ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ 2024-25ನೇ ಶೈಕ್ಷಣಿಕ ವರ್ಷದ ಜೈನ ಪಾಠಗಳ ಉದ್ಘಾಟನಾ ಸಮಾರಂಭ
Published Date: 25-Jul-2024 Link-Copied
ಅರಿಷಡ್ವರ್ಗಗಳನ್ನು ಗೆದ್ದು ಪಂಚೇಂದ್ರಿಯಗಳನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡವರು ಜಿನರು ಆಸ್ತೇಯ ಅಪರಿಗ್ರಹದಂತಹ ಶ್ರೇಷ್ಠ ಸಿದ್ಧಾಂತಗಳನ್ನು ಪಾಲಿಸುತ್ತಾ ಬಂದಿರುವ ಜೈನ ಧರ್ಮದ ಕುರಿತು ಶಿಕ್ಷಣವನ್ನು ನೀಡುವುದು ಅತ್ಯುತ್ತಮ ಕಾರ್ಯವಾಗಿದೆ ಎಂದು ನರಸಿಂಹರಾಜಪುರದ ಅತಿಶಯ ಕ್ಷೇತ್ರ ಬಸ್ತಿಮಠದ ಪರಮಪೂಜ್ಯ ಡಾ. ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಹೇಳಿದರು. ಅವರು ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ 2024-25ನೇ ಶೈಕ್ಷಣಿಕ ವರ್ಷದ ಜೈನ ಪಾಠಗಳ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನವನ್ನಿತ್ತರು. ಬಳಿಕ ಮಾತಾಡಿದ ಅವರು ಹೆಣ್ಣು ಮಗುವನ್ನು ನಿರ್ಲಕ್ಷಿಸುವ ಧೋರಣೆಯು ನಾಗರಿಕ ಸಮಾಜದಲ್ಲಿ ಹುಟ್ಟಿಕೊಂಡಿರುವುದು ಅತ್ಯಂತ ಖೇದಕರ ಹೆಣ್ಣಿನ ಮನೋವ್ಯಕ್ತಿತ್ವವನ್ನು ಗೌರವಿಸುವ ಮಾನವೀಯ ಧೋರಣೆಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕಾಗಿದೆ. ಬದುಕಿನ ಎಲ್ಲಾ ರಂಗಗಳಲ್ಲೂ ತಾರತಮ್ಯ ಅವಕಾಶವಿಲ್ಲದಂತೆ ಸಮಾಜ ನಿರ್ಮಾಣ ಮಾಡಬೇಕಾಗಿರುವುದು ಇಂದಿನ ಅಗತ್ಯ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ಸಂಸ್ಥೆಗಳ ಅಧ್ಯಕ್ಷರಾದ ಯುವರಾಜ್ ಜೈನ್ ದೀರ್ಘವಾದ ಬದುಕಿನಲ್ಲಿ ಬರುವ ಸಂಘರ್ಷಗಳಿಗೆ ಉತ್ತರವಾಗಬಲ್ಲ ಧರ್ಮಶಿಕ್ಷಣ ನಮ್ಮನ್ನು ಸತ್‌ಪಥದಲ್ಲಿ ನಡೆಯುವಂತೆ ಮಾಡುತ್ತದೆ. ಆ ನಿಟ್ಟಿನಲ್ಲಿ ನಮ್ಮ ಸಂಸ್ಥೆ ವಿದ್ಯಾರ್ಥಿಗಳಿಗೆ ಧರ್ಮಸಮನ್ವಯತೆಗೆ ಹೆಚ್ಚಿನ ಮಹತ್ವ ನೀಡುತ್ತದೆ ಎಂದರು. ಇದೇ ಸಂದರ್ಭದಲ್ಲಿ ಮೂಡುಬಿದಿರೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನ್ಯೂಪಡಿವಾಳ್ಸ್ ನ ಹರ್ಷವರ್ಧನ್ ಪಡಿವಾಳ್ ಅವರನ್ನು ಗೌರವಿಸಿ ಅಭಿನಂದಿಸಲಾಯಿತು. ನಾರಾವಿ ಬಸದಿ ಆಡಳಿತ ಸಮಿತಿ ಅಧ್ಯಕ್ಷರಾಗಿರುವ ಬಿ. ನಿರಂಜನ ಅಜ್ರಿ, ರಾಮೇರಗುತ್ತು ಅವರನ್ನು ಅವರ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳ ಕೊಡುಗೆಗಾಗಿ ಗೌರವಿಸಲಾಯಿತು. ವೇದಿಕೆಯಲ್ಲಿ ಕುಲದೀಪ್ ಜೈನ್, ಚೌಟರ ಅರಮನೆ ಮೂಡಬಿದ್ರೆ ಕೃಷ್ಣರಾಜ್ ಹೆಗ್ಡೆ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಉಪಸ್ಥಿತರಿದ್ದರು. ಕಾರ್ಯದರ್ಶಿ ರಶ್ಮಿತಾ ಜೈನ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಆಡಳಿತ ನಿರ್ದೇಶಕರಾದ ಡಾ. ಬಿ. ಪಿ. ಸಂಪತ್‌ಕುಮಾರ್ ನಿರೂಪಿಸಿದರು.