ಶ್ರೀ ಮಹಾವೀರ ರಾಯಪ್ಪ ಬಾಳಿಕಾಯಿ: ಖ್ಯಾತ ಚಿತ್ರಕಲಾವಿದರು, ಧಾರವಾಡ


Logo

Published Date: 04-Jun-2026 Link-Copied

ಶ್ರೀ ಎಮ್. ಆರ್. ಬಾಳಿಕಾಯಿ ಅವರು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ 1 ಜೂನ್ 1941 ರಲ್ಲಿ ಜನಿಸಿದರು. ಚಿತ್ರಕಲೆಯಲ್ಲಿ ಆಸಕ್ತಿ ಇರುವ ಕಾರಣ ಆರ್ಟ್ ಮಾಸ್ಟರ್ ಕೋರ್ಸ್‌ನ್ನು ಅಧ್ಯಯನ ಮಾಡಿ ಸರ್ಕಾರಿ ಪ್ರೌಢಶಾಲೆ ಬಾಣಾವರದಲ್ಲಿ ಚಿತ್ರಕಲಾ ಶಿಕ್ಷಕರಾಗಿ ದಿನಾಂಕ: 31.10.1962 ರಿಂದ ನೇಮಕಗೊಂಡರು. ನಂತರ 1970ಮೇ 11 ರಿಂದ ಧಾರವಾಡದ ಹೆಣ್ಣು ಮಕ್ಕಳ ಟ್ರೇನಿಂಗ್ ಕಾಲೇಜನಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಮಾಡಿದರು. ತದನಂತರ 16.05.1972 ರಿಂದ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ ಧಾರವಾಡ ಇಲ್ಲಿ ಹಿರಿಯ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ, 31.05.1999 ರಂದು ನಿವೃತ್ತರಾದರು. ನಿವೃತ್ತಿ ನಂತರ ಕನ್ನಡ ವಿಶ್ವವಿದ್ಯಾಲಯ, ಹಂಪಿಯಲ್ಲಿ ಗೌರವ ಚಿತ್ರಕಲಾ ಉಪನ್ಯಾಸಕರಾಗಿ ದಿನಾಂಕ: 14.08.2001 ರಿಂದ 15.09.2004ರ ವರೆಗೆ ಸೇವೆ ಸಲ್ಲಿಸಿದರು. ಧಾರವಾಡ ಶ್ರೀ ಎಂ.ಆರ್.ಬಾಳಿಕಾಯಿ ಅವರ ಕಾರ್ಯಕ್ಷೇತ್ರವಾಗಿದೆ. ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಕಲಾಗುರುಗಳಾಗಿ ಅನೇಕ ಕಲಾವಿದರನ್ನು ರೂಪಿಸಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ನಾಡಿನ ತುಂಬಾ ಅನೇಕ ಚಿತ್ರಕಲಾ ಪ್ರದರ್ಶನಗಳನ್ನು ಮಾಡಿದ್ದಾರೆ. ಚಿತ್ರಕಲಾ ಶಿಬಿರ, ಕಲಾಮೇಳ, ಕಲಾ ಪ್ರಾತ್ಯಕ್ಷಿಕೆ, ಚರ್ಚೆ-ಸಂವಾದ ಸೇರಿದಂತೆ ಅನೇಕ ಕಲಾಚಟುವಟಿಕೆಗಳಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡು ಕಲಾಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ. ತೈಲ ಮತ್ತು ಜಲವರ್ಣ ಮಾಧ್ಯಮದಲ್ಲಿ ಅನೇಕ ಭಾವಚಿತ್ರ, ಪ್ರಕೃತಿಚಿತ್ರ ಮತ್ತು ಸಂಯೋಜನೆ ಚಿತ್ರಗಳನ್ನು ರಚಿಸಿ ಕಲಾಸಕ್ತರ ಮತ್ತು ವಿಮರ್ಶಕರ ಮೆಚ್ಚುಗೆಯನ್ನು ಪಡೆದಿದ್ದಾರೆ. 5000ಕ್ಕೂ ಹೆಚ್ಚು ರೇಖಾ ಚಿತ್ರಗಳನ್ನು ರಚಿಸಿ ಕಲಾಲೋಕಕ್ಕೊಂದು ವಿಶೇಷ ಕೊಡುಗೆ ನೀಡಿದ್ದಾರೆ. ೮೫ರ ಇಳಿವಯಸ್ಸಿನಲ್ಲೂ ಕಲಾಲೋಕದಲ್ಲಿ ತುಂಬಾ ಚಟುವಟಿಕೆಗಳಿಂದ ಕೂಡಿರುವ ಇವರು ಅನೇಕ ಪ್ರತಿಷ್ಠಿತ ಪ್ರಶಸ್ತಿ-ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಶ್ರೀ ಎಂ.ಆರ್. ಬಾಳಿಕಾಯಿ ಅವರಿಗೆ 1995ರಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯ ಗೌರವ ಪ್ರಶಸ್ತಿ, 2007ರಲ್ಲಿ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, 2017ರಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತು ನೀಡುವ ಜೀವಮಾನ ಸಾಧಕ ಸನ್ಮಾನ, 2012-13ರ ನಾಡೋಜ ಆರ್. ಎಮ್. ಹಡಪದ ಪ್ರಶಸ್ತಿ, 2016ರಲ್ಲಿ ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ,2023ರಲ್ಲಿ ಚಿತ್ರಕಲಾ ಶಿಲ್ಪಿ ಶ್ರೀ ಡಿ.ವಿ. ಹಾಲಭಾವಿ ಕುಂಚ ಕಲಾ ತಪಸ್ವಿ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ವಿಭಾಗ, ಬೆಳಗಾವಿ ಇವರ ವತಿಯಿಂದ ಧಾರವಾಡದ ಸುವರ್ಣ ಸಾಂಸೃತಿಕ ಸಮುಚ್ಚಯ ಸಭಾಂಗಣ, ರಂಗಾಯನಾ ಆವರಣ ಜೂ.6ರಂದು ನಡೆಯಲಿರುವ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಹಾವೀರ ರಾಯಪ್ಪ ಬಾಳಿಕಾಯಿ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಡಾ.ಆರ್.ಎ.ಬಾಳಿಕಾಯಿ

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img