Sat, Jan 11, 2025
ದಿಗಂಬರ ಜೈನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮೂಡುಬಿದಿರೆ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮ
ಡಿ.ಜೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮೂಡುಬಿದ್ರೆ ಇದರ 2024-25 ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮವು ಇತ್ತೀಚೆಗೆ ಶಾಲಾ ಅಮೃತಮಹೋತ್ಸವ ಕಟ್ಟಡದಲ್ಲಿ ನೆರವೇರಿತು. ಈ ಸಭೆಯ ಅಧ್ಯಕ್ಷ ಸ್ಥಾನವನ್ನು ಗೌರವಾನ್ವಿತ ಶಾಲಾ ಸಂಚಾಲಕರಾದ ಕೆ.ಹೇಮರಾಜ್ ಇವರು ವಹಿಸಿದ್ದರು. ಇದರ ಉದ್ಘಾಟನೆಯನ್ನು ದೀಪ ಬೆಳಗಿಸುವುದರ ಮೂಲಕ ವೀರ ಮಾರುತಿ ಎಂಟರ್ ಪ್ರೈಸಸ್ ಕಲ್ಸಂಕ ಇದರ ಮಾಲಕರಾದ ವೆಂಕಟೇಶ್ ಪ್ರಭು ನೆರವೇರಿಸಿದರು. ವಿವಿಧ ಸಂಘಗಳ ಕಡತಗಳನ್ನು ಅನಾವರಣಗೊಳಿಸಿ ಮಂತ್ರಿಮಂಡಲದ ಪದಾಧಿಕಾರಿಗಳಿಗೆ ಪದಕ ಧಾರಣೆಯನ್ನು ಮಾಡಿದರು. ಇವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಈ ಸಂಸ್ಥೆಯ ಹಳೆ ವಿದ್ಯಾರ್ಥಿಯಾಗಿ ತಮ್ಮ ಬಾಲ್ಯ ಜೀವನವನ್ನು ಮೆಲುಕು ಹಾಕುತ್ತಾ ಶಾಲೆಗೆ ವಿದ್ಯಾರ್ಥಿ ಸಂಘದ ಅವಶ್ಯಕತೆಗಳನ್ನು ತಿಳಿಸುತ್ತಾ ಮಕ್ಕಳಿಗೆ ತಮ್ಮ ಕೆಲಸ ಕಾರ್ಯಗಳ ಜವಾಬ್ದಾರಿಯನ್ನು ತಿಳಿಸಿದರು. ಶಿಸ್ತು ಬದ್ಧ ಹಾಗೂ ಸಂಸ್ಕಾರಯುತ ಶಿಕ್ಷಣವು ಮಕ್ಕಳನ್ನು ಯಶಸ್ಸಿನ ದಾರಿಯಲ್ಲಿ ಸಾಗಲು ಕಾರಣವಾಗುತ್ತದೆ ಎಂದು ಹೇಳಿ ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ಮಾಡಿರುವುದರ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಶಾಲಾ ಮುಖ್ಯೋಪಾಧ್ಯಾಯರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ನಮ್ಮ ಶಾಲೆಯಲ್ಲಿ ಆಧುನಿಕ ತಂತಜ್ಞಾನವನ್ನು ಬಳಸಿ ನಡೆಸಿದ ಚುಣಾವಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲಾ ಮಂತ್ರಿಮಂಡಲಕ್ಕೆ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಜ್ಞಾ ವಿಧಿಯನ್ನು ವಿಧಿಸಿ ತಮ್ಮ ಜವಾಬ್ದಾರಿಯ ಬಗ್ಗೆ ಅರಿವು ಮೂಡಿಸಿದರು. ಶಾಲಾ ಎಸ್.ಡಿ.ಎಮ್.ಸಿ. ಅಧ್ಯಕ್ಷರು, ಉಪಾಧ್ಯಕ್ಷರು, ತಾಯಂದಿರ ಸಮಿತಿಯ ಅಧ್ಯಕ್ಷರು ಚುನಾಯಿತ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಶಾಲಾ ಸಂಚಾಲಕರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಈ ಸಂಸ್ಥೆಯ ಯಶಸ್ವಿಗೆ ಶ್ರಮಿಸುತ್ತಿರುವ ಪ್ರತಿಯೊಬ್ಬರಿಗೂ ತನ್ನ ಕೃತಜ್ಞತೆಯನ್ನು ಸಲ್ಲಿಸಿ ಶಾಲಾ ದಾಖಲಾತಿಯ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಹಾಗೂ ವೆಂಕಟೇಶ್ ಪ್ರಭು ಇವರು ವೇದಿಕೆಯಲ್ಲಿ ದೇಣಿಗೆಯಾಗಿ ನೀಡಿದ 10,000 ರೂಪಾಯಿಗಳನ್ನು ಶಾಲಾ ಬ್ಯಾಂಡ್ ಸೆಟ್‌ನ ಸಮವಸ್ತ್ರಕ್ಕಾಗಿ ಉಪಯೋಗಿಸಿಕೊಳ್ಳುವುದಾಗಿ ಭರವಸೆ ನೀಡಿ ಕೃತಜ್ಞತೆ ಸಲ್ಲಿಸಿದರು. ಶಾಲಾ ವಿದ್ಯಾರ್ಥಿ ನಾಯಕಿಯಾಗಿ ಆಯ್ಕೆಯಾದ ಶ್ರೇಯಾ ಹಾಗೂ ವಿರೋಧ ಪಕ್ಷದ ನಾಯಕಿಯಾಗಿ ಆಯ್ಕೆಯಾದ ತನ್ವಿ ಇವರು ತಮ್ಮ ಭಾಷಣದಲ್ಲಿ ಶಾಲೆಯ ಅಭಿವೃದ್ಧಿಯಲ್ಲಿ ತನ್ನ ಜವಾಬ್ದಾರಿಯ ಬಗ್ಗೆ ಮಾತನಾಡಿ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಸಿ ಗೆಲ್ಲಿಸಿದ ವಿದ್ಯಾರ್ಥಿಗಳಿಗೆ ಧನ್ಯವಾದ ಸಲ್ಲಿಸಿದರು. ಮಂಜುಳಾ ಜೈನ್ ಇವರು ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿದರು. ದಿವ್ಯಶ್ರೀ ಧನ್ಯವಾದಗೈದರು. ಮಂಜುಳಾ ಪಿ. ಇವರು ಕಾರ್ಯಕ್ರಮವನ್ನು ನಿರೂಪಿಸಿದರು.