ಡಾ. ಅಪ್ಪಣ್ಣ ಹಂಜೆ ಅವರಿಗೆ ಈಶ್ವರಜ್ಞಾನ ಗುರುರತ್ನ ಪ್ರಶಸ್ತಿ


Logo

Published Date: 15-Sep-2025 Link-Copied

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ.) ಗದಗ ಗ್ರಾಮೀಣ ವಿಭಾಗ ಮತ್ತು ಹುಲಕೋಟಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ 2025-26ನೇ ಸಾಲಿನ ‘ಶಿಕ್ಷಕರ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ’ದಲ್ಲಿ ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಮತ್ತು ಪ್ರಾಧ್ಯಾಪಕ ಹಾಗೂ ಎನ್.ಎಸ್.ಎಸ್. ಘಟಕದ ಸಂಯೋಜಕ ಡಾ. ಅಪ್ಪಣ್ಣ ಹಂಜೆ ಅವರನ್ನು ‘ಈಶ್ವರಜ್ಞಾನ ಗುರುರತ್ನ’ ಪ್ರಶಸ್ತಿಯಿಂದ ಗೌರವಿಸಿವೆ. ಇವರು 20 ವರ್ಷಗಳ ಬೋಧನಾ ಅನುಭವ ಹೊಂದಿದ್ದು, ಪ್ರಾಚೀನ ಸಮಾಜ, ಧರ್ಮ, ಇತಿಹಾಸ, ಸಂಸ್ಕೃತಿ, ವಾಸ್ತುಕಲೆ, ಶಿಲ್ಪಕಲೆ, ಶಾಸನಗಳು, ಸಾಹಿತ್ಯ ಮುಂತಾದ ಕ್ಷೇತ್ರಗಳಲ್ಲಿ ಸಂಶೋಧನ ಅಧ್ಯಯನ ಕೈಗೊಂಡು 12ಕ್ಕೂ ಹೆಚ್ಚು ಕೃತಿಗಳು, 150ಕ್ಕೂ ಹೆಚ್ಚು ಸಂಶೋಧನ ಲೇಖನಗಳನ್ನು ಪ್ರಕಟಿಸಿದ್ದಾರೆ. ಬೀದರ ಜಿಲ್ಲೆಯ ಜೈನ ಶಾಸನಗಳು, ಲಕ್ಕುಂಡಿಯ ಬಸದಿಗಳು, ಅಣ್ಣಿಗೇರಿಯ ಜೈನ ದೇಸಗತಿ ಮನೆತನ, ಬೆಳಗಾವಿಯ ಕಮಲ ಬಸದಿ, ಕರ್ನಾಟಕದ ಬಸದಿಗಳು, ಶಾಸನ ಸಾಹಿತ್ಯದಲ್ಲಿ ಜೀವನ ಮೌಲ್ಯ ಕೃತಿಗಳು ವಸ್ತುನಿಷ್ಠ ಸಂಶೋಧನ ಅಧ್ಯಯನ ಗೌರವಕ್ಕೆ ಪಾತ್ರವಾಗಿವೆ. ಡಾ. ಅಪ್ಪಣ್ಣ ಅವರು ಗದಗ ಜಿಲ್ಲೆಯ ದೇಸಗತಿ ಮನೆತನಗಳು, ದಾಖಲೆ ಪತ್ರಗಳ ಶೋಧನೆ ಮತ್ತು ಸಂರಕ್ಷಣೆ, ಕರ್ನಾಟಕ ಏಕೀಕರಣ ಚಳುವಳಿ ಹಾಗೂ ಐತಿಹಾಸಿಕ ದಾಖಲೆಗಳು ಮತ್ತು ಛಾಯಾಚಿತ್ರಗಳ ಪ್ರದರ್ಶನ ಸೇರಿದಂತೆ ಹಲವು ವಿಚಾರ ಸಂಕಿರಣ ಮತ್ತು ಕಾರ್ಯಾಗಾರಗಳನ್ನು ಏರ್ಪಡಿಸಿದ್ದು, ಕೆಲವು ಸಂಸ್ಮರಣ ಕೃತಿಗಳು, ನಿಯತಕಾಲಿಕೆಗಳು, ಪತ್ರಿಕೆಗಳ ಸಂಪಾದಕ ಮಂಡಳಿ ಸದಸ್ಯರಾಗಿ, ಕರ್ನಾಟಕ ಪುರಾತತ್ವ ಮತ್ತು ಸಾಹಿತ್ಯ ಪರಿಷತ್ತು, ಗದಗ ಜಿಲ್ಲಾ ದಿಗಂಬರ ಜೈನ ಸಂಘ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಜೈನ ಸಾಹಿತ್ಯ ಸಂಸ್ಕೃತಿ ಅಧ್ಯಯನ ಕೇಂದ್ರಗಳ ಸಲಹಾ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದ ಮಾನ್ಯತಾ ಕೇಂದ್ರ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಹಾಮಾನಾ ಸಂಶೋಧನ ಕೇಂದ್ರದಲ್ಲಿ ಪಿಎಚ್.ಡಿ. ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ. ಇವರು ಸಂಶೋಧನೆ, ಅಧ್ಯಯನ, ಪ್ರಕಟಣೆ ಕ್ಷೇತ್ರಗಳಲ್ಲಿ ಕೈಗೊಳ್ಳುತ್ತಿರುವ ಸಾಧನೆ, ಕೊಡುಗೆಗಳಿಗೆ ನಾಡಿನ ಹಲವು ಸಂಘ-ಸಂಸ್ಥೆಗಳಿಂದ ಶ್ರೀ ಹುಯಿಲಗೋಳ ನಾರಾಯಣರಾವ ಸ್ಮಾರಕ ಪ್ರಶಸ್ತಿ, ಸ್ವಸ್ತಿಶ್ರೀ ದೇವೇಂದ್ರಕೀರ್ತಿ ದತ್ತಿ ಪ್ರಶಸ್ತಿ, ಆಚಾರ್ಯ 108 ಶ್ರೀ ಬಾಹುಬಲಿ ಕನ್ನಡ ಸಾಹಿತ್ಯ ಪ್ರಶಸ್ತಿ, ಜಯಲಕ್ಷ್ಮಮ್ಮ ಬಿ.ಎಸ್. ಸಣ್ಣಯ್ಯ ದತ್ತಿ ಪ್ರಶಸ್ತಿ, ಆದರ್ಶ ಜೈನ ಯುವ ಪ್ರಶಸ್ತಿ, ಜ್ಞಾನಶ್ರೀ ಪ್ರಶಸ್ತಿ, ಬಾಹುಬಲಿ ಸಿದ್ಧಶ್ರೀ ಪ್ರಶಸ್ತಿ, ಜ್ಞಾನೇಶ್ವರ ಆದರ್ಶ ಶಿಕ್ಷಕ ಪ್ರಶಸ್ತಿ, ಬೆಳ್ಳಿ ಸಂಭ್ರಮ ಪ್ರಶಸ್ತಿ, ಸಾಹಿತ್ಯ ಸಿರಿ ಪ್ರಶಸ್ತಿಗಳ ಗೌರವಕ್ಕೆ ಪಾತ್ರರಾಗಿದ್ದಾರೆ. ಇವರನ್ನು ಕಾಲೇಜಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು, ಸದಸ್ಯರು, ಪ್ರಾಂಶುಪಾಲರು, ಬೋಧಕ-ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಗದಗ ಜಿಲ್ಲಾ ದಿಗಂಬರ ಜೈನ ಸಂಘದ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img