ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ನವೀಕೃತ ಸಭಾಂಗಣ ಲೋಕಾರ್ಪಣೆ


Logo

Published Date: 12-Jul-2024 Link-Copied

ಉಜಿರೆಯ ಎಸ್.ಡಿ.ಎಂ ಕಾಲೇಜಿನ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು ಸೇರಿದಂತೆ ಮಹತ್ವದ ಬೃಹತ್ ಕಾರ್ಯಕ್ರಮಗಳಿಗೆ ವೇದಿಕೆ ಒದಗಿಸಿಕೊಡುವ ಬಹುಉದ್ದೇಶಿತ ಸುಸಜ್ಜಿತ ನವೀಕೃತ ಇಂದ್ರಪಸ್ಥ ಒಳಾಂಗಣ ಸಭಾಂಗಣವನ್ನು ಧರ್ಮಸ್ಥಳದ ಮಾತೃಶ್ರೀ ಹೇಮಾವತಿ ಹೆಗ್ಗಡೆ ಅವರು ಶುಕ್ರವಾರ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ಶೈಕ್ಷಣಿಕ ಕಲಿಕೆಯೊಂದಿಗೆ ಸಂಸ್ಕೃತಿನಿಷ್ಠ ವಿವೇಕವನ್ನು ಯುವಪೀಳಿಗೆಗೆ ದಾಟಿಸುವುದಕ್ಕೆ ಆದ್ಯತೆ ನೀಡುವ ಎಸ್.ಡಿ.ಎಂ ಕಾಲೇಜಿನ ಉದಾತ್ತ ಆಶಯಕ್ಕೆ ಅನುಗುಣವಾಗಿ ಇಂದ್ರಪ್ರಸ್ಥ ಸಭಾಂಗಣ ರೂಪುಗೊಂಡಿದೆ ಎಂದರು. ಶೈಕ್ಷಣಿಕ ಕಲಿಕೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಂಡು ಬಹುಮುಖೀ ವ್ಯಕ್ತಿತ್ವದೊಂದಿಗೆ ಬೆಳಗಬೇಕೆಂಬುದು ಸಂಸ್ಥೆಯ ಆಶಯವಾಗಿದ್ದು, ಅದಕ್ಕೆ ಪೂರಕವಾಗಿ ಸುಸಜ್ಜಿತ ಅತ್ಯಾಧುನಿಕ ಸೌಲಭ್ಯಗಳೊಂದಿಗಿನ ಇಂದ್ರಪ್ರಸ್ಥ ಸಭಾಂಗಣ ವೇದಿಕೆ ಒದಗಿಸಿಕೊಡುತ್ತದೆ ಎಂದು ಹೇಳಿದರು. ಕರಾವಳಿ ಭಾಗದಲ್ಲಿ ನಾಲ್ಕು ತಿಂಗಳ ಕಾಲವೂ ನಿರಂತರ ಮಳೆ ಇರುತ್ತದೆ. ಇದರ ಮಧ್ಯೆಯೂ ನಾಟಕ, ನೃತ್ಯ, ಮನರಂಜನೆ ಹಾಗೂ ಕ್ರೀಡಾ ಚಟುವಟಿಕೆಗಳು ಮಳೆಗಾಲದಲ್ಲಿಯೂ ನಿರಂತರವಾಗಿ ನಡೆಯಬೇಕು ಎಂಬ ಉದ್ದೇಶ ಇಂದ್ರಪ್ರಸ್ಥ ಸಭಾಂಗಣದ ನವೀಕರಣದ ಹಿಂದಿದೆ. ಕಾಲಕ್ಕನುಗುಣವಾಗಿ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳು ಇಲ್ಲಿ ಅಳವಡಿಕೆಯಾಗಿರುವುದು ಸಂತಸದ ವಿಚಾರ ಎಂದರು. ಇಂದ್ರಪ್ರಸ್ತ ಸಭಾಂಗಣದ ನವೀಕರಣದ ಸಂಪೂರ್ಣ ನಿರ್ವಹಣಾ ಜವಾಬ್ದಾರಿ ಹೊಂದಿದ್ದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರಕುಮಾರ್ ಅವರು ಮಾತನಾಡಿ ಸಭಾಂಗಣದ ವೈಶಿಷ್ಟ್ಯತೆಯ ಸಂಪೂರ್ಣ ವಿವರ ನೀಡಿದರು. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದೊಂದಿಗೆ ಸರ್ವತೋಮುಖ ಬೆಳವಣಿಗೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಸಭಾಂಗಣಕ್ಕೆ ವಿಶೇಷ ಮಹತ್ವವಿದೆ ಎಂದರು. 1991ರಲ್ಲಿ ಕಾಲೇಜಿನ ಬೆಳ್ಳಿಹಬ್ಬದ ಸಂದರ್ಭದಲ್ಲಿ ಸಭಾಂಗಣದ ಪರಿಕಲ್ಪನೆ ಹುಟ್ಟಿಕೊಂಡಿತು. 1994ರಲ್ಲಿ ಸಭಾಂಗಣ ಉದ್ಘಾಟನೆಗೊಂಡಿತ್ತು. ಪ್ರಸ್ತುತ ಕಾಲಘಟ್ಟದ ಅವಶ್ಯಕತೆಗೆ ಅನುಗುಣವಾಗಿ ಸಭಾಂಗಣವನ್ನು ನವೀಕರಿಸಲಾಗಿದೆ. ಕಾರ್ಯಕ್ರಮಗಳು ಆಯೋಜಿತವಾದಾಗ ಕಾಂಕ್ರೀಟ್ ಗೋಡೆ ಇದ್ದಕಾರಣದ ಪ್ರತಿಧ್ವನಿಯ ಸಮಸ್ಯೆ ಇತ್ತು. ಇದರೊಂದಿಗೆ ಇತರೆ ತಾಂತ್ರಿಕ ನ್ಯೂನತೆಗಳು ಮತ್ತು ಸವಾಲುಗಳೂ ಇದ್ದವು. ಈಗ ಪುನರ್ನಿರ್ಮಾಣದ ಹಂತದಲ್ಲಿ ಇವೆಲ್ಲಾ ನ್ಯೂನತೆಗಳನ್ನು ಸರಿಪಡಿಸಲಾಗಿದೆ ಎಂದು ತಿಳಿಸಿದರು. ಧ್ವನಿ ಮತ್ತು ಬೆಳಕಿನ ವ್ಯವಸ್ಥೆಗೆ ಹೊಸ ಆಯಾಮ ನೀಡಲಾಗಿದೆ. ಪ್ರೇಕ್ಷಕರ ಸಾಲುಗಳನ್ನೂ ಸುವ್ಯವಸ್ಥಿತಗೊಳಿಸಲಾಗಿದೆ. ವೇದಿಕೆಯು ಹಿಂದಿಗಿಂತಲೂ ಈಗ ಇನ್ನಷ್ಟು ವಿಸ್ತಾರಗೊಂಡಿದೆ. ಗ್ರೀನ್ ರೂಮ್‌ನಲ್ಲೂ ಕೂಡಾ ಅತ್ಯಗತ್ಯ ಸೌಲಭ್ಯಗಳನ್ನು ಒದಗಿಸಿಕೊಡಲಾಗಿದೆ. ತುಂಬಾ ಅತ್ಯಾಕರ್ಷಕವಾಗಿ ರೂಪುಗೊಂಡಿರುವ ಈ ಸಭಾಂಗಣವು ನಿರಂತರವಾಗಿ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವಂತೆ ಸದ್ಬಳಕೆ ಆಗಲಿ ಎಂದು ಆಶಯ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಸುಪ್ರಿಯಾ ಹರ್ಷೇಂದ್ರಕುಮಾರ್, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್, ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ.ಕುಮಾರ ಹೆಗಡೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಐಟಿ ವಿಭಾಗದ ಸಿಇಓ ಪೂರಣ್ ವರ್ಮಾ, ಸೋನಿಯಾ ವರ್ಮಾ, ಉಜಿರೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಅಧ್ಯಾಪಕರು, ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ, ಟ್ರಸ್ಟ್ ಸದಸ್ಯರು ಹಾಗೂ ಉದ್ಯೋಗಿಗಳು ಈ ಸಂದರ್ಭದಲ್ಲಿ ಭಾಗವಹಿಸಿದ್ದರು. ಡಾ. ಶ್ರೀಧರ್ ಭಟ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರು ಸುಶ್ರಾವ್ಯ ಪ್ರಾರ್ಥನೆ ಹಾಗೂ ಗೀತೆಗಳಿಂದ ಮನಸೆಳೆದರು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img