ಫೆ. 25: ಮಹಾಮಸ್ತಕಾಭಿಷೇಕದ 4ನೇ ದಿನದ ಧಾರ್ಮಿಕ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ
Published Date: 26-Feb-2024 Link-Copied
"ಅಧಿಕಾರ, ಶ್ರೀಮಂತಿಕೆಯಿಂದ ಹೊರತಾದ ಜೀವನ ಶ್ರೇಷ್ಠ ಕ್ಷಣಗಳಿವೆ ಎಂಬುದಕ್ಕೆ ಮಹಾಚಕ್ರವರ್ತಿ ಬಾಹುಬಲಿಯ ತ್ಯಾಗವೇ ಸಾಕ್ಷಿ. ದೈವಾರಾಧನೆ ಮೂಲಕ ಸಾಮಾಜಿಕ ಏಕತೆಯನ್ನು ಸಾರಿದ ಸಮುದಾಯ ಜೈನರದು. ಎಲ್ಲಾ ಕ್ಷೇತ್ರದಲ್ಲೂ ಜಿಲ್ಲೆಗೆ ಅತೀ ಹೆಚ್ಚಿನ ಕೊಡುಗೆಯನ್ನು ಜೈನ ಸಮುದಾಯ ನೀಡಿದೆ" ಎಂದು ಸಂಸದ ನಳಿನ್ ಕುಮಾರ್ ಕಟೀಲ್ ವೇಣೂರಿನ ಭ| ಬಾಹುಬಲಿ ಮಸ್ತಕಾಭಿಷೇಕದ ನಾಲ್ಕನೇ ದಿನವಾದ ರವಿವಾರ(ಫೆ. 25)ದಂದು ಭರತೇಶ ಸಮುದಾಯ ಭವನದಲ್ಲಿ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಲೋಕಸಭಾ ನಿಧಿಯಿಂದ ಕ್ಷೇತ್ರದ ಅಭಿವೃದ್ಧಿಗೆ 20 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಈ ಮೂಲಕ ಬಾಹುಬಲಿಯ ಸಂದೇಶವನ್ನು ರಾಜಕೀಯ ಜೀವನಕ್ಕೂ ಅಳವಡಿಸುವ ಕಾರ್ಯವಾಗಲಿ ಎಂದು ಆಶಯ ವ್ಯಕ್ತಪಡಿಸಿದರು. ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ಜಗತ್ತಿಗೆ ಅಹಿಂಸೆಯ ಸಂದೇಶ ಸಾರಿದ ಶ್ರೇಷ್ಠ ಧರ್ಮ ಜೈನ ಧರ್ಮ ಎಂದು ಹೇಳಿದರು. ನಂತರ ಸ್ವರ್ಣಲತಾ ನೆಲ್ಲಿಕಾರು ಬರೆದಿರುವ ರಾಜೇಶ್ ಭಟ್ ಸಂಗೀತ ಸಂಯೋಜನೆಯಲ್ಲಿ ವೃತಿಕ್ ಜೈನ್ ಪಡ್ಯೋಡಿಗುತ್ತು ಧ್ವನಿಯಲ್ಲಿ ಮೂಡಿ ಬಂದ "ವೇಣುಪುರದಿ ಭುಜಬಲೀಶನೇ" ಎಂಬ ಹಾಡಿನ ಸಿ.ಡಿ. ಬಿಡುಗಡೆ ಮಾಡಲಾಯಿತು. ವಿಶ್ರಾಂತ ಪ್ರಾಂಶುಪಾಲ ತುಮಕೂರಿನ ಡಾ| ಎಸ್.ಪಿ. ಪದ್ಮಪ್ರಸಾದ್ ಅವರು ವಿಶೇಷ ಉಪನ್ಯಾಸ ನೀಡಿದರು. ಸೇವಾಕರ್ತರಾದ ಪೆರಿಂಜೆ ಪಡ್ಯೋಡಿಗುತ್ತು ಜೀವಂಧರ್ ಕುಮಾರ್ ಮತ್ತು ಸುಲೋಚನಾ ಅವರನ್ನು ಮಹಾಮಸ್ತಕಾಭಿಷೇಕ ಸಮಿತಿಯ ವತಿಯಿಂದ ಕಾರ್ಯಾಧ್ಯಕ್ಷ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರು ಸಮ್ಮಾನಿಸಿದರು. ಶಾಸಕರಾದ ಹರೀಶ್ ಪೂಂಜ, ಕೆ. ಪ್ರತಾಪಸಿಂಹ ನಾಯಕ್, ಕೆ. ಹರೀಶ್ ಕುಮಾರ್, ಮಂಜುನಾಥ ಭಂಡಾರಿ, ಸಮಿತಿ ಪ್ರ. ಕಾರ್ಯದರ್ಶಿ ವಿ. ಪ್ರವೀಣ್ ಕುಮಾರ್ ಇಂದ್ರ, ಕೋಶಾಧಿಕಾರಿ ಪಿ. ಜಯರಾಜ್ ಕಂಬಳಿ, ನೋಡಲ್ ಅಧಿಕಾರಿ ಮಾಣಿಕ್ಯ ಎಂ., ವಿಕಾಸ್ ಜೈನ್, ರಮ್ಯಾ ವಿಕಾಸ್ ಮತ್ತು ವಿಶ್ವಾಸ್ ಜೈನ್, ಶುಭರೇಖಾ ವಿಶ್ವಾಸ್ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು. ದಿನದ ಸೇವಾಕರ್ತರಾದ ಪೆರಿಂಜೆ ಪಡ್ಯೋಡಿಗುತ್ತು ಜೀವಂಧರ್ ಕುಮಾರ್ ಸ್ವಾಗತಿಸಿದರು. ಶಿಕ್ಷಕ ನವೀನ್ ಕುಮಾರ್ ವಂದಿಸಿದರು. ಪ್ರಾಂಶುಪಾಲ ಡಾ| ಪ್ರಭಾತ್ ಬಲ್ನಾಡ್ ನಿರೂಪಿಸಿದರು. ಮುಖ್ಯವೇದಿಕೆಯಲ್ಲಿ ಬೆಳಿಗ್ಗೆ ಮೂಡುಬಿದಿರೆ, ಕಾರ್ಕಳ, ಕೆರ್ವಾಶೆ ಜೈನ್ ಮಿಲನ್ ಸದಸ್ಯರಿಂದ ಜಿನಭಜನೆ ಜರುಗಿತು. ರಾತ್ರಿ ಬೆಂಗಳೂರಿನ ಶಂಕರ್ ಶಾನಬೋಗ್ ಮತ್ತು ಬಳಗದವರಿಂದ ಭಕ್ತಿ, ಭಾವ, ಜನಪದಗೀತೆಗಳ ಸಂಯೋಜನೆಯ ಭಕ್ತಿರಸಾಮೃತವು ಜನರನ್ನು ಭಾವನ ಲೋಕಕ್ಕೆ ಕೊಂಡೊಯ್ಯಿತು. ವಸ್ತುಪ್ರದರ್ಶನ ವೇದಿಕೆಯಲ್ಲಿ ರಾತ್ರಿ ಮೂಡುಬಿದಿರೆಯ ಕು| ಅನನ್ಯಾ ರಂಜನಿ ಇವರಿಂದ ಭರತನಾಟ್ಯ ಬಳಿಕ ವೇಣೂರಿನ ಪ್ರತಿಭೆಗಳಿಂದ ನೃತ್ಯ ವೈವಿಧ್ಯ ಹಾಗೂ ವೇಣೂರಿನ ಬಾಹುಬಲಿ ಕಲಾ ತಂಡ ಇವರಿಂದ ತ್ಯಾಗವೀರ ಬಾಹುಬಲಿ ಯಕ್ಷಗಾನ ಪ್ರಸಂಗವು ನಡೆಯಿತು. ಈ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಮನಸೂರೆಗೊಂಡಿತು.