ಎಕ್ಸಲೆಂಟ್ ಸಂಸ್ಥೆಯಲ್ಲಿ ರಾಜ್ಯ ಮಟ್ಟದ ಜೈನ ಯುವ ಸಮ್ಮೇಳನ ಉದ್ಘಾಟನೆ
Published Date: 06-Sep-2024 Link-Copied
ಕಲ್ಲಬೆಟ್ಟು: ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಜೈನ ಸಮುದಾಯದ ಯುವ ಮನಸ್ಸುಗಳನ್ನು ಒಂದುಗೂಡಿಸಿ ವಿವಿಧ ಕ್ಷೇತ್ರಗಳ ಹಿರಿಯ ಸಾಧಕರಿಂದ ಜ್ಞಾನಾಮೃತವನ್ನು ಕೊಡಿಸುವ ಮೂಲಕ ಜೈನ ಸಮುದಾಯದ ಯುವಕ ಯುವತಿಯರನ್ನು ಸದೃಢಗೊಳಿಸುವ ಎರಡು ದಿನಗಳ ರಾಜ್ಯಮಟ್ಟದ ಜೈನ ಯುವ ಸಮ್ಮೇಳನ ಉದ್ಘಾಟನೆಗೊಂಡಿತು. ಮಾಜಿ ಸಚಿವರಾದ ಅಭಯ ಚಂದ್ರ ಜೈನ್ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಾ ಸಮುದಾಯದ ಯುವ ಜನರು ಶಿಸ್ತು, ಆತ್ಮವಿಶ್ವಾಸ, ನಾಯಕತ್ವ ಗುಣಗಳು ಮತ್ತು ಸಮಾಜದೊಂದಿಗೆ ಬೆರೆತು ಹೊಣೆಗಾರಿಕೆಯನ್ನು ನಿರ್ವಹಿಸುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕು. ದೂರದೃಷ್ಟಿಯ ಚಿಂತನೆಯಿಂದ ಪ್ರಪಂಚಕ್ಕೆ ಮಾದರಿಯಾಗಬೇಕು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಂದ ಪ್ರೇರಣೆಯನ್ನು ಪಡೆದು ಸಾಧನಾ ಮಾರ್ಗದಲ್ಲಿ ದಾಪುಗಾಲಿಡಬೇಕು. ಸಮಾಜದಲ್ಲಿ ಸುಶಿಕ್ಷಿತನಿಗೆ ಗೌರವ ಸದಾ ದೊರಕುತ್ತದೆ. ನಾಗರಿಕ ಸೇವೆಯನ್ನು ವೃತ್ತಿಯಾಗಿಸಿಕೊಂಡು ಸಮಾಜ ಸೇವೆ ಮಾಡುತ್ತಾ ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು. ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ಮಾತನಾಡಿ ಸಂಸ್ಥೆಯಲ್ಲಿ ಧ್ಯಾನ ಮಂದಿರ, ಜೈನ ಪಾಠಗಳು, ಭಜನೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಿಂತನೆಗೆ ಅವಕಾಶ ಮಾಡಿಕೊಡಲಾಗಿದೆ. ಆತ್ಮಶುದ್ಧಿಯ ಮೂಲಕ ಅದರ ಸದುಪಯೋಗವನ್ನು ನಮ್ಮ ವಿದ್ಯಾರ್ಥಿಗಳು ಪಡೆದುಕೊಳ್ಳುತ್ತಿರುವಾಗ ರಾಜ್ಯದ ಬೇರೆ ಬೇರೆ ಭಾಗಗಳ ಜೈನ ಸಮಾಜದ ಯುವಶಕ್ತಿಯನ್ನು ಒಂದುಗೂಡಿಸಿ ಜೈನ ಪರಂಪರೆಯ ಶ್ರೇಷ್ಠತೆಯ ಅರಿವನ್ನು ಮೂಡಿಸುವುದಷ್ಟೇ ಅಲ್ಲದೇ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರ ಪರಿಚಯದ ಮೂಲಕ ಯುವ ಜನರಲ್ಲಿ ಸ್ಫೂರ್ತಿಯನ್ನು ತುಂಬುವ ಸಲುವಾಗಿ ಈ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಸ್ತಾವನೆಗೈದರು. ಎರಡು ದಿನಗಳ ಈ ಸಮ್ಮೇಳನದಲ್ಲಿ ರಾಜ್ಯದ ನಾನಾ ಭಾಗಗಳ ಸುಮಾರು ಐದುನೂರು ಯುವಕ ಯುವತಿಯರು ಭಾಗವಹಿಸುತ್ತಿದ್ದಾರೆ. ನ್ಯಾಯಾಂಗ, ನಾಗರಿಕ ಸೇವೆ, ಮಾಧ್ಯಮ, ಶಿಕ್ಷಣ, ಕ್ರೀಡೆ ಮತ್ತು ಉದ್ಯಮ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜೈನ ಸಮಾಜದ ಬಂಧುಗಳು ಸಮ್ಮೇಳನದಲ್ಲಿ ಪಾಲ್ಗೊಂಡು ಕಾರ್ಯಾಗಾರವನ್ನು ನಡೆಸಿಕೊಡಲಿದ್ದಾರೆ. ವೇದಿಕೆಯಲ್ಲಿ ಖ್ಯಾತ ನ್ಯಾಯವಾದಿಗಳಾದ ಎಂ. ಕೆ. ವಿಜಯಕುಮಾರ್, ಭಾರತೀಯ ಅರಣ್ಯ ಸೇವಾ ಅಧಿಕಾರಿಗಳಾದ ವಿಜಯಕುಮಾರ್ ಗೋಗಿ, ಕಾರ್ಯಕ್ರಮ ಸಂಚಾಲಕರಾದ ಅಜಿತ್ ಮುರುಗುಂಡೆ ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ವಂದಿಸಿದರು. ಆಡಳಿತ ನಿರ್ದೇಶಕ ಡಾ. ಬಿ ಪಿ ಸಂಪತ್ ಕುಮಾರ್ ನಿರೂಪಿಸಿದರು.