ಧರ್ಮಸ್ಥಳ: ವಿಷು ಜಾತ್ರೆ ಸಂಪನ್ನ
Published Date: 23-Apr-2024 Link-Copied
ಬೆಳ್ತಂಗಡಿ, ಏ. 23: ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ವಾರ್ಷಿಕ ವಿಷು ಜಾತ್ರಾ ಮಹೋತ್ಸವವು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ, ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಎ. 13ರಂದು ಮೊದಲ್ಗೊಂಡು ಎ. 23ರಂದು ಶ್ರೀ ಮಂಜುನಾಥ ಸ್ವಾಮಿಯ ಉತ್ಸವ ಮೂರ್ತಿ ಓಕುಳಿಯಾಗಿ ನೇತ್ರಾವತಿ ನದಿಯಲ್ಲಿ ಅವಭೃಥ ಸ್ನಾನ ಹಾಗೂ ಧ್ವಜಾವರೋಹಣದೊಂದಿಗೆ ಭಕ್ತಿ, ಸಂಭ್ರಮದಿಂದ ವಿಧ್ಯುಕ್ತವಾಗಿ ಸಂಪನ್ನಗೊಂಡಿತು. ಎ.22ರಂದು ರಾತ್ರಿ ಶ್ರೀ ಸ್ವಾಮಿಯ ಮಹಾರಥೋತ್ಸವ ಪ್ರಯುಕ್ತ ದೇವಸ್ಥಾನದ ಒಳಾಂಗಣದಲ್ಲಿ ಉತ್ಸವ ಮೂರ್ತಿಯ ಉಡ್ಕು ಹಾಗೂ ವಿವಿಧ ವಾದ್ಯ ವೈಭವಗಳ ನಾಲ್ಕು ಸುತ್ತು ಬಲಿ ಉತ್ಸವ ನಡೆದು, ಹೊರಾಂಗಣದಲ್ಲಿ ಚೆಂಡೆ, ನಾದಸ್ವರ, ಶಂಖ ಜಾಗಟೆ, ಬ್ಯಾಂಡ್ ವಾಲಗ, ಸರ್ವ ವಾದ್ಯ, ತಟ್ಟಿರಾಯ ಸಹಿತ ಪ್ರದಕ್ಷಿಣೆ ಬಂದು ಬ್ರಹ್ಮ ರಥಕ್ಕೆ ಸುತ್ತು ಪ್ರದಕ್ಷಿಣೆ ಬಂದು ರಥಾರೋಹಣ ನಡೆಯಿತು. ಕ್ಷೇತ್ರದ ಸಕಲ ಬಿರುದಾವಲಿಗಳೊಂದಿಗೆ ಬಸವ, ಎರಡು ಆನೆಗಳು, ಸಹಸ್ರಾರು ಭಕ್ತರು ಮಹೋತ್ಸವದಲ್ಲಿ ಭಾಗಿಗಳಾಗಿದ್ದರು. ರಥಕ್ಕೆ ಭಕ್ತರು ಬಾಳೆಹಣ್ಣು ಎಸೆದು ತಮ್ಮ ಭಕ್ತಿ ಸಮರ್ಪಿಸಿದರು. ಡಾ| ಡಿ.ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಹೆಗ್ಗಡೆ ಕುಟುಂಬಸ್ಥರು, ಸೋನಿಯಾ ವರ್ಮಾ, ಕೆ.ಎನ್.ಜನಾರ್ದನ, ಜನಾರ್ದನ ಎಂ., ಡಾ| ಸತೀಶ್ಚಂದ್ರ ಎಸ್., ಡಾ| ಬಿ.ಎ.ಕುಮಾರ ಹೆಗ್ಡೆ, ಡಾ| ಶ್ರೀನಾಥ್ ಎಂ.ಪಿ., ವೀರು ಶೆಟ್ಟಿ, ಲಕ್ಷ್ಮೀನಾರಾಯಣ ರಾವ್, ಕ್ಷೇತ್ರದ ಅರ್ಚಕವೃಂದ, ಸಿಬ್ಬಂದಿ ಹಾಗೂ ಊರ ಪರವೂರ ಭಕ್ತರು ಪಾಲ್ಗೊಂಡಿದ್ದರು.