ಶಿವನಾಮ ಸ್ಮರಣೆಯಿಂದ ಸಕಲದೋಷಗಳ ಪರಿಹಾರ
Published Date: 08-Mar-2024 Link-Copied
ಧರ್ಮಸ್ಥಳ,ಮಾ. 8: ನೀನೊಲಿದರೆ ಕೊರಡು ಕೊನರುವುದು, ವಿಷವೂ ಅಮೃತವಾಗುವುದು ಎಂಬಂತೆ ಪರಿಶುದ್ಧ ಮನದಿಂದ ಶಿವರಾತ್ರಿಯ ಶುಭರಾತ್ರಿಯಲ್ಲಿ ಶಿವನಾಮ ಸ್ಮರಣೆ ಮಾಡಿದರೆ ಸಕಲದೋಷಗಳ ಪರಿಹಾರವಾಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಪ್ರವಚನ ಮಂಟಪದಲ್ಲಿ ಅಹೋರಾತ್ರಿ ಶಿವನಾಮ ಪಂಚಾಕ್ಷರಿ ಪಠಣಕ್ಕೆ ಚಾಲನೆ ನೀಡಿ ಮಾತನಾಡಿದರು. ನಮ್ಮ ಎಲ್ಲಾ ಮನೋವಿಕಾರಗಳನ್ನು ದೂರಮಾಡಿ ಸಕಲ ಜೀವಿಗಳಿಗೆ ಲೇಸನ್ನೆ ಬಯಸಿ ಉನ್ನತ ಸಾಧನೆ ಮಾಡಬೇಕು. ಶಿವನ ಜೊತೆಗೆ ಶಿವಭಕ್ತರ ಸೇವೆ ಮಾಡಿದರೂ ಪುಣ್ಯ ಬರುತ್ತದೆ ಎಂದು ಅವರು ಹೇಳಿದರು. ಮಹಿಳೆಯರನ್ನು ಗೌರವದಿಂದ ಕಾಣಬೇಕು. ಅವರು ನೊಂದು ಕಣ್ಣೀರು ಹಾಕಿದರೂ ಅದು ಶಾಪವಾಗಿ ಪರಿಣಮಿಸುತ್ತದೆ. ಹಿತ-ಮಿತ, ಸುಮಧುರ ಮಾತುಗಳನ್ನಾಡಬೇಕು. ಮಾತೇ ಮಾಣಿಕ್ಯ. ಮಾತು ಬಿಡ ಮಂಜುನಾಥ ಎಂಬ ಮಾತನ್ನು ಎಲ್ಲರೂ ಸದಾ ನೆನಪಿಟ್ಟುಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು. ಮನ, ವಚನ, ಕಾಯದಿಂದ ಪರಿಶುದ್ಧ, ದೃಢಸಂಕಲ್ಪ ಮತ್ತು ಪರಿಶುದ್ಧ ಭಕ್ತಿಯಿಂದ ದೇವರ ಅನುಗ್ರಹಕ್ಕೆ ಪಾತ್ರರಾಗಿ ಉನ್ನತ ಸಾಧನೆ ಮಾಡಬಹುದು. ಶಿವರಾತ್ರಿ ಒಂದೇ ರಾತ್ರಿಗೆ ಸೀಮಿತವಾಗದೆ ಪ್ರತಿ ರಾತ್ರಿಯೂ ಶಿವರಾತ್ರಿಯಾಗಿ, ಶುಭರಾತ್ರಿಯಾಗಿ ಎಲ್ಲೆಲ್ಲೂ ಸುಖ-ಶಾಂತಿ, ನೆಮ್ಮದಿ ನೆಲೆಸಲೆಂದು ಅವರು ಹಾರೈಸಿದರು. ಬಳಿಕ ಡಾ. ಪವನ್ ಸಂಪಾದಿಸಿದ “ವೈದ್ಯಾಮೃತ” ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಪಾದಯಾತ್ರೆಯ ರೂವಾರಿ ಹನುಮಂತಪ್ಪ ಗುರೂಜಿ, ಮರಿಯಪ್ಪ ಉಪಸ್ಥಿತರಿದ್ದರು. ಶಿವರಾತ್ರಿ ಪ್ರಯುಕ್ತ ಆಹೋರಾತ್ರಿ ಜಾಗರಣೆಯಿಂದಾಗಿ ಧರ್ಮಸ್ಥಳ ಅನ್ನಛತ್ರದ ಸೇವೆ ಇರುವುದಿಲ್ಲ. ಈ ಹಿನ್ನಲೆಯಲ್ಲಿ ಭಕ್ತರು ಭಕ್ತರಿಗಾಗಿ ವಿವಿಧ ಉಪಾಹಾರ ವ್ಯವಸ್ಥೆ ಕಲ್ಪಿಸಿರುವುದು ವಿಶೇಷ. ಈ ಬಾರಿ ಧರ್ಮಸ್ಥಳದಲ್ಲಿ ಧರ್ಮಶಾಸ್ತ ಅನ್ನದಾನ ಸಮಿತಿ, ಶ್ರೀ ಪಾಪಣ್ಣ ಗೆಳೆಯರ ಬಳಗ, ತಿಮ್ಮಾರೆಡ್ಡಿ, ಯಲಹಂಕ, ಬೆಂಗಳೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಅನ್ನಸಂತರ್ಪಣಾ ಸಮಿತಿ, ನಾಗರಬಾವಿ, ಬೆಂಗಳೂರು, ಜನಜಾಗೃತಿ ವೇದಿಕೆ, ಹೊಸಪೇಟೆ, ವಿಜಯನಗರ, ಶ್ರೀ ಮಂಜುನಾಥ ಸ್ವಾಮಿ ಸೇವಾ ಸಮಿತಿ, ಬೆಂಗಳೂರು ಇನ್ನು ಹಲವಾರು ಸಂಘಟನೆಗಳು ಸೇರಿ ಶುಕ್ರವಾರ ರಾತ್ರಿ ಭಕ್ತರಿಗೆ ಉಪಾಹಾರ ನೀಡಿದರು.