ಮಹಾಮಸ್ತಕಾಭಿಷೇಕದ 5ನೇ ದಿನ - ಫೆ. 26 : ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು
Published Date: 26-Feb-2024 Link-Copied
ವೇಣೂರು ಭ| ಶ್ರೀ ಬಾಹುಬಲಿಯ ಮಹಾಮಸ್ತಕಾಭಿಷೇಕದ 5 ದಿನದ ಸೇವಾಕರ್ತರಾದ ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಯುವರಾಜ್ ಜೈನ್ ಮತ್ತು ಕಾರ್ಯದರ್ಶಿ ರಶ್ಮಿತಾ ಜೈನ್ ಹಾಗೂ ಕುಟುಂಬಸ್ಥರ ವತಿಯಿಂದ ಬೃಹತ್ ಯಾಗಮಂಡಲ ಯಂತ್ರಾರಾಧನೆ, ಮಂಟಪ ಪ್ರತಿಷ್ಠೆ, ವೇದಿ ಪ್ರತಿಷ್ಠೆ ಬಳಿಕ ಅಗ್ರೋದಕ ಮೆರವಣಿಗೆ, ಸಂಜೆ ಜಲಯಾತ್ರಾ ಮಹೋತ್ಸವ, ಗರ್ಭಾವತರಣಾ ಕಲ್ಯಾಣ , ರಾತ್ರಿ ಭಗವಾನ್ ಬಾಹುಬಲಿ ಸ್ವಾಮಿಗೆ 216 ಕಲಶಗಳಿಂದ ಮಹಾಮಸ್ತಕಾಭಿಷೇಕ, ಮಹಾಪೂಜೆ, ಮಹಾಮಂಗಳಾರತಿ ಜರಗಲಿದೆ. ಭರತೇಶ ಸಮುದಾಯ ಭವನದ ಮುಖ್ಯವೇದಿಕೆಯಲ್ಲಿ ಬೆಳಿಗ್ಗೆ ವೇಣೂರು, ನಾರಾವಿ, ಬೆಳುವಾಯಿ ಜೈನ್ ಮಿಲನ್ ಸದಸ್ಯರಿಂದ ಜಿನ ಭಜನೆ ನಡೆಯಲಿದ್ದು, ಅಪರಾಹ್ನ ಯುಗಳ ಮುನಿಗಳಾದ ಅಮೋಘಕೀರ್ತಿ ಹಾಗೂ ಅಮರಕೀರ್ತಿ ಮಹಾರಾಜರು, ಮೂಡುಬಿದಿರೆಯ ಡಾ| ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಮಹಾಸ್ವಾಮೀಜಿಗಳವರು, ಕನಕಗಿರಿ ಜೈನ ಮಠದ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರು, ಕಂಬದಹಳ್ಳಿ ಜೈನ ಮಠದ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರ ಪಾವನ ಸಾನಿಧ್ಯದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಲಿದೆ. ಈ ಕಾರ್ಯಕ್ರಮದಲ್ಲಿ ಮೈಸೂರು ಮಹಾಸಂಸ್ಥಾನದ ಮಹಾರಾಜರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ವಿ.ಪ. ಸದಸ್ಯ ಭೋಜೇಗೌಡ, ಬೆಂಗಳೂರಿನ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್, ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ. ರಿಷ್ಯಂತ್, ಸೇವಾಕರ್ತರಾದ ಯುವರಾಜ್ ಜೈನ್, ರಶ್ಮಿತಾ ಜೈನ್ ಉಪಸ್ಥಿತರಿರುವರು. ಜಮಖಂಡಿಯ ನಿವೃತ್ತ ಪ್ರಾಧ್ಯಾಪಕ ಡಾ| ಬಿ.ಪಿ. ನ್ಯಾಮಗೌಡ ಅವರು ಜೈನ ಸಂಸ್ಕೃತಿಗೆ ಜೈನ ಆಚಾರ್ಯರು ಹಾಗೂ ಜೈನ ಅರಸು ಮನೆತನಗಳ ಕೊಡುಗೆ ಈ ವಿಷಯದಲ್ಲಿ ಉಪನ್ಯಾಸ ನೀಡಲಿದ್ದಾರೆ. ಬಳಿಕ ಮುಖ್ಯ ವೇದಿಕೆಯಲ್ಲಿ ಸಂಜೆ 6.30ರಿಂದ ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಕಲಾವಿದರಿಂದ ಭ| ಶ್ರೀ ಶಾಂತಿನಾಥ ಭಗವಾನರ ಗರ್ಭಾವತರಣ ಕಲ್ಯಾಣ ಧಾರ್ಮಿಕ ವಿಧಿ ನಡೆಯಲಿದೆ. ರಾತ್ರಿ 8.30ರಿಂದ ಜ್ಞಾನ ಐತಾಳ ನೇತೃತ್ವದಲ್ಲಿ ಹೆಜ್ಜೆನಾದ ನೃತ್ಯ-ಸಂಗೀತ ವೈವಿಧ್ಯ, ವಸ್ತು ಪ್ರದರ್ಶನ ವೇದಿಕೆಯಲ್ಲಿ ಡಾ. ದರ್ಶನಾ ಜೈನ್ ಸಾಂಗ್ಲಿ ಇವರಿಂದ ಭರತನಾಟ್ಯ, ಸುಮಾ ಕೋಟ ಮತ್ತು ಬಳಗದವರಿಂದ ಭಕ್ತಿ-ಭಾವ-ಸಂಗೀತ, ವೇಣೂರು ಸೇವಾ ಶರಧಿ ವಿಶ್ವಶ್ಥ ಮಂಡಳಿ (ರಿ.) ಇವರ ಸಂಯೋಜನೆಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.