ತುಳು ನಾಡಿನ ಭವ್ಯ ಪರಂಪರೆಗೆ ಜೈನರ ಕೊಡುಗೆ ಅಪಾರ


Logo

Published Date: 13-Sep-2024 Link-Copied

ಕರ್ನಾಟಕ ರಾಜ್ಯದಲ್ಲಿರುವ ತುಳುನಾಡು ಭವ್ಯವಾದ ಪರಂಪರೆ, ಸಂಸ್ಕೃತಿ, ಆಚರಣೆಗಳು ಮುಂತಾದ ಮಹೋನ್ನತ ಉದಾತ್ತ ಧ್ಯೇಯಗಳನ್ನು ಹೊಂದಿರುವ ಬೀಡಾಗಿದೆ. ಇಲ್ಲಿ ಸರ್ವಧರ್ಮಗಳು ಸಹೋದರತೆಯ ಪಡಿಯಚ್ಚಿನಲ್ಲಿ ಬಾಳಿ ಬದುಕುವ ಪರಿಯನ್ನು ನೋಡುವ ಸೊಗಸೇ ಅನನ್ಯವಾದದ್ದು. ಆದರೆ ಕೆಲವು ರಾಜಕೀಯ ಹಾಗೂ ಕೊಳಕು ಮನಸ್ಸುಗಳ ಚಿತಾವಣೆಯಿಂದಾಗುವ ಸಾಮರಸ್ಯದ ಧಕ್ಕೆ ಅತ್ಯಲ್ಪವಾದರೂ ಕೆಲವೊಮ್ಮೆ ಗಂಭೀರವಾಗಿ ಬೂದಿ ಮೆಚ್ಚಿದ ಕೆಂಡದಂತೆ ಕಂಡರೂ ತುಳುನಾಡಿನ ಭವ್ಯತೆಗೆ ಕೊಂಕಿಲ್ಲ ಎಂಬುದು ಅಷ್ಟೇ ದಿಟ. ಇಲ್ಲಿ ಬಸದಿಗಳು, ದೇವಸ್ಥಾನಗಳು, ಮಸೀದಿಗಳು, ಚರ್ಚುಗಳು, ಭೂತಸ್ಥಾನಗಳು, ನಾಗಾಲಯಗಳು ಈ ಮಣ್ಣಿನ ಬಾಂಧವ್ಯದ ಸೊಗಡಿನ ಘಮಲನ್ನು ವಿಶ್ವದಾದ್ಯಂತ ಪಸರಿಸುತ್ತಿದೆ. ಮೊದಲೇ ಹೇಳಿದಂತೆ ಅಲ್ಲೊಂದು ಇಲ್ಲೊಂದು ಪ್ರಕರಣಗಳು ಪರಸ್ಪರರ ಸಾಮರಸ್ಯಕ್ಕೆ ಧಕ್ಕೆ ತರುವ ಕೆಲಸವನ್ನು ಮಾಡುತ್ತಿವೆ. ಈ ವಿಚಾರಗಳು ಮೋಲ್ನೋಟಕ್ಕೆ ವಿಜ್ರಂಭಿಸುವಂತೆ ಕಂಡರೂ ತುಳುವರ ಅಸಾಮಾನ್ಯ ಸಾಮರಸ್ಯವನ್ನು ಹಾಳುಗೆಡವಲು ಸಾಧ್ಯವೇ ಇಲ್ಲ ಎಬುದು ತುಳುನಾಡಿನ ಚರಿತ್ರೆಯ ಪುಟಗಳಿಂದ ತಿಳಿದು ಬರುತ್ತದೆ. ತುಳುನಾಡಿನ ಇತಿಹಾಸ , ವರ್ತಮಾನದಲ್ಲಿಯೇ ಆಗಲಿ ಜೈನರು ನೀಡಿರುವ ಕೊಡುಗೆಯ ಮಹಾಪೂರವೇ ದಾಖಲಾಗಿದೆ. ಸಾಮರಸ್ಯದ ಬದುಕಿಗೆ ಜೈನರಸರು ನೀಡಿದ ಕೊಡುಗೆಯ ಉಲ್ಲೇಖ ಚರಿತ್ರಾರ್ಹವಾದದ್ದು. ಭಾರತದ ಇತಿಹಾಸದಲ್ಲಿ ರಾಜಮಹಾರಾಜರುಗಳು ರಕ್ತಸಿಕ್ತ ಚರಿತ್ರೆಯನ್ನು ಹೊಂದಿದ್ದರೆ ತುಳುನಾಡಿನ ಜೈನರಸರು ಇದಕ್ಕೆ ಅಪವಾದವಾಗಿದ್ದಾರೆ. ಬಸದಿಗಳು, ದೇವಸ್ಥಾನಗಳು , ಮಸೀದಿಗಳು, ಚರ್ಚುಗಳು, ಭೂತಾಲಯ, ನಾಗಾಲಯಗಳು ಜೈನರ ಕೊಡುಗೆಯನ್ನು ಸಾರುತ್ತಾ ಗತ ಇತಿಹಾಸದಲ್ಲಿ ನಡೆದ ತ್ಯಾಗ, ದಾನ, ಸಮರ್ಪಣೆಯನ್ನು ಸಾರುತ್ತಾ ಬಂದಿದೆ. ಕೆಲವೊಂದು ಸಂದರ್ಭಗಳಲ್ಲಿ ಜೈನರು ಸಂಪೂರ್ಣವಾಗಿ ಮನೆಮಠಗಳನ್ನು ಕಳೆದುಕೊಂಡರೂ ಸರಿಯೇ ದೈವ ದೇವ ಮಂದಿರಗಳನ್ನು ಉಳಿಸಿ ಬೆಳೆಸಿದ ಪರಿಯನ್ನು ಮೆಲುಕು ಹಾಕುವುದೇ ಹೆಮ್ಮೆಯ ವಿಚಾರವಾಗಿದೆ. ಜಾತ್ಯಾತೀತ ಮನೋಭಾವನೆಯನ್ನು ಮೆರೆದ ಜೈನರಸರು ತಮ್ಮ ಕುಲದೇವರುಗಳನ್ನಾಗಿ ಹಿಂದೂಗಳ ಆರಾಧ್ಯ ದೇವರುಗಳನ್ನು ಪೂಜಿಸಿಕೊಂಡು ಬಂದ ಪರಂಪರೆ ನಮ್ಮ ಮುಂದಿದೆ. ಇವತ್ತಿನವರೆಗೂ ದೈವ ದೇವರ ಸ್ಥಾನಗಳ ಅಡಿಪಾಯದ ಕಲ್ಲುಗಳೂ ಕೂಡ ಜೈನರ ಕೊಡುಗೆಯನ್ನು ಎದೆಯುಬ್ಬಿಸಿ ಸಾರುತ್ತಾ ಬರುತ್ತಿದೆ. ಮಾತೃ ಪ್ರಧಾನ ವ್ಯವಸ್ಥೆಗೆ ಜೈನರು ಕೊಟ್ಟ ಕೊಡುಗೆ ಇಂದು ಹಲವು ಮತಪಂಗಡಗಳಲ್ಲೂ ಚಿಗುರೊಡೆದು ಹೆಮ್ಮರವಾಗಿ ಬೆಳೆದಿದೆ. ತುಳುವರು ಅವರು ಯಾರೇ ಆಗಿರಲಿ, ಹಿಂದೂಗಳೇ ಆಗಿರಲಿ, ಎಲ್ಲರ ಕೊಡುಗೆ ಶ್ರೇಷ್ಠವಾದದ್ದು ಎಂಬ ಅರಿವು ತುಳುವರಿಗಿದೆ. ಆದರೆ ಕೆಲವೊಂದು ಘಟನೆಗಳು ಇತ್ತೀಚೆಗೆ ಜೈನರನ್ನು ತುಳುನಾಡಿನ ಭವ್ಯ ಪರಂಪರೆಯಿಂದ ಬೇರ್ಪಡಿಸುವ ವಿಚಾರಗಳು ಚಿಗುರೊಡೆಯಲು ಪ್ರಾರಂಭವಾಗಿರುವುದು ಖೇದಕರ. ಆದರೆ ಇದನ್ನು ತುಳುನಾಡಿನ ತುಳುವರು ಪರಿಗಣನೆಗೆ ತೆಗೆದುಕೊಳ್ಳಬಾರದು ಹಾಗೂ ತುಳುನಾಡಿನ ಐಕ್ಯತೆಗೆ ಭಂಗ ತರುವ ಕೆಲಸಗಳಿಗೆ ಪ್ರೋತ್ಸಾಹ ನೀಡಬಾರದು.‌ ನಮ್ಮ ತುಳುನಾಡು ವಿಶ್ವದಲ್ಲಿಯೇ ಸರ್ವಶ್ರೇಷ್ಠವಾದ ಸಂಸ್ಕೃತಿಗೆ ಅಪಚಾರವಾಗದಂತೆ ತುಳುವರು ನಡೆದುಕೊಳ್ಳಬೇಕಿರುವುದು ಅತೀ ಅಗತ್ಯವಾಗಿದೆ. ನಿರಂಜನ್ ಜೈನ್ ಕುದ್ಯಾಡಿ

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img