ಫೆ. 26: ಮಹಾಮಸ್ತಕಾಭಿಷೇಕದ 5ನೇ ದಿನದ ಧಾರ್ಮಿಕ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ


Logo

Published Date: 27-Feb-2024 Link-Copied

"ದಕ್ಷಿಣ ಭಾರತದಲ್ಲಿ ಜೈನ ಪರಂಪರೆಯ ಪ್ರಭಾವ ಚಂದ್ರಗುಪ್ತ ಮೌರ್ಯನ ಕಾಲದಿಂದಲೂ ಅನೇಕ ಕೊಡುಗೆಗಳ ಮೂಲಕ ಬೆಳೆದು ಬಂದಿತ್ತು. ಮೈಸೂರು ಸಂಸ್ಥಾನಕ್ಕೂ ಜೈನ ಪರಂಪರೆಯ ಮಾರ್ಗದರ್ಶನವಿದ್ದು, ಸಂಸ್ಥಾನದಿಂದಲೂ ಜೈನ ಪರಂಪರೆಗೆ ದೊಡ್ಡ ಕೊಡುಗೆ ನೀಡಿದೆ" ಎಂದು ಮೈಸೂರು ಮಹಾ ಸಂಸ್ಥಾನದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ 5ನೇ ದಿನವಾದ ಫೆ. 26ರಂದು ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುನಿಶ್ರೀ ಅಮೋಘಕೀರ್ತಿ ಮಹಾರಾಜರು ಪ್ರವಚನ ನೀಡಿ, ವ್ಯಕ್ತಿಯ ಸುಖ-ಭೋಗ, ವೈಭವ, ಆಡಂಬರ ನೋಡಿ ಗೌರವಿಸುವುದಲ್ಲ. ಮಹಾಮಸ್ತಕಾಭಿಷೇಕದಿಂದ ಮಾನಸಿಕ ಪರಿವರ್ತನೆಯೊಂದಿಗೆ ಸಾಮಾಜಿಕ ಸುಧಾರಣೆಯಾಗಬೇಕು ಎಂದರು. ಮುನಿಶ್ರೀ ಅಮರಕೀರ್ತಿ ಮುನಿಮಹಾರಾಜರು ಆಶೀರ್ವಚನ ನೀಡಿ ಪರಿಶುದ್ಧವಾದ ಅಚಲ ಭಕ್ತಿಯಿಂದ ಮಾನವನೇ ಮಾಧವನಾಗಬಲ್ಲ ಆತ್ಮನೇ ಪರಮಾತ್ಮನಾಗುತ್ತಾನೆ. ಅದಕ್ಕಾಗಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಎಂದರು. ಮೂಡುಬಿದಿರೆ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಮಹಾಸ್ವಾಮೀಜಿಗಳವರು ಆಶೀರ್ವಚನ ನೀಡಿದರು. ಜಮಖಂಡಿಯ ಸಾಹಿತಿ ಬಿ.ಪಿ. ನ್ಯಾಮಗೌಡ ವಿಶೇಷ ಉಪನ್ಯಾಸ ನೀಡಿದರು. ಅಂಚೆ ಕಾರ್ಡ್ ಬಿಡುಗಡೆ: ಕರ್ನಾಟಕದ ಮುಖ್ಯ ಅಂಚೆ ಮಹಾಪ್ರಬಂಧಕ ಶಿರ್ತಾಡಿ ರಾಜೇಂದ್ರ ಕುಮಾರ್, ಅಂಚೆ ಇಲಾಖೆ ಮೂಲಕ ರೂಪಿಸಿದ ಬಾಹುಬಲಿ ಸ್ವಾಮಿಯ ಸಚಿತ್ರ ಅಂಚೆ ಕಾರ್ಡ್‌ನ್ನು ಮೈಸೂರು ಮಹಾರಾಜರು ಬಿಡುಗಡೆಗೊಳಿಸಿದರು. ಕು| ಮೌಲ್ಯ ಅವರ "ಬಾಹುಬಲಿ ಗೀತಾಮೃತ" ಗಾನಲಹರಿ ಬಿಡುಗಡೆಗೊಳಿಸಿ ಅವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ವಿ. ಪ್ರವೀಣ್ ಕುಮಾರ್ ಇಂದ್ರ, ಪಿ. ಜಯರಾಜ್ ಕಂಬಳಿ ಮತ್ತು ಹುಬ್ಬಳ್ಳಿಯ ಮಹಾವೀರ ಕುಂದೂರು ಉಪಸ್ಥಿತರಿದ್ದರು. ಸೇವಾಕರ್ತರಾದ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಸ್ವಾಗತಿಸಿದರು. ಕಾರ್ಯದರ್ಶಿ ರಶ್ಮಿತಾ ಜೈನ್ ವಂದಿಸಿದರು. ಆಡಳಿತಾಧಿಕಾರಿ ಬಿ.ಪಿ. ಸಂಪತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img