ವೇಣೂರು: ಶ್ರೀ ಬಾಹುಬಲಿ ಬೆಟ್ಟದ ವಾರ್ಷಿಕ ರಥಯಾತ್ರಾ ಮಹೋತ್ಸವ ಸಂಪನ್ನ
Published Date: 17-Mar-2025 Link-Copied
ವೇಣೂರು: ರಥೋತ್ಸವದಂತಹ ಪುಣ್ಯ ಕಾರ್ಯ ಗಳಲ್ಲಿ ನಿಷ್ಠೆ ಯಿಂದ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡಲ್ಲಿ ಜಿನೇಂದ್ರ ಭಗವಂತರ ಅನುಗ್ರಹ ನಮಗೆ ಪ್ರಾಪ್ತವಾಗುತ್ತದೆ. ಸಮ್ಯಕ್ ಜ್ಞಾನ, ಸಮ್ತಕ್ ದರ್ಶನ ಮತ್ತು ಸಮ್ಯಕ್ ಚಾರಿತ್ರ್ಯದ ಪ್ರತೀಕವೇ ರಥೋತ್ಸವ. ಇದರಿಂದ ಶ್ರಾವಕ-ಶ್ರಾವಕಿಯರಾದ ನಮ್ಮಲ್ಲಿ ಧಾರ್ಮಿಕ ಪ್ರಜ್ಞೆಯು ಜಾಗೃತವಾಗುತ್ತದೆ ಎಂದು ಮೂಡಬಿದ್ರೆ ಶ್ರೀ ಜೈನಮಠದ ಪ. ಪೂ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರು ನುಡಿದರು. ಅವರು ಬಾಹುಬಲಿ ಬೆಟ್ಟದ ವಾರ್ಷಿಕ ರಥಯಾತ್ರಾ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನವಿತ್ತರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇಣೂರು ಶ್ರೀ ದಿಗಂಬರ ಜೈನ ತೀರ್ಥ ಕ್ಷೇತ್ರ ಸಮಿತಿಯ ಉಪಾಧ್ಯಕ್ಷರಾದ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರು ವಹಿಸಿ, ಮಾತನಾಡಿ ಈ ವರ್ಷದಿಂದ ವೇಣೂರು ಯಾತ್ರಿ ನಿವಾಸದಲ್ಲಿ “ಶ್ರುತ ಭಂಡಾರ” ಸ್ವಾಧ್ಯಾಯ ಕೇಂದ್ರ ಪ್ರಾರಂಭಿಸಿದ್ದು, ಶ್ರಾವಕ-ಶ್ರಾವಕಿಯರು ಇದರ ಸದುಪಯೋಗ ಪಡೆದುಕೊಳ್ಳುವಂತೆ ವಿನಂತಿಸಿದರು. ಮುಖ್ಯ ಅತಿಥಿಗಳಾದ ಕರ್ನಾಟಕ ಸರಕಾರದ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮೂಡುಬಿದಿರೆ ಇವರು “ಶ್ರುತ ಭಂಡಾರ” ಸ್ವಾಧ್ಯಾಯ ಕೇಂದ್ರವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಕಳೆದ ಬಾರಿಯ ಮಹಾಮಸ್ತಕಾಭಿಷೇಕದ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ನೆರವೇರಿರುವುದಕ್ಕೆ ಸಮಿತಿಯ ಪದಾಧಿಕಾರಿಗಳಿಗೆ ಅಭಿನಂದನೆಯನ್ನು ಸಲ್ಲಿಸಿದರು ಹಾಗೂ ವೇಣೂರು ತೀರ್ಥಕ್ಷೇತ್ರದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹಾಗೂ ಯಾತ್ರಾರ್ಥಿಗಳ ಅನುಕೂಲಕ್ಕೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳಿಗೆ ಸರಕಾರದ ಅನುದಾನಕ್ಕೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು. ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ: ರಥೋತ್ಸವದ ಧಾರ್ಮಿಕ ಸಭೆಯಲ್ಲಿ 90ವರ್ಷ ದಾಟಿದ ಹಿರಿಯ ಶ್ರಾವಕಿ ಗುಣಾವತಿ ಪಿ.ಎ. ಆಳ್ವ ಪಂಜಾಲ್‌ಬೈಲು, ಹಿರಿಯ ಶ್ರಾವಕ ಜಗತ್ಪಾಲ ಮುದ್ಯ ಕತ್ತೋಡಿ ಹಾಗೂ ಹಿರಿಯ ಶ್ರಾವಕಿ ಗುಣಾವತಿ ಅಮ್ಮ ಬರಮೇಲು ಇವರನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು. ಇತ್ತೀಚೆಗೆ ಮಹಾಕವಿ ರತ್ನಾಕರವರ್ಣಿ ಪ್ರಶಸ್ತಿ ಪಡೆದ ಮಾಂಡೋವಿ ಮೋಟರ್ಸ್‌ನ ಚೀಫ್ ಜನರಲ್ ಮೇನೆಜರ್ ನೇರೆಂಕಿ ಪಾರ್ಶ್ವನಾಥ ಜೈನ್, ಸಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾದ ದ್ವಿಶಾನ್ ಜೈನ್ ಕಂಚ ಇವರನ್ನು ಗೌರವಿಸಲಾಯಿತು. 2024ರ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿಯ ಪ್ರತಿಭಾವಂತ ಜೈನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರದ ಪ್ರಾಯೋಜಕರುಗಳಾದ ದಿ. ಅಂತಪ್ಪ ಆಳ್ವರು, ಬಡಕೋಡಿ ದಿ. ಆದಿರಾಜ ಶೆಟ್ಟಿ, ಮಾರಗುತ್ತು ದಿ. ವಿಜಯರಾಜ ಅಧಿಕಾರಿ ಕುಟುಂಬಸ್ಥರನ್ನು ಹಾಗೂ ಅಕ್ಷಯ ಕುಮಾರ್ ಕಂಬಳಿ ಉಜಿರೆ ಮೂಡುಬಿದಿರೆಯ ಎಮ್. ವಿ. ಶೆಟ್ಟಿ ಇವರನ್ನು ಗೌರವಿಸಲಾಯಿತು. ಚಾರ್ವಿ ಪ್ರಾರ್ಥಿಸಿ, ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ಕಾರ್ಯದರ್ಶಿ, ವಿ. ಪ್ರವೀಣ್ ಕುಮಾರ್ ಇಂದ್ರ ಸ್ವಾಗತಿಸಿದರು. ಸಮಿತಿ ಕೋಶಾಧಿಕಾರಿ ಪಿ. ಜಯರಾಜ್ ಕಂಬಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಿತಿ ಜೊತೆ ಕಾರ್ಯದರ್ಶಿ ಮಹಾವೀರ್ ಜೈನ್ ಮೂಡುಕೋಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ವೇಣೂರು, ಮೂಡುಬಿದಿರೆ, ಪರುಷಗುಡ್ಡೆ ಜಿನಭಜನಾ ತಂಡಗಳಿಂದ ಜಿನಭಜನಾ ಕಾರ್ಯಕ್ರಮ ನಡೆಯಿತು. ಬಳಿಕ ಉತ್ಸವ, ಶ್ರೀ ಕೊಡಮಣಿತ್ತಾಯ ದೈವದ ನೇಮ, ಬಾಹುಬಲಿ ಸ್ವಾಮಿಗೆ 24 ಕಲಶಗಳಿಂದ ಪಾದಾಭಿಷೇಕ, ದ್ವಜಾವರೋಹಣದೊಂದಿಗೆ ರಥಯಾತ್ರಾ ಮಹೋತ್ಸವ ಸಂಪನ್ನಗೊಂಡಿತು.