ದಶಧರ್ಮಗಳಲ್ಲಿ ನ್ಯಾನೋ ಕಥೆ: ಉತ್ತಮ ಸತ್ಯ
Published Date: 11-Sep-2024 Link-Copied
ಉತ್ತಮ ಸತ್ಯ ಸತ್ಯ ದಿನನಿತ್ಯದ ಪದ ಬಳಕೆಯಲ್ಲಿ ಕೇಳುವ ಶಬ್ದವಾದರೂ ಅದಕ್ಕೆ ಅದರದೇ ಆದ ವಿಶೇಷ ಮೌಲ್ಯವಿದೆ. ಸಾಮಾನ್ಯ ಅರ್ಥದಲ್ಲಿ ವಾಸ್ತವವನ್ನು ವಸ್ತು ನಿಷ್ಠವಾಗಿ ಇದ್ದಂತೆ ಹೇಳುವುದು ಸತ್ಯವಾದರೂ, ಅವಶ್ಯಕತೆ ಇಲ್ಲಕದ ಸಂದರ್ಭದಲ್ಲಿ ಇನ್ನೊಬ್ಬರಿಗೆ ನೋವು ನೀಡುವಂತಹ ಉದ್ದೇಶದಿಂದ ಹೇಳುವ ಸತ್ಯ ಕೂಡ ಸಹ್ಯವಲ್ಲ. ಅಂತಹ ಸಂದರ್ಭದಲ್ಲಿ ಮಿತಭಾಷಿಯಾಗಿರಬೇಕು ಅಥವಾ ವಚನ ಗುಪ್ತಿಯಲ್ಲಿರಬೇಕು. ವಚನ ಗುಪ್ತಿಎಂದರೆ ಏನನ್ನು ಹೇಳದೆ ಮನದಲ್ಲಿ ಏನನ್ನು ವಿಚಾರ ಮಾಡದೆ ಸುಮ್ಮನಿರುವುದು. ಕಾರಣ ಉತ್ತಮ ಸತ್ಯವೂ ಅಹಿಂಸಾ ಧರ್ಮದ ರೂಪವಾಗಿದೆ. ಸತ್ಯದ ನೆಪದಲ್ಲಿ ಉದ್ದೇಶಪೂರ್ವಕವಾಗಿ ಇನ್ನೊಬ್ಬರಿಗೆ ಭಾವನಾತ್ಮಕ ಹಿಂಸೆ ನೀಡುವುದು ಪಾಪ. ಮತ್ತೊಂದು ಅರ್ಥದಲ್ಲಿ ಕಾಯಾ ವಾಚಾ ಮನಸಾ ಸತ್ಯದ ದಾರಿಯಲ್ಲಿ ಇದ್ದರೆ ಶುದ್ದಾತ್ಮಾನನ್ನು ಅರಿಯಲು ಸಾಧ್ಯ. ಶುದ್ಧ ಆತ್ಮನ ಅರಿವೇ ಉತ್ತಮ ಸತ್ಯ. ದಶಧರ್ಮಗಳಲ್ಲಿ ನ್ಯಾನೋ ಕಥೆ ಉತ್ತಮ ಸತ್ಯ ಅವರು ಸನ್ಯಾಸಿಯಲ್ಲದಿದ್ದರೂ ಅತ್ಯಂತ ಸತ್ಯ, ನಿಷ್ಠೆ, ಪ್ರಾಮಾಣಿಕತೆಯ ಜೊತೆ ಸದಾ ಯೋಗಿಯಂತೆ ಬದುಕಿ ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತಿದ್ದರು. ಒಂದು ಸಂದರ್ಭದಲ್ಲಿ ಯಾವುದೋ ತೋಟದಲ್ಲಿ ಕಳ್ಳತನವಾದಾಗ ಆ ಯೋಗಿ ಆವತ್ತು ಅಲ್ಲೇ ಇರುವ ಪರಿಸ್ಥಿತಿ ಎದುರಾಯಿತು. ಪಂಚಾಯಿತಿ ಕಟ್ಟೆಯಲ್ಲಿ ಸಾಕ್ಷಿಗಾಗಿ ಯೋಗಿಯನ್ನೇ ಕರೆದು ವ್ಯಕ್ತಿ ಒಬ್ಬನನ್ನು ತೋರಿಸಿ 'ಇವನು ಕಳ್ಳತನ ಮಾಡಿದ್ದು ನೀವು ನೋಡಿದ್ದೀರಾ' ಎಂದು ಪಂಚಾಯತಿ ಸದಸ್ಯರು ಕೇಳಿದಾಗ, 'ಇಲ್ಲಾ ಆತ ಕಳ್ಳತನ ಮಾಡಿದ್ದು ನನ್ನ ಗಮನಕ್ಕೆ ಬಂದಿಲ್ಲ ಎಂದರು ಯೋಗಿ. ಕೊನೆಗೆ ಅವನಿಗೆ ಯಾವುದೇ ಶಿಕ್ಷೆ ಕೊಡದೇ ಬಿಟ್ಟುಬಿಟ್ಟರು. ಯೋಗಿಯ ಜೊತೆಗಿದ್ದ ವ್ಯಕ್ತಿ 'ನೀವು ಯಾವಾಗಲೂ ಸತ್ಯವನ್ನೇ ಹೇಳುತ್ತಿದ್ದವರು, ಮಹಾವೀರ ಭಗವಾನರನ್ನು ಶ್ರದ್ಧಾ, ಭಕ್ತಿಯಿಂದ ನಂಬುವವರಾಗಿ ಸತ್ಯವನ್ನೇ ಭೋಧಿಸಿದ ಮಹಾವೀರರ ತತ್ವವನ್ನು ಎಲ್ಲಿ ಪಾಲಿಸಿದಂತಾಯಿತು?' ಎಂದು ಕೇಳಿದ. ಯೋಗಿ ಹೇಳಿದರು 'ಮಹಾವೀರ ಭಗವಾನರು ಯಾವಾಗಲೂ ಸತ್ಯವನ್ನೇ ನುಡಿಯಬೇಕು, ಸತ್ಯ ಎನ್ನುವುದು ಆತ್ಮ ಧರ್ಮದ ಬೆಳಕೂ ಕೂಡಾ. ಆದರೆ ಇನ್ನೊಬ್ಬರಿಗೆ ನಾವು ಹೇಳುವ ಸತ್ಯ ಇನ್ನಷ್ಟು ಸಮಸ್ಯೆಯಾಗುವುದು ಎಂದಾಗ ಯೋಚಿಸಿ ಸತ್ಯ ಹೇಳಬೇಕಾದ್ದು ನಮ್ಮ ಕರ್ತವ್ಯ ಎಂದಿದ್ದಾರೆ. ಅವನು ಕದ್ದಿದ್ದು ನಿಜ ಆದರೆ ಆ ಹಣ್ಣುಗಳು ನಾಳೆ ಹಾಳಾಗುತ್ತಿದ್ದವು. ಅದರ ಮಾಲೀಕರು ಸದ್ಯಕ್ಕೆ ಹೊರ ದೇಶದಲ್ಲಿ ಇದ್ದಾರೆ. ಅವನ ಹೊಟ್ಟೆ ಪಾಡಿಗಾಗಿ ಅವನು ನಾಳೆ ಹಾಳಾಗಿ ಹೋಗೋ ಹಣ್ಣುಗಳನ್ನು ಕದ್ದ. ಅದರ ಬೀಜಗಳನ್ನು ಕೂಡಾ ತಂದು ಇದೇ ಮರದ ಕೆಳಗೆ ಬಿತ್ತಿ ಮತ್ತೊಂದು ಮರ ಬೆಳೆಯಲು ಸಹಕರಿಸಿದ್ದಾನೆ' ಆಚಾರ್ಯ ಭಗವಂತರು ಹೇಳುತ್ತಾರೆ, ಸತ್ಯ ಜೀವತತ್ವ ಮತ್ತು ಅವಿನಾಶಿ. ಸತ್ಯ ಹೇಳುವುದು ವಚನವಾಗಿದೆ. ವಚನ, ಪುದ್ದಲ ವಿಭಾವ ವ್ಯಂಜನ ಪರ್ಯಾಯವಿದೆ. ಇನ್ನೊಬ್ಬರಿಗೆ ನೋವುಂಟು ಮಾಡುವ ಅಥವಾ ದುಃಖವನ್ನು ಮಾಡುವ ಸತ್ಯ ಅಥವಾ ಸುಳ್ಳು ಎರಡೂ ಆತ್ಮಕಲ್ಯಾಣ ಹಾಗೂ ಲೌಖಿಕ ಕಲ್ಯಾಣಕ್ಕೆ ಹಾನಿ. ಆ ಕಾರಣದಿಂದ ಇವತ್ತು ಒಳ್ಳೆ ಉದ್ದೇಶದಿಂದ ಆತ ಸುಳ್ಳು ಹೇಳಿದರೂ ಸತ್ಯದ ದಾರಿಯಲ್ಲಿ ಉಪಯುಕ್ತವಿದೆ. ಯೋಗಿ ಮಹಾವೀರ ಭಗವಾನರನ್ನು ತಾನು ಹೇಳಿದ ಸುಳ್ಳಿಗಾಗಿ ಮನದಲ್ಲಿಯೇ ಕ್ಷಮೆ ಬೇಡಿದ. ಉತ್ತಮ ಸತ್ಯ ಧರ್ಮ ಕೀ ಜೈ ಶ್ವೇತಾ ನಿಹಾಲ್ ಜೈನ್