ಹುಬ್ಬಳ್ಳಿಯ ಬ್ರಹ್ಮಕುಮಾರ ಬೀಳಗಿರವರಿಗೆ ಚಾಣಕ್ಯಶ್ರೀ ಪುರಸ್ಕಾರ
Published Date: 13-Jul-2026 Link-Copied
ಹುಬ್ಬಳಿಯ ಹೆಸರಾಂತ ವ್ಯಾಪಾರೋಧ್ಯಮಿ, ಸರಳ ಸಜ್ಜನಿಕೆಯ ಸ್ನೇಹಜೀವಿ, ಅಜಾತ ಶತ್ರು ಹಾಗೂ ಜೈನ ಸಮಾಜದ ಗಣ್ಯರು, ಸಕ್ರಿಯ ಸಮಾಜಸೇವೆಯಲ್ಲಿ ಕ್ರೀಯಾಶೀಲರಾದ 80 ರ ಹರೆಯದ ಬ್ರಹ್ಮಕುಮಾರ ಬೀಳಗಿ ಇವರ ಸಹಸ್ರ ಚಂದ್ರದರ್ಶನ ಅಭಿಮಾನೋತ್ಸವ ಕಾರ್ಯಕ್ರಮ ತುಂಬಾ ಅರ್ಥಪೂರ್ಣವಾಗಿ ಜರುಗಿತು. ಕಾರ್ಯಕ್ರಮ ವೈಭವದಿಂದ ಮಾತ್ರ ಕೂಡಿರಲಿಲ್ಲ ಇದು ಇತರರಿಗೂ ಒಂದು ಅನುಕರಣಿಯ ಆದರ್ಶದ ಪಾಠ ಎನ್ನುವ ರೀತಿಯಲ್ಲಿ ಪರೋಕ್ಷವಾಗಿ ಸಂದೇಶ ರವಾನಿಸಿದಂತಿತ್ತು ಯಾಕಂದರೆ ಬ್ರಹ್ಮಕುಮಾರ ಬೀಳಗಿ ಇವರು 80 ರ ಹರೆಯದಲ್ಲೂ ಅವರ ಜೀವನ ಶೈಲಿ, ಯುವಕರನ್ನು ನಾಚಿಸುವ ಜೀವನೋತ್ಸಾಹ, ಕ್ರಮಬದ್ಧ ಶಿಸ್ತಿನ ದಿನಚರಿ, ಆರೋಗ್ಯ ಭಾಗ್ಯ ಇವೆಲ್ಲಕ್ಕಿಂತಲೂ ಮುಖ್ಯವಾಗಿ ಇವರ ಸಮಾಜಮುಖಿ ಕಲ್ಯಾಣ ಕಾರ್ಯಗಳು ನಿಜಕ್ಕೂ ಮೆಚ್ಚಬೇಕು. ಈ ಇಳಿ ವಯಸ್ಸಿನಲ್ಲೂ ನಿಮ್ಮ ಉತ್ಸಾಹಕ್ಕೆ ಚಿರಯೌವನ ಮತ್ತು ಆರೋಗ್ಯದ ಗುಟ್ಟೇನು? ಎಂದು ಯಾರಾದರೂ ಕೇಳಿದರೆ ಅದಕ್ಕೆ ಅವರು ಕೊಡುವ ಉತ್ತರ - ನಾನು ಎಲ್ಲರನ್ನೂ ಆತ್ಮೀಯವಾಗಿ ಪ್ರೀತಿಸುತ್ತೇನೆ ಯಾರನ್ನೂ ದ್ವೇಷಿಸುವದಿಲ್ಲ ಪ್ರತಿಯೊಬ್ಬರೂ ಒಳ್ಳೆಯವರೇ ಅವರಲ್ಲಿರುವ ಒಳ್ಳೆಯ ಗುಣಗಳನ್ನು ಸ್ವೀಕರಿಸುತ್ತೇನೆ, ಯಾರನ್ನೂ ನಿಂದಿಸುವದಿಲ್ಲ, ಸಹಾಯ, ಸಹಕಾರ, ಪರೋಪಕಾರ ದಾನ ಧರ್ಮ, ಮಾಡುವ ಮನೋಭಾವನೆ ಧಾರ್ಮಿಕ ಚಿಂತನೆ ಮೂಲಕ ಸಮಾಜದ ಕೆಲಸದಲ್ಲಿ ದೇವರನ್ನು ಕಾಣುವ ಪ್ರವೃತ್ತಿಯನ್ನು ಅಳವಡಿಸಿಕೊಂಡಿದ್ದೇನೆ ಪ್ರತಿಯೊಂದು ಕೆಲಸವನ್ನು ಇಷ್ಟಪಟ್ಟು ಮಾಡುತ್ತೇನೆ " ಎನ್ನುತ್ತಾರೆ. ಇದೇ ಇವರ ದೀರ್ಘ ಜೀವನೋತ್ಸಾಹದ ಸೂತ್ರ. ಇತ್ತೀಚಿನ ಆಧುನಿಕ ಪರಿಸರದಲ್ಲಿ ನಿತ್ಯ ಒತ್ತಡದ ಬದುಕು ಮತ್ತು ಅನಾರೋಗ್ಯ ಜೀವನಶೈಲಿ ಮಧ್ಯದಲ್ಲೂ ನಾವು ಹೇಗೆ ಉತ್ಸಾಹದಿಂದ ಬದುಕಬೇಕು ಎನ್ನುವದನ್ನು ಮೌಲ್ಯಗಳನ್ನು ಹೇಗೆ ಅಳವಡಿಸಿಕೊಳ್ಳಬೇಕು ಎನ್ನುವದನ್ನು ಇವರಿಂದ ಕಲಿಯಬೇಕು ಎಂದು ಅನೇಕರು ಅಂದುಕೊಳ್ಳುತ್ತಾರೆ. ಇದೇ ಸಂದರ್ಭದಲ್ಲಿ ಹುಬ್ಬಳ್ಳಿಯ ಶ್ರೀ ಶಾಂತಿನಾಥ ತೀರ್ಥಂಕರ ದಿಗಂಬರ ಜೈನ ಬಸದಿ ಟ್ರಸ್ಟ ಕಾರ್ಯಕಾರಿ ಮಂಡಳಿ ಅಧ್ಯಕ್ಷ ಮಹಾವೀರ ಗೊಂಗಡಿ ಸೇರಿ ಪದಾಧಿಕಾರಿಗಳು ಇವರ ಸಮಾಜ ಸೇವೆಯನ್ನು ಗುರುತಿಸಿ "ಚಾಣಕ್ಯಶ್ರೀ ಪುರಸ್ಕಾರ ನೀಡಿ ಸನ್ಮಾನಿಸಿ ಗೌರವಿಸಿದರು. ಮಾಜಿ ಮುಖ್ಯಮಂತ್ರಿ, ಸಂಸದರಾದ ಜಗದೀಶ ಶೆಟ್ಟರ, ಬಸವರಾಜ ಬೊಮ್ಮಾಯಿ, ಶಾಸಕ ಅರವಿಂದ ಬೆಲ್ಲದ ರಾಜಕೀಯ ಮುಖಂಡರಾದ ಮಹೇಶ್ ತೆಂಗಿನಕಾಯಿ,ಶಂಕರಣ್ಣ ಮುನವಳ್ಳಿ, ಮೋಹನ್ ಲಿಂಬಿಕಾಯಿ, ಖ್ಯಾತ ಪತ್ರಕರ್ತ ಅಜಿತ್ ಹನಮಕ್ಕನವರ ಮುಂತಾದವರು ಭಾಗವಹಿಸಿ ಶುಭಕೋರಿ ಅಭಿನಂದಿಸಿದರು. ಎನ್ ಆರ್ ಪುರ ಜೈನ ಮಠದ ಸ್ವಸ್ತಿಶ್ರೀ ಲಕ್ಷ್ಮಿಸೇನ ಭಟ್ಟಾರಕ ಮಹಾಸ್ವಾಮಿಗಳು, ಹೊಂಬುಜದ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಸೇರಿದಂತೆ ಎಲ್ಲಾ ಜೈನ ಮಠಗಳ ಸ್ವಾಮೀಜಿಯವರು ಮತ್ತು ಮಾಜಿ ಮುಖ್ಯಮಂತ್ರಿ ಯಡೆಯೂರಪ್ಪ ಸೇರಿ ಹಲವು ರಾಜಕೀಯ ಗಣ್ಯರು ಶುಭ ಸಂದೇಶ ಕಳಿಸುವ ಮೂಲಕ ಶುಭಾಶಯ ತಿಳಿಸಿದ್ದಾರೆ. ವರದಿ : ಎಸ್ ಆರ್ ಮಲ್ಲಸಮುದ್ರ