ ಅಂತರಂಗ ಮತ್ತು ಬಹಿರಂಗ ಶುದ್ಧಿಯೊಂದಿಗೆ ಭಜನೆ ಮಾಡಿದಾಗ ಆತ್ಮಶುದ್ಧಿಯಾಗುತ್ತದೆ. ಮಾನಸಿಕ ಸುಖ-ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಹೇಳಿದರು. ಭಜನೆ ಮಾಡುವವರು ಎಂದೂ ದುಶ್ಚಟಗಳಿಗೆ ಬಲಿಯಾಗದೆ ಆದರ್ಶ ಹಾಗೂ ಸಾರ್ಥಕ ಜೀವನ ನಡೆಸಬೇಕೆಂದು ಹೇಳಿ ಶುಭ ಹಾರೈಸಿದರು. ಶಿಬಿರಾರ್ಥಿಗಳ ಪರವಾಗಿ ಉಮೇಶ್ ಶೆಟ್ಟಿ ಅನಿಸಿಕೆ ವ್ಯಕ್ತಪಡಿಸಿದರು. ಭಜನಾಕಮ್ಮಟದ ಕಾರ್ಯದರ್ಶಿ ಎ.ವಿ.ಶೆಟ್ಟಿ ವರದಿ ಸಾದರಪಡಿಸಿದರು. ಮಾಣಿಲದ ಮೋಹನದಾಸ ಸ್ವಾಮೀಜಿ, ಹೇಮಾವತಿ ವೀ. ಹೆಗ್ಗಡೆಯವರು, ಡಿ. ಸುರೇಂದ್ರ ಕುಮಾರ್ ಮತ್ತು ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು. ಭಜನಾಕಮ್ಮಟದ ಸಂಚಾಲಕ ಸುಬ್ರಹ್ಮಣ್ಯಪ್ರಸಾದ್ ಸ್ವಾಗತಿಸಿದರು. ಧನ್ಯಕುಮಾರ್ ಧನ್ಯವಾದವಿತ್ತರು. ಶ್ರೀನಿವಾಸ ರಾವ್ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು.