ದೈಹಿಕ ಶಿಕ್ಷಣ ಶಿಕ್ಷಕಿ ಆರತಿ ಕುಮಾರಿ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ
Published Date: 09-Sep-2025 Link-Copied
ಬೆಳ್ತಂಗಡಿ : ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಗ್ರಾಮದಲ್ಲಿ ದಿ. ನೇಮಿರಾಜು ಜೈನ್ ಮತ್ತು ಪುಷ್ಪಾವತಿ ದಂಪತಿಗಳ ಎರಡನೇ ಪುತ್ರಿಯಾಗಿ ಜನಿಸಿದ ಆರತಿ ಕುಮಾರಿ ಇವರು ತನ್ನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ ಬಳಿಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂಬ ಹಂಬಲದೊಂದಿಗೆ 1994ರಲ್ಲಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಗಾಧಿಬನೂರು ಎಂಬಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ನೇಮಕಗೊಂಡು ಕರ್ತವ್ಯಕ್ಕೆ ಹಾಜರಾಗುತ್ತಾರೆ. 1997ರಲ್ಲಿ ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವಂತಹ ವಿದ್ಯಾಸಂಸ್ಥೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಿಟ್ಟಡೆಗೆ ಕರ್ತವ್ಯಕ್ಕೆ ಹಾಜರಾಗಿರುತಗತ್ತಾರೆ. ವಿದ್ಯಾರ್ಥಿ ಸಾಗರದಲ್ಲಿ ಪ್ರೀತಿ ಆದರ್ಶಗಳ ನೆಚ್ಚಿನ ಶಿಕ್ಷಕಿಯಾಗಿ, ಶಿಕ್ಷಕ ವೃಂದದವರ ಮಧ್ಯೆ ಆತ್ಮೀಯ ಸಹೋದ್ಯೋಗಿಯಾಗಿ, ಇಲಾಖಾಧಿಕಾರಿಗಳ ಮೆಚ್ಚುಗೆಯ ನೌಕರಳಾಗಿ, ಊರ ವಿದ್ಯಾಭಿಮಾನಿಗಳ ಪೋಷಕರ ಮನಗೆದ್ದು ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿರುತ್ತಾರೆ. ಇವರು ಸರಕಾರಿ ನೌಕರರ ಸಂಘದಲ್ಲಿ ಪದಾಧಿಕಾರಿಯಾಗಿ 2 ಬಾರಿ ರಾಜ್ಯ ಪರಿಷತ್ ಸದಸ್ಯೆಯಾಗಿ ಪ್ರಸ್ತುತ ಕ್ರೀಡಾ ಮತ್ತು ಸಾಂಸ್ಕೃತಿಕ ಸದಸ್ಯೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಳ್ತಂಗಡಿ ತಾಲೂಕು ಕರ್ನಾಟಕ ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯಕಾರಿ ಸಮಿತಿಗೆ ಆಯ್ಕೆಯಾಗಿದ್ದಾರೆ. ಬೆಳ್ತಂಗಡಿ ದೈಹಿಕ ಶಿಕ್ಷಣ ಶಿಕ್ಷಕರ ಗ್ರೇಡ್-2 ಸಂಘದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸತ್ತಿದ್ದಾರೆ. ಇವರು ವಲಯ ಮಟ್ಟದ ಪಂದ್ಯಾಟ ಹಾಗೂ ಕ್ರೀಡಾಕೂಟಕ್ಕೆ ನೋಡೆಲ್ ಆಗಿ, ತಾಲೂಕಿನ ದೈಹಿಕ ಶಿಕ್ಷಣ ಶಿಕ್ಷಕರ ಸದಸ್ಯರಾಗಿ ಹಾಗೂ ಉಪಾಧ್ಯಕ್ಷರಾಗಿ 2 ಬಾರಿ ಸೇವೆ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಬೆಳ್ತಂಗಡಿ ತಾಲೂಕು ಶಾಖೆಯ 2 ಬಾರಿ ರಾಜ್ಯ ಪರಿಷತ್ ಸದಸ್ಯರಾಗಿ ಸೇವೆ, ಭಾರತ ಸೇವಾದಳ ಜಿಲ್ಲಾ ಸಮಿತಿಯಲ್ಲಿ ಸದಸ್ಯರಾಗಿ ಪ್ರಸ್ತುತ ಕಾರ್ಯದರ್ಶಿಯಾಗಿ, ಭಾರತ ಸೇವಾದಳದ ತಾಲೂಕು ಮಟ್ಟದ ರ‍್ಯಾಲಿ ಹಾಗೂ ಜಿಲ್ಲಾ ಮಟ್ಟದ ರ‍್ಯಾಲಿಯ ಸಂಯೋಜಕರಾಗಿಯೂ ಸೇವೆ ಸಲ್ಲಿಸಯತ್ತಿದ್ದಾರೆ. ಇವರು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸುದೀರ್ಘ 31 ವರ್ಷಗಳ ಸೇವೆ, ಶ್ರದ್ಧೆ, ನಿಷ್ಠೆ ಹಾಗೂ ಪ್ರಾಮಾಣಿಕತೆಯನ್ನು ಗುರುತಿಸಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಲಾಗಿದೆ.