ಜೈನ ತತ್ವ-ಸಿದ್ಧಾಂತಗಳು ಸರ್ವಕಾಲಕ್ಕೂ ಪ್ರಸ್ತುತ : ಡಾ. ಅಪ್ಪಣ್ಣ ಹಂಜೆ
Published Date: 08-Sep-2025 Link-Copied
ಜೈನ ಧರ್ಮವು ‘ಅಹಿಂಸಾ ಪರಮೋಧರ್ಮ’ ಎಂಬ ಧ್ಯೇಯ ವಾಕ್ಯದೊಂದಿಗೆ ಅಹಿಂಸೆ, ಅಪರಿಗ್ರಹ, ಅನೇಕಾಂತವಾದ ಮುಂತಾದ ಸಿದ್ಧಾಂತಗಳ ಮೂಲಕ ಇಂದಿಗೂ ವಿಶ್ವಹಿತವನ್ನು ಬಯಸುತ್ತ ಮುನ್ನಡೆದಿದ್ದು, ಜಗತ್ತಿನ ಎಲ್ಲ ಜೀವಿಗಳಿಗೂ ಬದುಕುವ ಸಮಾನವಾದ ಹಕ್ಕಿದೆ, ಎಲ್ಲ ಜೀವಿಗಳೂ ಇತರ ಎಲ್ಲ ಜೀವಿಗಳನ್ನು ಮನ್ನಿಸಬೇಕು, ಎಲ್ಲ ಜೀವಿಗಳೂ ಸೌಹಾರ್ದದಿಂದ ಬದುಕಬೇಕೆಂಬುದು ಈ ಧರ್ಮದ ಹೆಬ್ಬಯಕೆಯಾಗಿದೆ ಎಂದು ಡಾ. ಅಪ್ಪಣ್ಣ ಹಂಜೆ ಹೇಳಿದರು. ಅವರು ಗದಗ ಜಿಲ್ಲಾ ದಿಗಂಬರ ಜೈನ ಸಂಘವು ‘ದಶಲಕ್ಷಣ ಪರ್ವಾಚರಣೆ ಮತ್ತು ಸಮಾಜ ಸಂಪರ್ಕ ಸಭೆ’ ಕಾರ್ಯಕ್ರಮದ ನಿಮಿತ್ತ ಗದುಗಿನ ವಿದ್ಯಾದಾನ ಸಮಿತಿಯ ಬಾಲಕರ ಪ್ರೌಢ ಶಾಲೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಸಾಮೂಹಿಕ ಕ್ಷಮಾವಳಿ ಹಾಗೂ ಸಮಾರೋಪ ಸಮಾರಂಭ’ದಲ್ಲಿ ಉಪನ್ಯಾಸ ಮಾಡುತ್ತ, ಜೈನರು “ನಾನು ಲೋಕದ ಸಕಲ ಜೀವಿರಾಶಿಗಳನ್ನು ಕ್ಷಮಿಸುತ್ತೇನೆ, ಸಕಲ ಜೀವರಾಶಿಗಳೂ ನನ್ನನ್ನು ಕ್ಷಮಿಸಲಿ, ನಾನು ಎಲ್ಲ ಜೀವಿಗಳಲ್ಲಿ ಮೈತ್ರಿಯನ್ನು ಇರಿಸಿಕೊಳ್ಳಲು ಬಯಸುತ್ತೇನೆ, ಯಾವ ಜೀವಿಯಲ್ಲೂ ನನಗೆ ವೈರವಾಗಲಿ ಮತ್ಸರವಾಗಲಿ ಇಲ್ಲ” ಎಂಬ ಸೌಹಾರ್ದ ಮಂತ್ರವನ್ನು ಆರಂಭದಿಂದಲೂ ಅನುಸರಿಸುತ್ತ ಬಂದಿದ್ದು, ದಶಲಕ್ಷಣ ಪರ್ವವು ಒಂದು ಅರ್ಥದಲ್ಲಿ ಜೈನರಿಗೆ ವಿಧಿಸಲಾದ ನೀತಿ ಸಂಹಿತೆ, ಇದು ಜೈನರ ಬದುಕುವ ಕಲೆಯಾಗಿದೆ ಎಂದು ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗಜೇಂದ್ರಗಡದ ಉದ್ಯಮಿ ಮತ್ತು ಭಗವಾನ ಮಹಾವೀರ ಜೈನ ಆಯುರ್ವೇದಿಕ ಮೆಡಿಕಲ್ ಕಾಲೇಜಿನ ಅಧ್ಯಕ್ಷ ಅಶೋಕಕುಮಾರ ಬಾಗಮಾರ ಅವರು ಜೈನ ಧರ್ಮವು ಅರಿವು, ವಿಚಾರ, ಆಚಾರಕ್ಕೆ ಒತ್ತು ಕೊಡುತ್ತ ಬಂದಿದ್ದು, ಇಂದು ಸಂಖ್ಯಾದೃಷ್ಟಿಯಿಂದ ಜೈನರು ಮತೀಯ ಅಲ್ಪಸಂಖ್ಯಾತರೆಂದು ಪರಿಗಣಿಸಲ್ಪಟ್ಟಿದ್ದರೂ ತತ್ವ-ಸಿದ್ಧಾಂತಗಳು ಮತ್ತು ಅರ್ಥಪೂರ್ಣ ಆಚರಣೆ-ಅನುಷ್ಠಾನಗಳ ದೃಷ್ಟಿಯಿಂದ ನಾಡಿನ ಪ್ರಜ್ಞಾವಂತರ ಪ್ರೀತಿಗೆ ಪಾತ್ರರಾಗಿದ್ದಾರೆಂದು ಹೇಳಿದರು. ಸಂಘದ ಅಧ್ಯಕ್ಷ ಪಿ.ಎ. ಕುಲಕರ್ಣಿ ಪ್ರಾಸ್ತಾವಿಕವಾಗಿ ಮತ್ತು ಅಧ್ಯಕ್ಷತೆ ವಹಿಸಿ ಮಾತನಾಡುತ್ತ ವಿದ್ಯಾದಾನ ಸಮಿತಿಯ ಅಧ್ಯಕ್ಷ ಡಿ.ಬಿ. ಹುಯಿಲಗೋಳ ಮತ್ತು ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ ಅವರು ಗದುಗಿನ ದಿಗಂಬರ ಜೈನ ಸಮಾಜದ ಕಾರ್ಯಕ್ರಮಗಳ ಆಯೋಜನೆಗೆ ಕಳೆದ ಇಪ್ಪತ್ತೆರಡು ವರ್ಷಗಳಿಂದಲೂ ಶಾಲೆಯ ಸಭಾಂಗಣವನ್ನು ಯಾವುದೇ ಅಪೇಕ್ಷೆಯಿಲ್ಲದೆ ಕೊಡಮಾಡುತ್ತ ಬಂದಿದ್ದು, ಅವರ ‘ಅಭಯದಾನ’ಕ್ಕೆ ಜೈನ ಸಮಾಜವು ಯಾವತ್ತೂ ಋಣಿಯಾಗಿದ್ದು, ಸಾಧಕರ ಸನ್ಮಾನಕ್ಕೆ ಅವಶ್ಯವಿರುವ ಸಾಮಗ್ರಿಗಳನ್ನು ಗದುಗಿನ ಗಣ್ಯ ವ್ಯಾಪಾರಸ್ಥ ಸಂಜಯ ಬಾಗಮಾರ ಅವರು ಪ್ರತಿವರ್ಷ ದಾನಮಾಡುತ್ತ ಬಂದಿದ್ದು, ಅವರ ‘ಶಾಸ್ತ್ರದಾನ’ ಮೌಲ್ಯ ಸಮಾಜಕ್ಕೆ ಮಾದರಿಯಾಗಿದೆ. ಸಂಘಕ್ಕೆ ಗಣ್ಯ ವ್ಯಾಪಾರಸ್ಥರಾಗಿರುವ ಕುಷ್ಟಗಿಯ ಅಭಿನಂದನ ಗೋಗಿ ಮತ್ತು ಗಜೇಂದ್ರಗಡದ ಬಾಹುಬಲಿ ಹೂಲಿ ಅವರ ಉದಾರವಾದ ಮಾರ್ಗದರ್ಶನ, ಸೇವೆ ಸ್ಮರಣೀಯವಾಗಿದೆ. ಜಿಲ್ಲೆಯ ಸಮಸ್ತ ಜೈನ ಸಮಾಜದ ಸಹಾಯ-ಸಹಕಾರದಿಂದಲೇ ದಶಲಕ್ಷಣ ಪರ್ವದ ಆಚರಣೆ ಸಾಂಗವಾಗಿ ನಡೆಯುತ್ತ ಬಂದಿದೆ ಎಂದು ಹೇಳಿದರು. ಸಾಮೂಹಿಕ ಪಂಚ ನಮೋಕಾರ ಮಂತ್ರ ಪಠಣ, ಜ್ವಾಲಾಮಾಲಿನಿ ಸದರಣ್ಣವರ ಪ್ರಾರ್ಥನೆ, ಯಶವಂತ ಸಿದ್ದಣ್ಣವರ ಭಕ್ತಿಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಜಿಲ್ಲೆಯ ವಿದ್ಯಾರ್ಥಿಗಳು, ದಾನಿಗಳು ಮತ್ತು ಗಣ್ಯರನ್ನು ಸನ್ಮಾನಿಸಲಾಯಿತು. ಪ್ರಕಾಶ ಮುತ್ತಿನ ನಿರೂಪಣೆ ಮತ್ತು ಸಂಕಪ್ಪ ನಾವಳ್ಳಿ ವಂದನಾರ್ಪನೆಗೈದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಗ್ರಾಮಗಳ ಮುನ್ನೂರಕ್ಕೂ ಹೆಚ್ಚು ಶ್ರಾವಕರು, ಶ್ರಾವಿಕೆಯರು ಭಾಗವಹಿಸಿದ್ದರು. ಎಲ್ಲರೂ ಸಾಮೂಹಿಕವಾಗಿ ಪರಸ್ಪರ ಕ್ಷಮೆ ಕೋರಿ, ಪಂಚ ನಮೋಕಾರ ಮಂತ್ರ ಪಠಣದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಿದರು.