”ಕ್ರೀವಾ-2024” ಸಾಂಸ್ಕೃತಿಕ ಕಾರ್ಯಕ್ರಮ
Published Date: 30-May-2024 Link-Copied
ಎಸ್.ಡಿ.ಎಂ. ಫಿಸಿಯೋಥೆರಪಿ ಕಾಲೇಜಿನ ವಿದ್ಯಾರ್ಥಿಗಳಿಗೆ “ಕ್ರೀವಾ 2024”-“ವಸಂತ- ಹೊಸ ಹೆಜ್ಜೆ, ಹೊಸ ಆರಂಭ” ಎಂಬ ಧ್ಯೇಯೆಯೊಂದಿಗೆ ಮೇ 29ರಿಂದ ಜೂನ್ 1, 2024ವರೆಗೆ ನಾಲ್ಕು ದಿನಗಳ ಸಾಂಸ್ಕೃತಿಕ ಕಾರ್ಯಕ್ರವನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಪ್ರದರ್ಶಿಸಲು "ಕ್ರೀವಾ 2024" ಕಲೆ, ಸಂಸ್ಕೃತಿ ಮತ್ತು ಸಂಗೀತಗಳನ್ನೊಳಗೊಂಡ ವಾರ್ಷಿಕ ಸಾಂಸ್ಕೃತಿಕ ವೇದಿಕೆಯಾಗಿದೆ. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ ಮತ್ತು ನರರೋಗ ವಿಭಾಗದ ಮುಖ್ಯಸ್ಥರಾದ ಡಾ. ಬಸವರಾಜ ಬಣಕಾರ ಮುಖ್ಯ ಅತಿಥಿಗಳಾಗಿದ್ದು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡುತ್ತಾ: ಪ್ರಕೃತಿಯ ಸಂರಕ್ಷಣೆಯು ಬಹಳ ಮುಖ್ಯವಾಗಿದೆ. ಪ್ರತಿಯೊಬ್ಬರೂ ಜೀವನದಲ್ಲಿ ಉತ್ತಮ ಗುರಿಯನ್ನು ಹೊಂದಬೇಕು ಮತ್ತು ಯಶಸ್ಸು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ನಾವು ಮಾಡುವ ಕೆಲಸವು ಉತ್ತಮ ಫಲಿತಾಂಶಗಳನ್ನು ನೀಡಿವುದರೊಂದಿಗೆ ಇತರರನ್ನು ತೃಪ್ತಿಪಡಿಸಬೇಕು. ನಿರಂತರ ಪರಿಶ್ರಮ ಮತ್ತು ಉತ್ತಮ ಅಭ್ಯಾಸದಿಂದ ಸಾಧನೆಗಳ ಶಿಖರವನ್ನೇರಬಹುದು. ನಾವು ವೃತ್ತಿ ಮತ್ತು ವೈಯಕ್ತಿಕ ಜೀವನವನ್ನು ಸಮತೋಲನದಿಂದ ಮುನ್ನಡೆಸಬೇಕು. ವಿಶಾಲ ಮನೋಭಾವನೆಯಿಂದ ವಿದ್ಯಾರ್ಥಿಗಳು ಅತ್ಯುತ್ತಮ ಸೇವೆಯನ್ನು ನೀಡಲು ಸಾಧ್ಯ. ನೈತಿಕತೆ ಮತ್ತು ಉದ್ದೇಶ ಶಿಕ್ಷಣದ ಪ್ರಮುಖ ಉದ್ದೇಶವಾಗಿರಬೇಕು. ಎಸ್. ಡಿ. ಎಂ. ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್ ಅವರು “ಕ್ರೀವಾ-2024” ಲಾಂಛನವನ್ನು ಅನಾವರಣಗೊಳಿಸಿದರು. ಈ ಕಾರ್ಯಕ್ರಮದಲ್ಲಿ ಸಹ ಉಪಕುಲಪತಿಗಳಾದ ವಿ. ಜೀವಂಧರ ಕುಮಾರ, ಕುಲಸಚಿವರಾದ ಡಾ. ಚಿದೇಂದ್ರ ಶೆಟ್ಟರ, ಆಡಳಿತ ನಿರ್ದೇಶಕರಾದ ಸಾಕೇತ ಶೆಟ್ಟಿ, ಎಸ್.ಡಿ.ಎಂ. ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಜಯ ಪರಮಾರ ಉಪಸ್ಥಿತರಿದ್ದರು. ಡಾ. ಸಂಗೀತಾ ಅಪ್ಪಣ್ಣವರು ಅತಿಥಿಗಳನ್ನು ಸ್ವಾಗತಿಸಿದರು. ರಶ್ಮಿ ಭಟ್ ರವರು ಕ್ರೀವಾದ ಅವಲೋಕನ ನೀಡಿದರು. ಚಾಂದನಿ ಮತ್ತು ಅಂಕಿತ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಜ್ಯೋತಿ ಜೀವನ್‌ರವರು ವಂದನಾರ್ಪಣೆ ಸಲ್ಲಿಸಿದರು.