ಶಾಂತರಾಜ ಮಲ್ಲಸಮುದ್ರ ಇವರಿಗೆ ಆಚಾರ್ಯ ಗುರುಕುಲದ ಮಹಾವೀರ ಪ್ರಶಸ್ತಿ


Logo

Published Date: 02-Sep-2025 Link-Copied

ಮೈಸೂರಿನ ಆಚಾರ್ಯ ಗುರುಕುಲದಿಂದ ಕೊಡಮಾಡುವ 2024ರ ಭಗವಾನ್ ಮಹಾವೀರ ಪ್ರಶಸ್ತಿಗೆ ಧಾರವಾಡದ ಶಾಂತರಾಜ ಮಲ್ಲಸಮುದ್ರ ಇವರು ಭಾಜನರಾಗಿದ್ದಾರೆ. ಲೇಖಕ, ಅಂಕಣ ಬರಹಗಾರ, ವರದಿಗಾರ, ಸಮರ್ಥ ಸಂಘಟಕರೆಂದು ಹೆಸರು ಮಾಡಿದ ಶಾಂತರಾಜ ಮಲ್ಲಸಮುದ್ರ ಇವರು ಬ್ಯಾಂಕಿಂಗ್ ವೃತ್ತಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಇದೀಗ ಸಮಾಜ ಸೇವೆಯಲ್ಲಿ ಮತ್ತು ಬರವಣಿಗೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. 1978ರಲ್ಲಿ ಹುಬ್ಬಳ್ಳಿಯ ನಾಡೋಜ ಪಾಟೀಲ್ ಪುಟ್ಟಪ್ಪನವರ "ವಿಶ್ವ ವಾಣಿ" ಮತ್ತು "ಪ್ರಪಂಚ" ಪತ್ರಿಕೆಗಳಲ್ಲಿ ಬರಹಗಾರರಾಗಿ ವೃತ್ತಿ ಜೀವನ ಪ್ರಾರಂಭಿಸಿದ ಇವರು ಬಳಿಕ 1979 ರಿಂದ ಎರಡು ವರ್ಷ ಹುಬ್ಬಳ್ಳಿ ಜೈನ ಬೋರ್ಡಿಂಗ್ ನಲ್ಲಿ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ನಂತರ 1981 ರಿಂದ 30 ವರ್ಷಗಳ ಕಾಲ ವರ್ಧಮಾನ ಕೋ-ಆಪ್ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಯಲ್ಲಿ ಕಾರ್ಯನಿರ್ವಹಿಸಿ ನಂತರ ವಿಲೀನಗೊಂಡ ಸುಕೋ ಬ್ಯಾಂಕ್ ನಿಂದ ಜನರಲ್ ಮ್ಯಾನೇಜರ್ ಆಗಿ ನಿವೃತ್ತಿಯಾಗಿದ್ದಾರೆ. ಹುಬ್ಬಳ್ಳಿ - ಧಾರವಾಡ ದಿಗಂಬರ ಜೈನ ಸಮಾಜ ಹಾಗೂ ಇತರ ಸಂಘ ಸಂಸ್ಥೆಗಳೊಂದಿಗೆ ನಿಕಟ ಸಂಪರ್ಕ ಹೊಂದಿದ ಇವರು ಉತ್ತರ ಕರ್ನಾಟಕ ಜೈನ ಮಹಾಸಂಘದ ಪ್ರದಾನ ಕಾರ್ಯದರ್ಶಿಯಾಗಿ, ನವನಗರ ಅಲ್ಪಸಂಖ್ಯಾತ ಜೈನ ಸೇವಾ ಸಂಘದ ಅಧ್ಯಕ್ಷರಾಗಿ ಕಳೆದ 12 ವರ್ಷಗಳಿಂದ ಇಲ್ಲಿನ ಭ. ಮುನಿಸುವೃತ ತೀರ್ಥoಕರ ಬಸದಿಯ ಎಲ್ಲ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಇದು ಅತ್ಯಂತ ಶೃದ್ದಾ ಭಕ್ತಿಯ ಅತಿಶಯ ಕ್ಷೇತ್ರವನ್ನಾಗಿ ರೂಪಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡ ಇವರು ಹುಬ್ಬಳ್ಳಿ - ಧಾರವಾಡ ಜೈನ ಸಂಸ್ಕೃತಿ ಮತ್ತು ಸಾಹಿತ್ಯ ಟ್ರಸ್ಟಿನ ಸಂಸ್ಥಾಪನೆಗೆ ಪ್ರಮುಖ ಕಾರಣಿಕರ್ತರಾಗಿದ್ದು ಇದರ ಪ್ರವರ್ಥಕರಾಗಿ ಇದೀಗ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ಈ ಸಂಸ್ಥೆಯಿಂದ ಪ್ರತಿ ತಿಂಗಳೂ ಕೊನೆಯ ರವಿವಾರ ನಡೆಯುತ್ತಿರುವ ಸರಣಿ ಉಪನ್ಯಾಸ ಮಾಲಿಕೆಯ "ದಿವ್ಯವಾಣಿ" ಜನಪ್ರಿಯ ಕಾರ್ಯಕ್ರಮದ ರೂವಾರಿಯೂ ಆಗಿದ್ದಾರೆ. ಸದ್ಯ ಬೆಳಗಾವಿಯಿಂದ ಪ್ರಕಟವಾಗುತ್ತಿರುವ ಜನಪ್ರೀಯ ಕನ್ನಡ ದಿನಪತ್ರಿಕೆ "ಹಳ್ಳಿಯ ಸಂದೇಶ" ದ ಧಾರವಾಡದ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದು ಈ ಭಾಗದ ಧಾರ್ಮಿಕ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕಾರ್ಯಕ್ರಮಗಳ ವರದಿ ಮತ್ತು ಲೇಖನಗಳನ್ನು ಬರೆಯುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಈ ಪತ್ರಿಕೆಯ ಭ. ಮಹಾವೀರ ಜನ್ಮ ಕಲ್ಯಾಣಕದ ವಿಶೇಷಾಂಕದ ಸಂಪಾದಕರಾಗಿಯೂ ಕಾರ್ಯನಿರ್ವಾಹಿಸುತ್ತಿದ್ದಾರೆ. ಈ ಹಿರಿ ವಯಸ್ಸಿನಲ್ಲೂ ಹಿರಿ-ಕಿರಿಯರ ಸಾಧಕರ ಕುರಿತು ಪರಿಚಯಾತ್ಮಕ ಲೇಖನ ಬರೆಯುವ ಮೂಲಕ ಅವರ ಪ್ರತಿಭೆಗಳನ್ನು ಗುರುತಿಸುವದು, ಪ್ರೋತ್ಸಾಹಿಸುವುದು ಮತ್ತು ಅನೇಕ ಸಾಧಕರನ್ನು ಗುರುತಿಸಿ ಅವರ ಸಾಧನೆಯನ್ನು ಇಡೀ ಸಮಾಜಕ್ಕೆ ಪರಿಚಯಿಸುವ ಮೂಲಕ ಹಿರಿಯರಿಗೆ ಯುವಕರಿಗೆ ಮತ್ತು ಸಾಧಕರಿಗೆ ಪ್ರಮುಖ ಪ್ರೇರಕರಾಗಿದ್ದಾರೆ. 2023ರಲ್ಲಿ ಅಮೇರಿಕಾದಲ್ಲಿರುವ ಇವರ ಮಗ ಸೊಸೆ ಮತ್ತು ಮೊಮ್ಮಕ್ಕಳೊಂದಿಗೆ ನೂರು ದಿನಗಳ ಕಾಲ ಈ ದೇಶದಲ್ಲಿ ವಾಸ್ತವ್ಯ ಮಾಡಿ ಆ ಸಂದರ್ಭದಲ್ಲಿ ತಮ್ಮ ಅನುಭವ ಅನಿಸಿಕೆ ಅಭಿಪ್ರಾಯವನ್ನು ಪ್ರವಾಸ ಕಥನ ರೂಪದಲ್ಲಿ ಅಲ್ಲಿನ ಸಮಗ್ರ ಚಿತ್ರಣವನ್ನು ತುಂಬಾ ನೈಜವಾಗಿ ಬರೆಯುವುದರೊಂದಿಗೆ ಓದುಗರನ್ನು ತಾವೇ ಅಮೆರಿಕಾ ಪ್ರವಾಸ ಮಾಡಿದ ಅನುಭವವಾಗುವಂತೆ ಚಿತ್ರಿಸಿದ್ದಾರೆ. ಅದು ಈಗ ಪುಸ್ತಕ ರೂಪದಲ್ಲಿ ಪ್ರಕಟವಾಗಲಿದೆ. ಸಮಾಜ ಸೇವೆ, ಬರವಣಿಗೆ, ಸಾಹಿತ್ಯ ಮತ್ತು ಪತ್ರಿಕಾ ಕ್ಷೇತ್ರದಲ್ಲಿ ಇವರ ಸಾಧನೆಯನ್ನು ಗುರುತಿಸಿ ಮೈಸೂರಿನ ಆಚಾರ್ಯ ಗುರುಕುಲ ಮಹಾವಿದ್ಯಾಲಯವು "ಮಹಾವೀರ ಪ್ರಶಸ್ತಿ" ನೀಡಿ ಗೌರವಿಸಿದೆ. ಪ್ರಶಸ್ತಿ ಪತ್ರವನ್ನು ಆಚಾರ್ಯ ಗುರುಕುಲದ ಕುಲಸಚಿವರಾದ ವಿದ್ಯಾವಾಚಷ್ಪತಿ ಡಾ. ಮೋಹನ ಕುಮಾರ ಶಾಸ್ತ್ರೀಯರು ಹುಬ್ಬಳ್ಳಿಯ ನವನಗರದಲ್ಲಿ ನಡೆಯುತ್ತಿರುವ ದಶಲಕ್ಷಣ ಮಹಾಪರ್ವದ ಸಮಾರಂಭದಲ್ಲಿ ನೀಡಿ ಗೌರವಿಸಿದರು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img