ಇಂದಿನಿಂದ ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇವಳ ಬ್ರಹ್ಮಕಲಶೋತ್ಸವ
Published Date: 07-Jan-2025 Link-Copied
ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಜಾತ್ರಾ ಮಹೋತ್ಸವ ಜ. 8ರಿಂದ 20ರವರೆಗೆ ಸೀಮೆಯ ತಂತ್ರಿಗಳಾದ ನಡ್ಡತಾಡಿ ಬ್ರಹ್ಮಶ್ರೀ ವೇ.ಮೂ. ಶ್ರೀಪಾದ ಪಾಂಗಣ್ಣಾಯರ ನೇತೃತ್ವದಲ್ಲಿ ನಡೆಯಲಿದೆ ಎಂದು ಆನುವಂಶಿಕ ಆಡಳಿತ ಮೋಕ್ತಸರ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರು ತಿಳಿಸಿದ್ದಾರೆ. ಅಜಿಲ ವಂಶಸ್ತರು 12 ಮಾಗಣೆಗೆ 32 ಗ್ರಾಮಗಳನ್ನು ಒಳಗೊಂಡು ಅಳದಂಗಡಿ ಶ್ರೀ ಸೋಮನಾಥೇಶ್ವರಿ, ವೇಣೂರು ಶ್ರೀ ಮಹಾಲಿಂಗೇಶ್ವರ, ಕೇಳ ಪಂಚಲಿಂಗೇಶ್ವರ, ಬರಾಯ ಗೋಪಾಲಕೃಷ್ಣ ದೇವಾಲಯಗಳನ್ನು ಸ್ಥಾಪನೆ ಮಾಡಿದ್ದು ಅಳದಂಗಡಿಯ ಈ ದೇವಾಲಯವು ಅಜಿಲ ಸೀಮೆಗೆ ಸಂಬಂಧಪಟ್ಟ ದೇವಾಲಯವಾಗಿದೆ. ಈ ದೇವಾಲಯದಲ್ಲಿ 2007ರಲ್ಲಿ ಸೀಮೆಯ ಭಕ್ತರ ಸಹಕಾರದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಗೌರವಾಧ್ಯಕ್ಷತೆಯಲ್ಲಿ ಬ್ರಹ್ಮಕಲಶೋತ್ಸವವನ್ನು ನೆರವೇರಿಸಲಾಗಿತ್ತು. 12 ವರ್ಷಕ್ಕೆ ಬ್ರಹ್ಮಕಲಶೋತ್ಸವ ಮಾಡಬೇಕಾಗಿದ್ದು ಸೀಮೆಯಲ್ಲಿ ಹಲವು ದೇವಸ್ಥಾನಗಳಲ್ಲಿ ಬ್ರಹ್ಮಕಲಶೋತ್ಸವ ಇದ್ದುದರಿಂದ ಪ್ರಸಕ್ತ ದೇವಳದಲ್ಲಿ ನಡೆದ ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ 18 ವರ್ಷಗಳ ಬಳಿಕ ಮತ್ತೆ ಬ್ರಹ್ಮಕಲಶೋತ್ಸವ ನಡೆಯುತ್ತಿದೆ. ಅದರಂತೆ ಅನೇಕ ಜೀರ್ಣೋದ್ದಾರ ಕಾರ್ಯಗಳನ್ನು ಕೈಗೊಳ್ಳುವ ಕುರಿತು ಚಿಂತಿಸಲಾಗಿದೆ. ದೇವಳದ ಪ್ರಾಂಗಣ, ಒಳಾಂಗಣದ ನವೀಕರಣ, ಸುತ್ತ ಪ್ರಾಂಗಣದಲ್ಲಿ ಇಂಟರ್‌ಲಾಕ್ ಅಳವಡಿಕೆ, ಪಾಕಶಾಲೆ ನಿರ್ಮಾಣ ಹಾಗೂ ಋತ್ವಿಜರ ಭೋಜನ ಶಾಲೆ, ರಜತ ಪಲ್ಲಕ್ಕಿ ಸಮರ್ಪಣೆ, ಬ್ರಹ್ಮಕಲಶೋತ್ಸವ ಸೇರಿದಂತೆ ಸುಮಾರು 1.50 ಕೋಟಿ ರೂ. ವೆಚ್ಚದಲ್ಲಿ ಸೀಮೆಯ ಭಕ್ತರ ಸಹಕಾರದಿಂದ ಕಾರ್ಯಕ್ರಮ ನಡೆಯಲಿದೆ. ಬ್ರಹ್ಮಕಲಶೋತ್ಸವ ಮತ್ತು ಉಪಸಮಿತಿ ರಚಿಸಲಾಗಿದೆ. ಈ ಬಾರಿ ಬ್ರಹ್ಮಕಲಶೋತ್ಸವದಲ್ಲಿ ದೇವತಾ ಕಾರ್ಯಕ್ರಮ ಮತ್ತು ಅನ್ನಸಂತರ್ಪಣೆ ಕಾರ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಜ. 2ರಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಹರೀಶ್ ಕುಮಾರ್ ಚಪ್ಪರ ಮುಹೂರ್ತ ನೆರವೇರಿಸಿದ್ದಾರೆ. ಜ. 8ರಂದು ಅಳದಂಗಡಿ ಬಸ್ ನಿಲ್ದಾಣದಿಂದ ಹೊರೆಕಾಣಿಕೆ ಮೆರವಣಿಗೆ ತಾಲೂಕಿನ ಕುಣಿತ ಭಜನಾ ತಂಡಗಳ ಭಜನೆಯೊಂದಿಗೆ ನಡೆಯಲಿದೆ. ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಉಗ್ರಾಣ ಮುಹೂರ್ತ ನೆರವೇರಿಸಲಿದ್ದಾರೆ. ಜ. 10ರಂದು ನಡೆಯುವ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಭಾಗವಹಿಸಲಿದ್ದಾರೆ. ಜ. 12ರಂದು ಬ್ರಹ್ಮ ಕುಂಭಾಭಿಷೇಕ ಜರುಗಲಿದೆ. ಜ. 14ರಿಂದ 20ರವರೆಗೆ ವಾರ್ಷಿಕ ಜಾತ್ರೋತ್ಸವ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.