ಮಹಾಮಸ್ತಕಾಭಿಷೇಕ-2024 : ಪೂರ್ವ ತಯಾರಿ ಸಭೆ
Published Date: 13-Feb-2024 Link-Copied
ವೇಣೂರು ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕದ ವಿವಿಧ ಸಮಿತಿಗಳ ಪೂರ್ವ ತಯಾರಿ ಸಭೆಯು ಇಲ್ಲಿಯ ಶ್ರೀ ಬಾಹುಬಲಿ ಸಭಾಭವನದಲ್ಲಿ ಫೆ. 13ರಂದು ಜರಗಿತು. ಸಭೆಯ ಅಧ್ಯಕ್ಷತೆಯನ್ನು ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷರಾದ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರು ವಹಿಸಿದ್ದರು. ಸಮಿತಿಯ ಪ್ರಧಾನ ಸಂಚಾಲಕರಾದ ಶ್ರೀಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್‌ರವರು ಮಾತನಾಡಿ, ಮಹಾಮಸ್ತಕಾಭಿಷೇಕದ ಎಲ್ಲಾ ಕೆಲಸಗಳು ಯಶಸ್ವಿಯಾಗಿ ನೆರವೇರಬೇಕಾದರೆ ಎಲ್ಲ ಸಮಿತಿಯವರು ಜವಾಬ್ದಾರಿಯುತವಾಗಿ ತಮ್ಮ ತಮ್ಮ ಕಾರ್ಯಗಳನ್ನು ನೆರವೇರಿಸಬೇಕೆಂದರು. ಮಹಾಮಸ್ತಕಾಭಿಷೇಕಕ್ಕೆ ಇನ್ನು ಕೇವಲ 1 ವಾರ ಉಳಿದಿದ್ದು, ಎಲ್ಲಾ ಉಪಸಮಿತಿಗಳು ಇತರ ಸಮಿತಿಗಳೊಂದಿಗೆ ಸಮನ್ವಯ ಸಾಧಿಸಿ, ಮಹಾಮಸ್ತಕಾಭಿಷೇಕದ ಯಶಸ್ವಿಗೆ ಸಹಕರಿಸಬೇಕೆಂದು ತಿಳಿಸಿದರು. ಎಲ್ಲಾ ಸಮಿತಿಗಳ ಸಂಚಾಲಕ, ಸಂಯೋಜಕರುಗಳು ಸಮಿತಿಗಳ ಕಾರ್ಯಚಟುವಟಿಕೆಗಳ ಮಾಹಿತಿ ನೀಡಿದರು. ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ಕಾರ್ಯಕಾರಿಣಿ ಸದಸ್ಯರು, ಮಹಾಮಸ್ತಕಾಭಿಷೇಕದ ಕೋರ್ ಕಮಿಟಿ ಸದಸ್ಯರು, ಸೇವಾಕರ್ತೃಗಳು, ಸಮಿತಿ ಉಪಾಧ್ಯಕ್ಷರುಗಳು, ಕಾರ್ಯದರ್ಶಿಗಳು, ಸದಸ್ಯರುಗಳು ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಸೂಕ್ತ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಕೋಶಾಧಿಕಾರಿ ಪಿ. ಜಯರಾಜ ಕಂಬಳಿ ಉಪಸ್ಥಿತರಿದ್ದರು. ಮಹಾಮಸ್ತಕಾಭಿಷೇಕ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿ. ಪ್ರವೀಣ್ ಕುಮಾರ್ ಇಂದ್ರ ಸ್ವಾಗತಿಸಿದರು. ಸಮಿತಿ ಕಾರ್ಯದರ್ಶಿ ಮಹಾವೀರ ಜೈನ್ ಮೂಡುಕೋಡಿ ನಿರೂಪಿಸಿ, ವಂದಿಸಿದರು.