ಜೈನ ಧರ್ಮವು ವಿಶ್ವದ ಶ್ರೇಷ್ಠ ಧರ್ಮಗಳಲ್ಲಿ ಒಂದು: ಅಜಿತ್ ಜೈನ್ ಅಭಿಮತ
Published Date: 17-Mar-2025 Link-Copied
ಜೈನ ಧರ್ಮವು ವಿಶ್ವದ ಶ್ರೇಷ್ಠ ಧರ್ಮಗಳಲ್ಲಿ ಒಂದಾಗಿದೆ. ಯಾವುದೇ ಆಸೆ ಪೂರೈಸಲು ಪೂಜೆ ಮಾಡಬಾರದು. ಬದಲಿಗೆ ಜಿನನ ಗುಣಗಳನ್ನು ಅನುಸರಿಸುತ್ತ ಅವರ ಹಾಗೆ ನಾನೂ ಕೂಡ ಆತ್ಮ ಸಾಕ್ಷತ್ಕಾರವನ್ನು ಹೊಂದುವ ಸಲುವಾಗಿ ಪ್ರಾರ್ಥಿಸಬೇಕು ಎಂದು ಅಜಿತ್ ಜೈನ್ ಕೊಕ್ರಾಡಿ ಇವರು ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಜೈನ ವಿದ್ಯಾರ್ಥಿಗಳಿಗೆ ನಡೆದ ಅಷ್ಟ ವಿಧಾರ್ಚನ ಪೂಜಾ ತರಬೇತಿ ಶಿಬಿರದ ಉದ್ಘಾಟನೆಯನ್ನು ಮಾಡಿ ಹೇಳಿದರು. ಮುಂದುವರಿದು ಮಾತಾನಾಡಿದ ಅವರು ಜೈನ ಧರ್ಮದ ವಿಧಿ ವಿಧಾನಗಳನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ಜನನಿಗೆ ಅರ್ಘ್ಯ ನೀಡುವ ಪ್ರಕ್ರಿಯೆಯ ಅರ್ಥವನ್ನು ವಿದ್ಯಾರ್ಥಿಗಳು ಅರಿಯಬೇಕು ಎಂದು ಸಲಹೆ ನೀಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಕೃಷ್ಣರಾಜ ಹೆಗ್ಗಡೆ ಮಾತನಾಡಿ ಸಂಸ್ಥೆಯ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಪರಿಶ್ರಮವನ್ನು ಶ್ಲಾಘಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಕ್ಸಲೆಂಟ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಯುವರಾಜ್ ಜೈನ್ ಮಾತನಾಡಿ ವಿದ್ಯಾರ್ಥಿಗಳು ಧರ್ಮದ ಮಾರ್ಗವನ್ನು ಅನುಸರಿಸುತ್ತಾ ಸ್ಪರ್ಧಾತ್ಮಕ ಜಗತ್ತಿಗೆ ಸಜ್ಜಾಗಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ರಶ್ಮಿತಾ ಜೈನ್ ಉಪಸ್ಥಿತರಿದ್ದು, ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಆಡಳಿತ ನಿರ್ದೇಶಕರಾದ ಡಾ. ಸಂಪತ್ ಕುಮಾರ್ ಕಾರ್ಯಕ್ರಮವನ್ನು ಸಂಘಟಿಸಿ ನಿರೂಪಿಸಿದರು. ಪಾವನ ಪಂಚನ್ಮೋಕಾರ ಮಂತ್ರ ಪಠಣದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.