ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ 26ನೇ ವರ್ಷದ ಭಜನಾ ಕಮ್ಮಟದ 3ನೇ ದಿನದ ಕಾರ್ಯಕ್ರಮ


Logo

Published Date: 24-Sep-2024 Link-Copied

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ 26ನೇ ವರ್ಷದ ಭಜನಾ ಕಮ್ಮಟದ 3ನೇ ದಿನದ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಣಿಪಾಲದ ಸಂಗೀತ ವಿದುಷಿ ಉಷಾ ಹೆಬ್ಬಾರ್ ಹಾಗೂ ಮಣಿಪಾಲದ ಆಕಾಶವಾಣಿ ‘ಎ’ ಗ್ರೇಡ್ ಕಲಾವಿದರಾದ ಕೆ. ಆರ್. ರಾಘವೇಂದ್ರ ಭಜನಾ ತರಬೇತಿ ನೀಡಿದರು. ಕಮ್ಮಟಕ್ಕೆ ಆಗಮಿಸಿದ ಪೂಜ್ಯನೀಯ ಡಿ. ವೀರೇಂದ್ರ ಹೆಗ್ಗಡೆಯವರು, ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರು, ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಉಪಸ್ಥಿತರಿದ್ದು ಶಿಬಿರಾರ್ಥಿಗಳನ್ನು ಪ್ರೇರೇಪಿಸಿದರು. ಅಶೋಕ್ ಭಟ್ ಭಜನಾ ತರಬೇತಿ ಕಮ್ಮಟದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು. ಉಪನ್ಯಾಸದಲ್ಲಿ ಭಗವಂತ ಸರ್ವಾಂತರ್ಯಾಮಿಯಾಗಿದ್ದರೂ, ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದ ಭಾರತದಲ್ಲಿ ದೇವನೊಬ್ಬ ನಾಮ ಹಲವು ಎಂಬಂತೆ ನಮ್ಮ ನಂಬಿಕೆ-ನಡವಳಿಕೆಗಳು, ಆಚಾರ-ವಿಚಾರಗಳು, ಪೂಜಾವಿಧಾನ, ಮಂತ್ರ - ತಂತ್ರ – ಎಲ್ಲವೂ ವೈವಿಧ್ಯಮಯವಾಗಿದೆ. ಭಗವಂತನ ಅನುಗ್ರಹಕ್ಕೆ ಪಾತ್ರರಾಗಲು ಅತ್ಯಂತ ಸರಳ ಹಾಗೂ ಸುಲಭ ಮಾಧ್ಯಮ ಭಜನೆ ಆಗಿದೆ. ಭಜನಾಮಂದಿರಗಳು ಧರ್ಮ ಮತ್ತು ಸಂಸ್ಕೃತಿಯ ಪ್ರಭಾವನೆಯೊಂದಿಗೆ ಧಾರ್ಮಿಕ ಚಿಂತನ-ಮಂಥನ, ಸತ್ಸಂಗ ಹಾಗೂ ಸಾಮೂಹಿಕ ಆಚರಣೆಗಳ ಕೇಂದ್ರಗಳಾಗಬೇಕು. ಭಜನೆ ಜನತಾ ವೇದವಾಗಿದ್ದು ಮನ, ವಚನ, ಕಾಯದಿಂದ ಪರಿಶುದ್ಧರಾಗಿ ಶ್ರದ್ಧಾ-ಭಕ್ತಿಯಿಂದ ಭಜನೆ ಮಾಡಿದರೆ ಪರಮಾತ್ಮನ ಸಾಕ್ಷಾತ್ಕಾರ ಸಾಧ್ಯವಾಗುತ್ತದೆ. ಭಜನೆಯು ಭಕ್ತಿಯ ಪ್ರಧಾನ ಸಾಧನವಾಗಿದ್ದು ಶಿಸ್ತುಬದ್ಧವಾಗಿ ರಾಗ, ತಾಳ, ಲಯಬದ್ಧವಾಗಿ ಭಜನೆ ಹಾಡಲು ಕಲಿಸುವುದೇ ಭಜನಾ ತರಬೇತಿಯ ಉದ್ದೇಶವಾಗಿದೆ. ತನ್ಮೂಲಕ ಮುಂದಿನ ಜನಾಂಗಕ್ಕೆ ನಮ್ಮ ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಅರಿವು, ಜಾಗೃತಿ ಮೂಡಿಸಬೇಕು. ಜನ್ಮದಿನಾಚರಣೆ, ಮದುವೆಯ ಬೆಳ್ಳಿಹಬ್ಬ, ಸುವರ್ಣ ಮಹೋತ್ಸವ, ಮಗುವಿನ ನಾಮಕರಣ ಮುಂತಾದ ಕಾರ್ಯಕ್ರಮಗಳನ್ನು ಭಜನಾಮಂದಿರಗಳಲ್ಲಿ ಮಾಡಿದರೆ ಸಮಾಜದ ಸಂಘಟನೆ ಮತ್ತು ಬಲವರ್ಧನೆಯೂ ಆಗುತ್ತದೆ ಎಂದು ಅವರು ಹೇಳಿದರು. ಭಜನೆಯ ಮೂಲಕ ಧಾರ್ಮಿಕ ಅಂತ್ಯೋದಯದಿಂದ ಧಾರ್ಮಿಕ ಸರ್ವೋದಯವಾಗಬೇಕು. ಭಜನಾಪಟುಗಳೆಲ್ಲ ಧಾರ್ಮಿಕಯೋಧರಾಗಿ, ಧರ್ಮ ಮತ್ತು ಸಂಸ್ಕೃತಿಯ ವಕ್ತಾರರಾಗಬೇಕು, ರಾಯಭಾರಿಗಳಾಗಬೇಕು ಎಂದು ಎಂದು ಹವ್ಯಾಸಿ ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ ಹೇಳಿದರು. ರಂಗಶಿವ ಕಲಾಬಳಗ, ಧರ್ಮಸ್ಥಳ ಇವರಿಂದ ರಂಗಗೀತೆ ಹಾಗೂ ವಿವಿಧ ಗೀತೆಗಳ ಪ್ರಾತ್ಯಕ್ಷಿಕೆ ನಡೆಯಿತು. ಯೋಗ ತರಬೇತಿಯನ್ನು ಡಾ. ಐ. ಶಶಿಕಾಂತ್ ಜೈನ್ ನಡೆಸಿಕೊಟ್ಟರು. ಭಜನಾ ಕಮ್ಮಟದ ರಾಜ್ಯ ಸಂಚಾಲಕರಾದ ಸುಬ್ರಹ್ಮಣ್ಯ ಪ್ರಸಾದ್, ಕಾರ್ಯದರ್ಶಿಗಳಾದ ಎ. ವೀರು ಶೆಟ್ಟಿ, ಕೋಶಾಧಿಕಾರಿ ಧನ್ಯಕುಮಾರ್, ಸದಸ್ಯರಾದ ಶ್ರೀನಿವಾಸರಾವ್, ರತ್ನವರ್ಮ ಜೈನ್‌ರವರು ದಿನದ ಕಾರ್ಯಕ್ರಮವನ್ನು ಸಂಘಟಿಸಿದರು, ಶ್ರೀಜಾ ಕಾರ್ಯಕ್ರಮ ನಿರೂಪಿಸಿದರು. ಭಜನಾ ಪರಿಷತ್ ಅಧ್ಯಕ್ಷರಾದ ಚಂದ್ರಶೇಖರ ಸಾಲ್ಯಾನ್, ಉಪಾಧ್ಯಕ್ಷರಾದ ರಾಜೇಂದ್ರ ಕುಮಾರ್ ಸದಸ್ಯರಾದ ವಸಂತ್ ಭಟ್, ಮಹಾವೀರ ಅಜ್ರಿ, ಸೀತಾರಾಮ ತೋಳ್ಪಾಡಿತ್ತಾಯ, ಪದ್ಮರಾಜ್ ಜೈನ್ ಸಹಕರಿಸಿದರು. ಕುಣಿತ ಭಜನೆ ತರಬೇತಿಯನ್ನು ಸಂದೇಶ, ವಿನ್ಯಾಸ್, ನಾಗೇಶ್ ಹಾಗೂ ಚೈತ್ರ ನಡೆಸಿಕೊಟ್ಟರು. ಸಮನ್ವಯ ಅಧಿಕಾರಿಗಳಾದ ರಾಘವೇಂದ್ರ ಮತ್ತು ಸಂತೋಷ್ ಪಿ. ಕರ್ತವ್ಯ ನಿರ್ವಹಿಸಿದರು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img