ಉಜಿರೆ ಶ್ರೀ ಧ.ಮಂ. ಕಾಲೇಜಿಗೆ ರಾಷ್ಟ್ರಮಟ್ಟದ ಎರಡು ಪ್ರಶಸ್ತಿ
Published Date: 28-Oct-2024 Link-Copied
ಉಜಿರೆ: ದೇಶದ ಪ್ರತಿಷ್ಠಿತ ಯುಜಿಸಿಯು ನ್ಯಾಕ್ ಸಂಸ್ಥೆ ಮೂಲಕ ನಡೆಸುವ ಗುಣಮಟ್ಟ ಪರೀಕ್ಷೆಯಲ್ಲಿ ಸತತ ನಾಲ್ಕು ಬಾರಿ A++ ಮಾನ್ಯತೆಯೊಂದಿಗೆ ರಾಜ್ಯದ, ದೇಶದ ಹಲವು ಪ್ರಶಸ್ತಿ, ಗೌರವಕ್ಕೆ ಭಾಜನವಾಗಿರುವ ಉಜಿರೆಯ ಶ್ರೀ ಧ.ಮಂ. ಕಾಲೇಜಿಗೆ ಈಚೆಗೆ ಇನ್ನೆರಡು ಪ್ರಶಸ್ತಿಗಳು ಲಭಿಸಿವೆ. ರಾಷ್ಟ್ರಮಟ್ಟದ ‘ಬಿಗಿನಪ್ ರಿಸರ್ಚ್ ಇಂಟಲಿಜೆನ್ಸ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯು ಉಜಿರೆ ಶ್ರೀ ಧ.ಮಂ. ಕಾಲೇಜನ್ನು ‘ಬೆಸ್ಟ್ ಆ್ಯಂಡ್ ಮೋಸ್ಟ್ ಟ್ರಸ್ಟೆಡ್ ಡಿಗ್ರಿ ಕಾಲೇಜ್ ಆಫ್ ಕರ್ನಾಟಕ’ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಅತ್ಯುತ್ತಮ ಆಡಳಿತ, ಗುಣಾತ್ಮಕ ಶಿಕ್ಷಣ ಹಾಗೂ ಸಾಮಾಜಿಕ ಕೊಡುಗೆಗೆ ನೀಡಲಾಗುವ ಪ್ರಶಸ್ತಿಗೆ ಕಾಲೇಜನ್ನು ಆಯ್ಕೆ ಮಾಡಿದೆ. ಜೊತೆಗೆ, ‘ಶೈಕ್ಷಣಿಕ ಗುಣಮಟ್ಟದಲ್ಲಿ ಉತ್ಕೃಷ್ಟತೆ ಹಾಗೂ ಅದರ ಪರಿಣಾಮಕಾರಿ ಅಳವಡಿಕೆ ಅನುಷ್ಠಾನ’ ವಿಭಾಗದಲ್ಲಿಯೂ ಕಾಲೇಜನ್ನು ಪ್ರಶಸ್ತಿಗೆ ಪರಿಗಣಿಸಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ‘ಇಂಡಿಯಾ ಇಲೈಟ್ ಎಜುಕೇಶನ್ ಆ್ಯಂಡ್ ಇನ್ಸ್ಟಿಟ್ಯೂಷನಲ್ ಎಕ್ಸೆಲೆನ್ಸ್ ಅವಾರ್ಡ್ಸ್ ಆ್ಯಂಡ್ ಕಾನ್ಫರೆನ್ಸ್ 2024’ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಹಾಗೂ ಉಪ ಪ್ರಾಂಶುಪಾಲ ಎಸ್.ಎನ್. ಕಾಕತ್ಕರ್ ಅವರು ಪ್ರಶಸ್ತಿ ಸ್ವೀಕರಿಸಿದರು. ಸಮಾರಂಭದಲ್ಲಿ, 450ಕ್ಕೂ ಹೆಚ್ಚು ಅಧಿಕ ರಾಷ್ಟ್ರಮಟ್ಟದ ಸಂಸ್ಥೆಗಳ ಪ್ರತಿನಿಧಿಗಳು, ವಿದ್ವಾಂಸರು, ಶೈಕ್ಷಣಿಕ ತಜ್ಞರು, ವಿಶ್ವವಿದ್ಯಾಲಯ ಹಾಗೂ ಶಾಲಾ ಕಾಲೇಜುಗಳ ಪ್ರತಿನಿಧಿಗಳು ಭಾಗವಹಿಸಿದ್ದರು.