ನಾರಾವಿ ಬಸದಿ: ಜಿನಬಿಂಬ ಪ್ರತಿಷ್ಠಾ ಮಹೋತ್ಸವದ ಎರಡನೇ ದಿನ
Published Date: 05-May-2024 Link-Copied
ಬಸದಿಗೆ ಹೋಗಿ ದೇವರದರ್ಶನ ಮಾಡಿ, ವೃತ-ನಿಯಮಗಳೊಂದಿಗೆ ಜಪ, ತಪ, ಧ್ಯಾನ ಮಾಡಿದಾಗ ಆರೋಗ್ಯ ಸುಧಾರಣೆಯೊಂದಿಗೆ ಮಾನಸಿಕ ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಶನಿವಾರ ನಾರಾವಿ ಬಸದಿಯಲ್ಲಿ ಧಾಮಸಂಪ್ರೋಕ್ಷಣಾಪೂರ್ವಕ ಜಿನಬಿಂಬ ಪ್ರತಿಷ್ಠಾಮಹೋತ್ಸವ ಸಂದರ್ಭ ಆಯೋಜಿಸಿದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದಾನ, ಧರ್ಮಾದಿ ಸತ್ಕಾರ್ಯಗಳಿಗೆ ಅಂತಸ್ತು, ಸಂಪತ್ತಿನ ಇತಿ-ಮಿತಿ ಇರುವುದಿಲ್ಲ. ಶ್ರಾವಕರು, ಶ್ರಾವಕಿಯರು ಹಾಗೂ ಉದಾರ ದಾನಿಗಳು ಶ್ರದ್ಧಾ, ಭಕ್ತಿಯೊಂದಿಗೆ ತನು, ಮನ, ಧನದೊಂದಿಗೆ ನೀಡಿದ ದಾನ ಮತ್ತು ಸಕ್ರಿಯ ಸಹಕಾರದಿಂದ ಬಸದಿಯು ಆಕರ್ಷಕವಾಗಿ ಮೂಡಿ ಬಂದಿದೆ. ಬಸದಿಗೆ ಬಂದಾಗ ಇಲ್ಲಿ ಸ್ವಲ್ಪ ಹೊತ್ತು ಇದ್ದು ಧ್ಯಾನ, ಪ್ರಾರ್ಥನೆ, ಜಪ-ತಪ ಮಾಡುವ ಪ್ರೇರಣೆ ಸಿಗುತ್ತದೆ. ಇಂತಹ ಪವಿತ್ರ ಶ್ರದ್ಧಾ ಕೇಂದ್ರಗಳಿಂದ ಜೈನಧರ್ಮದ ಅಹಿಂಸೆ, ತ್ಯಾಗ, ಸಂಯಮ, ತಾಳ್ಮೆ ಮೊದಲಾದ ಮಾನವೀಯ ಮೌಲ್ಯಗಳೊಂದಿಗೆ ಆದರ್ಶ ಜೀವನ ನಡೆಸಲು ಸ್ಪೂರ್ತಿ, ಪ್ರೇರಣೆ ಸಿಗುತ್ತದೆ. ಜೈನರ ಪ್ರಭಾವದಿಂದ ಅನ್ಯಧರ್ಮಿಯರು ಕೂಡಾ ಮದ್ಯ, ಮಾಂಸ, ಮಧು ತ್ಯಾಗ, ರಾತ್ರಿಭೋಜನ ತ್ಯಾಗ ಮೊದಲಾದವುಗಳನ್ನು ಪಾಲಿಸಿ ಸಾತ್ವಿಕ ಜೀವನ ನಡೆಸುತ್ತಿರುವುದು ಶ್ಲಾಘನೀಯವಾಗಿದೆ. ನಾರಾವಿ ಬಸದಿ ಅತಿಶಯ ಕ್ಷೇತ್ರವಾಗಿ ಬೆಳೆಯಲಿ, ಬೆಳಗಲಿ ಎಂದು ಹೆಗ್ಗಡೆಯವರು ಹಾರೈಸಿದರು. ಆಶೀರ್ವಚನ ನೀಡಿದ ಕಾರ್ಕಳ ಜೈನಮಠದ ಪರಮ ಪೂಜ್ಯ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿಗಳವರು, ಆಚಾರ್ಯ ಪರಂಪರೆಯಿಂದ ದೇವರು, ಗುರುಗಳು ಮತ್ತು ಶಾಸ್ತ್ರದ ಮೂಲಕ ಧರ್ಮಪ್ರಭಾವನೆಯಾಗುತ್ತಿದೆ. ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಬಿಂಬ ಪ್ರತಿಷ್ಠಾಪನೆ ಮಾಡಿದಾಗ ಮಂದಿರದಲ್ಲಿ ಸಾನ್ನಿಧ್ಯ ವೃದ್ಧಿಯೊಂದಿಗೆ ಶ್ರದ್ಧಾ ಕೇಂದ್ರವಾಗಿ ಬೆಳೆಯುತ್ತದೆ, ಬೆಳಗುತ್ತದೆ ಎಂದರು. ಮೂಡಬಿದ್ರೆಯ ವಕೀಲರಾದ ಶ್ವೇತಾ ಜೈನ್, ಧಾರ್ಮಿಕ ಉಪನ್ಯಾಸ ನೀಡಿ, ಧರ್ಮದ ಮರ್ಮವನ್ನರಿತು ನಿತ್ಯವೂ ಅನುಷ್ಠಾನಗೊಳಿಸಬೇಕು. ಆತ್ಮ ಬೇರೆ, ದೇಹ ಬೇರೆ ಎಂಬ ಸತ್ಯವನ್ನರಿತು ದೇವರ ದರ್ಶನ, ಪ್ರಾರ್ಥನೆ, ಧ್ಯಾನ, ಉಪವಾಸ ಮೊದಲಾದ ವೃತ-ನಿಯಮಗಳ ಪಾಲನೆಯೊಂದಿಗೆ ಕರ್ಮನಿರ್ಜರೆ ಮಾಡಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ಧಾರ್ಮಿಕ ಸಂಸ್ಕಾರ ನೀಡಬೇಕು ಎಂದು ಅವರು ಸಲಹೆ ನೀಡಿದರು. ಕಾರ್ಕಳದ ಹಿರಿಯ ವಕೀಲ ಎಂ. ಕೆ. ವಿಜಯಕುಮಾರ್ ಮಾತನಾಡಿ, ಬಸದಿ ಜೀರ್ಣೋದ್ಧಾರದಿಂದ ಧರ್ಮಜಾಗೃತಿಯೊಂದಿಗೆ ಧರ್ಮಪ್ರಭಾವನೆಯೂ ಆಗುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಯುವಜನತೆ ಸಕ್ರಿಯವಾಗಿ ಭಾಗವಹಿಸುತ್ತಿರುವುದು ಶ್ಲಾಘನೀಯವಾಗಿದೆ. ಜೈನಧರ್ಮ ಸಾರ್ವಕಾಲಿಕ ಧರ್ಮವಾಗಿದ್ದು, ಬಸದಿಗಳ ಜೀರ್ಣೋದ್ಧಾರದಿಂದ ಧರ್ಮಪ್ರಭಾವನೆಯಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಮೂಡಬಿದ್ರೆಯ ನ್ಯಾಯವಾದಿ ಶ್ವೇತಾ ಜೈನ್ ಅವರನ್ನು ಅಭಿನಂದಿಸಿದರು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಮೂಡಬಿದ್ರೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ ಜೈನ್, ವಸಂತ ಭಟ್ ನಾರಾವಿ ಉಪಸ್ಥಿತರಿದ್ದರು. ಅರವಿಂದ ಜೈನ್ ಸ್ವಾಗತಿಸಿದರು. ಕರುಣಾಕರ ಜೈನ್ ಕಾರ್ಯಕ್ರಮ ನಿರ್ವಹಿಸಿ, ಧನ್ಯವಾದವಿತ್ತರು.