ದಶಲಕ್ಷಣ ಪರ್ವಾಚರಣೆ ಮತ್ತು ಸಮಾಜ ಸಂಪರ್ಕ ಸಭೆ
Published Date: 07-Sep-2025 Link-Copied
‘ಬ್ರಹ್ಮ’ವೆಂದರೆ ‘ಆತ್ಮ’ ಮತ್ತು ‘ಚರ್ಯ’ ಎಂದರೆ ‘ಪಾಲನೆ’ ಎಂದರ್ಥ. ಆತ್ಮನಲ್ಲಿ ಲೀನವಾಗಿ ಕಾಮಾದಿ ವಿಕಾರಗಳನ್ನು ತೊರೆದು ಆತ್ಮನ ನೈಜ ಗುಣಗಳನ್ನು ಅರಿತು ಆತ್ಮೋನ್ನತಿಯನ್ನು ಸಾಧಿಸುವುದೇ ಬ್ರಹ್ಮಚರ್ಯ ಧರ್ಮವಾಗಿದ್ದು, ಕಾರ್ಯ-ವಚನ ಆಲೋಚನೆಗಳಲ್ಲಿ ಬ್ರಹ್ಮಚರ್ಯ ಪಾಲನೆಯಿಂದ ಪರಿಶುದ್ಧ ಜೀವನ ನಡೆಸಲು ಸಾಧ್ಯವೆಂದು ವಸಂತಮಾಲಾ ದೇಸಾಯಿ ಹೇಳಿದರು. ಅವರು ಗದಗ ಜಿಲ್ಲಾ ದಿಗಂಬರ ಜೈನ ಸಂಘವು ‘ದಶಲಕ್ಷಣ ಪರ್ವಾಚರಣೆ ಮತ್ತು ಸಮಾಜ ಸಂಪರ್ಕ ಸಭೆ’ ನಿಮಿತ್ತ ಸಂಘದ ಕಾರ್ಯಾಲಯದಲ್ಲಿ ಮಹಿಳಾ ಮಂಡಳದ ಸಹಯೋಗದಲ್ಲಿ ಆಯೋಜಿಸಿದ್ದ ‘ಉತ್ತಮ ಬ್ರಹ್ಮಚರ್ಯ ಧರ್ಮ’ ಕುರಿತು ಉಪನ್ಯಾಸ ಮಾಡುತ್ತ, ಆತ್ಮವು ಪರಿಶುದ್ಧ, ಪ್ರಬುದ್ಧ, ಶಾಶ್ವತ, ಆನಂದಯಮವಾಗಿದ್ದು, ಆತ್ಮನ ನಿಜವಾದ ಗುಣವನ್ನು ತಿಳಿಯುವುದರಿಂದ ಬದುಕು ಸುಂದರವಾಗುತ್ತದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಶೋಭಕ್ಕ ಇಂಚಲ ಅವರು ಮಹಿಳೆಯನ್ನು ರಕ್ಷಿಸುವ ಅಭೇದ್ಯ ಬೇಲಿ ಅವಳ ಬ್ರಹ್ಮಚರ್ಯದ ಸದ್ಗುಣವಾಗಿದ್ದು, ಬೇರೆ ಯಾವುದೇ ಬೇಲಿಯೂ ಅವಳನ್ನು ರಕ್ಷಿಸಲು ಸಾಧ್ಯವಿಲ್ಲವೆಂದು ಹೇಳಿದರು. ಕಾರ್ಯಕ್ರಮದಲ್ಲಿ ಅಪ್ಪಣ್ಣ ಹಂಜೆ, ಪಿ.ಎ. ಕುಲಕರ್ಣಿ, ಯಶವಂತ ಸಿದ್ದಣ್ಣವರ, ಪ್ರಕಾಶ ಮುತ್ತಿನ, ಸಂಕಪ್ಪ ನಾವಳ್ಳಿ, ಸಂಜಯ ಪಾಂಡ್ರೆ, ಎಚ್.ಎ. ಕುಲಕರ್ಣಿ, ಸುಭಾಸ ಅಂಗಡಿ, ಪರಿಮಳಾ ಕುಲಕರ್ಣಿ, ಸಹನಾ ಹಂಜೆ, ಪದ್ಮಾವತಿ ತುಕೋಳ, ಸುಕನ್ಯಾ ಕುಲಕರ್ಣಿ, ಸುಪ್ರೀಯಾ ಪಾಂಡ್ರೆ ಸೇರಿದಂತೆ ಸ್ಥಳೀಯ ಶ್ರಾವಕರು, ಶ್ರಾವಿಕೆಯರು ಪಾಲ್ಗೊಂಡಿದ್ದರು. ಮಧುಮತಿ ಕಬ್ಬಿಣ ಭಕ್ತಿಗೀತೆ ಹಾಡಿದರು. ಸುಮನ ಮುತ್ತಿನ ನಿರೂಪಣೆ ಮತ್ತು ಸುಪ್ರೀಯಾ ನಾವಳ್ಳಿ ವಂದನಾರ್ಪಣೆಗೈದರು.