ಉಜಿರೆ: ಸ್ನೇಹಕೂಟ
Published Date: 13-Jul-2024 Link-Copied
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ, ವಿದ್ಯಾರ್ಥಿ ಕ್ಷೇಮಪಾಲನ ಮುಖ್ಯ ಅಧಿಕಾರಿಯಾಗಿ ಸುಮಾರು ಐದು ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಬಿ. ಸೋಮಶೇಖರ ಶೆಟ್ಟಿಯವರು ಏರ್ಪಡಿಸಿದ ಸ್ನೇಹಕೂಟದ ಅಧ್ಯಕ್ಷತೆಯನ್ನು ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ| ಸತೀಶ್ಚಂದ್ರ ಎಸ್. ವಹಿಸಿದ್ದರು. ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರಾದ ಬಿ. ಸೋಮಶೇಖರ ಶೆಟ್ಟಿಯವರು ದಣಿವರಿಯದ ದುಡಿಮೆಗಾರ, ನಿಷ್ಠೆ, ಪ್ರಾಮಾಣಿಕತೆ ಹಾಗೂ ಬದ್ಧತೆಯಿಂದ ಕೆಲಸ ಮಾಡುವ ಪರಿಯಿಂದ ಆಡಳಿತ ಮಂಡಳಿಯ ಮೆಚ್ಚುಗೆಗೆ ಪಾತ್ರರಾದವರು. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರು, ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರ ಕುಮಾರ್ ಇವರ ಮಾರ್ಗದರ್ಶನದಲ್ಲಿ ರಚಿಸಿದ ಪ್ರಗತಿ ಪರಿಶೀಲನ ತಂಡದ ಸಂಚಾಲಕರಾಗಿ ಶಾಲೆಗಳಿಗೆ ಭೇಟಿ ನೀಡಿ, ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದಿಂದ ಶಾಲಾ ಫಲಿತಾಂಶದಲ್ಲಿ ವಿಶೇಷ ಸಾಧನೆಗಳ ಮೂಲಕ ಎಸ್.ಡಿ.ಎಂ. ನ ಎಲ್ಲಾ ಪ್ರೌಢ ಶಾಲೆಗಳಲ್ಲಿಯೂ ಕಳೆದ ಶೈಕ್ಷಣಿಕ ವರ್ಷದಲ್ಲಿ ಶೇಕಡಾ ನೂರು ಫಲಿತಾಂಶ ದಾಖಲಿಸುವಲ್ಲಿ ಇವರ ಪ್ರಯತ್ನ ಗಮನಾರ್ಹವಾದುದು. ಶಿಕ್ಷಣ ಸಂಸ್ಥೆಯ ಕೇಂದ್ರ ಕಛೇರಿಯಲ್ಲಿದ್ದು, ಪ್ರಾರಂಭದ ವರ್ಷದಲ್ಲಿ ವಿದ್ಯಾರ್ಥಿ ನಿಲಯಗಳ ಮೇಲ್ವಿಚಾರಣೆ ಹಾಗೂ ಶಾಲೆಗಳಿಗೆ ಭೇಟಿ ನೀಡಿ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದರು. ಸಂಸ್ಥೆಯ ಸಹೋದ್ಯೋಗಿಗಳ ಜೊತೆ ಆತ್ಮೀಯರಾಗಿದ್ದು ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ನಿಷ್ಠುರವಾದಿ. ಎಸ್.ಡಿ.ಎಂ. ಕಲಾ ಕೇಂದ್ರದಲ್ಲಿ ಕಲಾ ವೈಭವ ತಂಡ ಕಟ್ಟುವಲ್ಲಿ ವಿಶೇಷ ಶ್ರಮವಹಿಸಿದ್ದರು ಎಂದು ತಿಳಿಸಿದರು. ಕಾರ್ಯಕ್ರಮ ಸಂಘಟಕರೂ, ಉತ್ತಮ ತರಬೇತುದಾರರೂ, ವಾಗ್ಮಿಗಳೂ ಆಗಿರುವ ಬಿ. ಸೋಮಶೇಖರ ಶೆಟ್ಟಿ ಹಾಗೂ ಪತ್ನಿ ನಿವೃತ್ತ ಮುಖ್ಯ ಶಿಕ್ಷಕಿ ಜಯಭಾರತಿ ಇವರನ್ನು ಗೌರವಿಸಿ ನಿವೃತ್ತ ಜೀವಕ್ಕೆ ಶುಭ ಹಾರೈಸಿದರು. ಬಿ. ಸೋಮಶೇಖರ ಶೆಟ್ಟಿಯವರು ಮಾತನಾಡಿ, ಶ್ರೀ ಕ್ಷೇತ್ರ ದರ್ಮಸ್ಥಳದ ಪೂಜ್ಯ ಡಾ| ವೀರೇಂದ್ರ ಹೆಗ್ಗಡೆಯವರು ಶಿಕ್ಷಣದ ಜೊತೆಗೆ ಉದ್ಯೋಗ ನೀಡಿ ಬದುಕಿಗೆ ಆಶ್ರಯ ನೀಡಿದವರು ಸುಮಾರು ಐದು ದಶಕಗಳ ಕಾಲ ಸೇವೆ ಸಲ್ಲಿಸುವ ವಿಶೇಷ ಅವಕಾಶದ ಜೊತೆಗೆ, ಶ್ರೀ ಕ್ಷೇತ್ರದ ಅನೇಕ ಸಮಾರಂಭಗಳಲ್ಲಿ ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸುವ ಹೊಣೆಗಾರಿಕೆಯನ್ನು ಒದಗಿಸಿದ್ದರು. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ, ಆಧುನಿಕತೆ, ಮೌಲ್ಯ ಶಿಕ್ಷಣ, ಭೌತಿಕ ಸೌಲಭ್ಯಗಳ ಮೂಲಕ, ಮಾದರಿ ಶಿಕ್ಷಣ ಸಂಸ್ಥೆಗಳನ್ನಾಗಿ ಮಾಡುವಲ್ಲಿ ನಿರಂತರ ಮಾರ್ಗದರ್ಶನ ಮಾಡಿದ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯವರಾದ ಡಿ. ಹರ್ಷೇಂದ್ರ ಕುಮಾರ್‌ರವರ ಆಶಯದಂತೆ ಕರ್ತವ್ಯ ನಿರ್ವಹಿಸಿದ ಬಗ್ಗೆ ತೃಪ್ತಿಯ ಮಾತುಗಳನ್ನಾಡಿದರು. ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರು, ಸುಪ್ರೀಯ ಹರ್ಷೇಂದ್ರ ಕುಮಾರ್‌ರವರ ಹಾಗೂ ಕೀರ್ತಿ ಶೇಷ ಡಾ| ಬಿ. ಯಶೋವರ್ಮರ ಮಾರ್ಗದರ್ಶನ, ಸಹಕಾರವನ್ನು ನೆನಪಿಸಿಕೊಂಡು ಕೃತಜ್ಞತೆ ಸಲ್ಲಿಸಿದರು. ಕಳೆದ ಎರಡು ವರ್ಷಗಳಿಂದ ಕಾರ್ಯದರ್ಶಿಯಾಗಿ, ನಿರಂತರ ಮಾರ್ಗದರ್ಶನ ಮಾಡಿದ ಡಾ| ಸತೀಶ್ಚಂದ್ರ ಎಸ್. ಇವರ ನೇತೃತ್ವದಲ್ಲಿ ಯಶಸ್ವೀ ಕರ್ತವ್ಯ ನಿರ್ವಹಿಸಿದ ಸಂತೋಷವನ್ನು ವ್ಯಕ್ತಪಡಿಸಿ ವಂದಿಸಿದರು. ವೃತ್ತಿ ಜೀವನದಲ್ಲಿ ಸಹಕರಿಸಿದ ಎಲ್ಲರನ್ನು ನೆನಪಿಸಿ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ CEO ಪೂರಣ್ ವರ್ಮ, ವಿವಿಧ ಕಾಲೇಜಿನ ಪ್ರಾಂಶುಪಾಲರು, ಪ್ರಾಧ್ಯಾಪಕರು, ಮುಖ್ಯ ಶಿಕ್ಷಕರೂ, ಶಾರೀರಿಕ ನಿರ್ದೇಶಕರು, ಬಂಧು ಬಳಗ, ಸ್ನೇಹಿತರು ಸ್ನೇಹಕೂಟದಲ್ಲಿ ಭಾಗವಹಿಸಿ ಶುಭ ಹಾರೈಸಿದರು. ಪತ್ನಿ ಜಯಭಾರತಿ, ಪುತ್ರ ಬಿ. ಮಿಥುನ್ ಕುಮಾರ್, ಅಪೂರ್ವ ಮಿಥುನ್ ಕುಮಾರ್ ಕಾರ್ಯಕ್ರಮ ಆಯೋಜಿಸಿದ್ದರು. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಪುನೀತ್ ಸ್ವಾಗತಿಸಿ, ನಿರೂಪಿಸಿದ ಕಾರ್ಯಕ್ರಮದಲ್ಲಿ ನೂತನ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಧನ್ಯ ಕುಮಾರ್ ಎಂ. ಇವರು ವಂದಿಸಿದರು.