ವೇಣೂರು, ಮೇ 4: ಮಹಾಮಸ್ತಕಾಭಿಷೇಕ ಸಂಪನ್ನ
Published Date: 06-May-2024 Link-Copied
ವೇಣೂರು ಫಲ್ಗುಣಿ ತಟದಲ್ಲಿ ನೆಲೆಸಿರುವ ವಿರಾಟ ವಿರಾಗಿ ಭಗವಾನ್ ಬಾಹುಬಲಿ ಸ್ವಾಮಿಗೆ ಫೆ. 22ರಿಂದ ಆರಂಭಗೊಂಡು ಮಾ. 1ರ ವರೆಗೆ ನೆರವೇರಿದ ಮಹಾಮಸ್ತಕಾಭಿಷೇಕದ ಬಳಿಕ ಪ್ರಮುಖ ದಿನಗಳಲ್ಲಿ ನೆರವೇರುವ ಮಸ್ತಕಾಭಿಷೇಕಗಳಲ್ಲಿ ಕೊನೆಯ ಮಹಾಮಸ್ತಕಾಭಿಷೇಕವು ಶನಿವಾರ ರಾತ್ರಿ ಶ್ರದ್ಧಾಭಕ್ತಿಯಿಂದ ನೆರವೇರಿತು. ಮಸ್ತಕಾಭಿಷೇಕ ಪ್ರಾರಂಭವಾಗುವ ಮೊದಲು ಭಗವಾನ್ ಮಹಾವೀರ ಸ್ವಾಮಿ ನಿರ್ವಾಣ ಹಾಗೂ ಚಾರಿತ್ರ ಚಕ್ರವರ್ತಿ ೧೦೮ ಶಾಂತಿ ಸಾಗರ ಮುನಿಮಹಾರಾಜರ ಆಚಾರ್ಯ ಪದರೋಹಣ, ಆಚಾರ್ಯ ೧೦೮ ವಿದ್ಯಾನಂದ ಮುನಿಮಹಾರಾಜರ ಜನ್ಮ ಶತಾಬ್ಧಿ ನಿಮಿತ್ತ ವೇಣೂರು ಪಾರ್ಶ್ವನಾಥ ಬಸದಿಯಿಂದ ಕಲ್ಲುಬಸದಿವರೆಗೆ ರಜತ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಮೂಡುಬಿದಿರೆ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ನೇತೃತ್ವದಲ್ಲಿ, ಪ್ರಥಮ ಕಲಶವನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರು ನೆರವೇರಿಸಿದರು. ಪಟ್ಣ ಶೆಟ್ಟಿ ಸುದೇಶ್ ಕುಮಾರ್, ಪಡುಬೀಡು ಕಿನ್ಯಕ್ಕ ಅರಸ ರತ್ನಕರ ಬಲ್ಲಾಳ್, ಸತೀಶ್ ಪಡಿವಾಳ್, ಶ್ರೀಮಂದರ್ ಅರಿಗಾ ಕುಳವಳಿಕೆ ಕಡಬ, ಸಂಜಯಂತ್ ಕುಮಾರ್, ಧನಕೀರ್ತಿ ಬಲಿಪ ಕ್ರಮವಾಗಿ ವಿವಿಧ ಕಲಶ ನೆರವೇರಿಸಿದರು. ಮೂಡುಬಿದಿರೆ ಜೈನ ಮಠದ ವತಿಯಿಂದ ಅಮೆರಿಕಾದಲ್ಲಿ ವೈದ್ಯಕೀಯ ಸೇವೆ ಸಲ್ಲಿಸಿ, ಅಷ್ಟ ಗಂಧ ಅಭಿಷೇಕ ವಹಿಸಿಕೊಂಡ ಡಾ. ವಸಂತ ಕುಮಾರಯ್ಯ ದಂಪತಿ, ಅಜಿಲ ಅರಸರು, ಪ್ರವೀಣ್ ಇಂದ್ರ, ಅಭಯ ಚಂದ್ರ ಜೈನ್, ಪುಷ್ಪರಾಜ್ ಜೈನ್, ಶಿವಪ್ರಸಾದ್ ಅಜಿಲ ಹಾಗೂ ಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಾನಾ ಮಹಾನೀಯರನ್ನು ಸ್ವಾಮೀಜಿಯವರು ಗೌರವಿಸಿದರು. ಚಂದನ, ಸರ್ವ ಔಷಧ, ಸುಗಂಧ ಕಲಶ, ಕನಕವೃಷ್ಟಿ, ಪುಷ್ಪವೃಷ್ಟಿ ಈ ಬಾರಿಯ ಕೊನೆಯ ಮಸ್ತಕಾಭಿಷೇಕದಂದು ಹೆಚ್ಚುವರಿ ಅಭಿಷೇಕ ಹಮ್ಮಿಕೊಳ್ಳಲಾಗಿತ್ತು. 2036ರಲ್ಲಿ ಮುಂದಿನ ಅಭಿಷೇಕ: ವೇಣೂರಿನಲ್ಲಿ 12 ವರ್ಷಗಳ ಬಳಿಕ ನಡೆದ ತ್ಯಾಗವೀರ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಸರ್ವಜನ ಶಾಂತಿಯ ಸಂದೇಶವಾಗಿ ಮೂಡಿಬಂದಿದೆ. 30 ಉಪಸಮಿತಿಗಳ ಅಚ್ಚುಕಟ್ಟಿನ ನಿರ್ವಹಣೆಯೊಂದಿಗೆ 9 ದಿನಗಳು ಇರುಳ ಬೆಳಕಲ್ಲಿ ನಡೆದ ಮಹಾಮಸ್ತಕಾಭಿಷೇಕ ಸ್ವರ್ಣ ಯುಗಕ್ಕೆ ಸಾಕ್ಷಿಯಾಗಿತ್ತು. ಬಳಿಕ ಪ್ರಮುಖ ದಿನಗಳಲ್ಲಿ ನೆರವೇರಿದ ಅಭಿಷೇಕದ ಕೊನೆಯ ಪ್ರಕ್ರಿಯೆ ಮೇ 4ರಂದು ಸಂಪನ್ನಗೊಂಡಿತು. ಮುಂದೆ ವೇಣೂರಿನ ವಿರಾಟ ವಿರಾಗಿಗೆ 2036ರಲ್ಲಿ ಮಹಾಮಸ್ತಕಾಭಿಷೇಕ ನೆರವೇರಲಿದೆ.