ಎಸ್.ಡಿ.ಎಂ ಕಾಲೇಜಿನಲ್ಲಿ ಗ್ರಾಮೀಣ ಪತ್ರಿಕೋದ್ಯಮ ಕಾರ್ಯಾಗಾರ


Logo

Published Date: 04-Oct-2024 Link-Copied

ಉಜಿರೆ. ಆ.4: ಹೊಸ ಕಾಲದ ಸ್ಪರ್ಧಾತ್ಮಕತೆಯನ್ನು ನಿರ್ವಹಿಸುವುದರೊಂದಿಗೆ ವಿಶ್ವಾಸಾರ್ಹತೆ ಕಾಯ್ದುಕೊಂಡು ಜನಪರ ಮೌಲ್ಯಗಳಿಗೆ ಅನುಗುಣವಾಗಿ ಪ್ರಯೋಗ ನಡೆಸುವುದರ ಕಡೆಗೆ ಸುದ್ದಿಮಾಧ್ಯಮಗಳು ಆದ್ಯತೆ ನೀಡಬೇಕು ಎಂದು ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಅಭಿಪ್ರಾಯಪಟ್ಟರು. ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರದಲ್ಲಿ ಸುದ್ದಿ ಬಿಡುಗಡೆ ಪತ್ರಿಕೆ, ಎಸ್.ಡಿ.ಎಂ ಪತ್ರಿಕೋದ್ಯಮ ವಿಭಾಗದ ಸಹಯೋಗದಲ್ಲಿ "ಗ್ರಾಮೀಣ ಪತ್ರಿಕೋದ್ಯಮದ ಅವಕಾಶಗಳು- ಪತ್ರಿಕಾ ಕಾರ್ಯಗಾರ" ಕುರಿತು ಶುಕ್ರವಾರ ಆಯೋಜಿತವಾದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಒಂದೊಂದು ಕಾಲಘಟ್ಟದಲ್ಲಿ ಒಂದೊಂದು ಮಾಧ್ಯಮ ಪ್ರಭಾವೀಯಾಗುತ್ತದೆ. ಹಿಂದೆ ಮುದ್ರಿತ ಸುದ್ದಿ ಪ್ರತಿಕೆಗಳು ವ್ಯಾಪಕವಾಗಿ ವಿಶ್ವಾಸಾರ್ಹತೆಯನ್ನು ಕಾಯ್ದುಕೊಂಡಿದ್ದವು. ಈಗ ಒಂದೊಂದು ಪತ್ರಿಕೆಯ ಕಂಟೆಂಟ್ ತದ್ವಿರುದ್ಧವಾಗಿದೆ. ಯಾವುದನ್ನು ನೆಚ್ಚಿಕೊಳ್ಳಬೇಕು ಎಂಬ ದ್ವಂದ್ವ ಓದುಗರಲ್ಲಿದೆ. ಈ ದ್ವಂದ್ವ ಸುದ್ದಿವಾಹಿನಿಗಳನ್ನು ವೀಕ್ಷಿಸುವವರಲ್ಲಿಯೂ ಇದೆ. ಇಂಥ ಸಂದರ್ಭದಲ್ಲಿ ಸುದ್ದಿಮಾಧ್ಯಮಗಳು ವಿಶ್ವಾಸಾರ್ಹತೆಯನ್ನು ಕಾಯ್ದುಕೊಳ್ಳುವ ಪ್ರಯೋಗಗಳನ್ನು ನಡೆಸಿ ಜನಮನ್ನಣೆಯನ್ನು ಪಡೆಯುವುದರ ಕಡೆಗೆ ಹೆಚ್ಚಿನ ಗಮನ ನೀಡುವ ಅಗತ್ಯವಿದೆ ಎಂದು ಹೇಳಿದರು. ಸುದ್ದಿಮಾಧ್ಯಮಗಳನ್ನು ನಿರ್ವಹಿಸುವಾಗ ಆರ್ಥಿಕತೆಯೂ ಮುಖ್ಯ. ಜಾಹಿರಾತುಗಳಿಗಷ್ಟೇ ಆದ್ಯತೆ ನೀಡುವ ಮಾಧ್ಯಮಗಳೂ ಇವೆ. ಜಾಹಿರಾತುಗಳ ಆದ್ಯತೆಯೊಂದಿಗೆ ಸತ್ವಯುತವಾದ ಸುದ್ದಿಗೆ ಆದ್ಯತೆ ನೀಡುವ ಮಾಧ್ಯಮಗಳೂ ಇವೆ. ನಮ್ಮಲ್ಲಿಯೇ ಮೊದಲು ಎಂಬ ಹುಮ್ಮಸ್ಸಿನಲ್ಲಿ ನಿಖರವಲ್ಲದ ಸುದ್ದಿವಿವರಗಳನ್ನು ಹರಿಯಬಿಡುವ ಪ್ರಯತ್ನಗಳೂ ನಡೆಯುತ್ತಿವೆ. ಇವುಗಳ ನಡುವೆ ಮೌಲಿಕವಾದ ಸುದ್ದಿಬಿಂಬಗಳನ್ನು ಕಟ್ಟಿಕೊಡುವ ಪ್ರಯೋಗಶೀಲತೆಯೇ ಶಾಶ್ವತ ಪ್ರಭಾವ ಬೀರುತ್ತದೆ. ಗ್ರಾಮೀಣ ಭಾಗದಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿರುವ ಸ್ಥಳೀಯ ಪತ್ರಿಕೆಗಳು ಈ ನಿಟ್ಟಿನಲ್ಲಿ ಪ್ರಶಂಸನೀಯ ಎಂದರು. ಸದಭಿರುಚಿಯ ಓದು ಮತ್ತು ವೀಕ್ಷಣೆ ಟ್ರೆಂಡ್ ರೂಪುಗೊಳ್ಳುವುದಕ್ಕೆ ಮಾಧ್ಯಮಗಳೊಂದಿಗೆ ಜನಸಮೂಹವೂ ಪ್ರೇರಣೆಯಾಗಿ ನಿಲ್ಲಬೇಕಾಗುತ್ತದೆ. ಸತ್ವಯುತವಾದ ಕಂಟೆಂಟ್ ನೊಂದಿಗಿನ ಮಾಧ್ಯಮ ಪ್ರಯೋಗಗಳು ನಡೆದಾಗ ಅಂಥವುಗಳನ್ನು ಬೆಂಬಲಿಸುವುದರ ಮೂಲಕ ಸದಭಿರುಚಿಯ ಸಂಸ್ಕೃತಿಯನ್ನು ಹುಟ್ಟುಹಾಕಬಹುದು. ಇದು ಆರೋಗ್ಯಪೂರ್ಣ ಸಮಾಜವನ್ನು ರೂಪಿಸುತ್ತದೆ ಎಂದು ನುಡಿದರು. ರಾಷ್ಟ್ರಮಟ್ಟದಲ್ಲಿ ಕಾರ್ಯೋನ್ಮುಖವಾಗಿರುವ ಖ್ಯಾತನಾಮ ಪತ್ರಿಕೆಗಳಂತೆಯೇ ಸ್ಥಳೀಯ ಪತ್ರಿಕೆಗಳೂ ಭಿನ್ನವಾಗಿ ಕಾರ್ಯನಿರ್ವಹಿಸುತ್ತಿವೆ. ಈ ಕಾರಣಕ್ಕಾಗಿಯೇ ಗ್ರಾಮೀಣ ಪತ್ರಿಕೋದ್ಯಮವು ಅಭ್ಯುದಯದ ಹಾದಿಯನ್ನು ನಿಚ್ಛಳಗೊಳಿಸುತ್ತಿದೆ. ಗ್ರಾಮೀಣ ಭಾಗದ ಸಮಸ್ಯೆಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಗ್ರಾಮೀಣ ಪತ್ರಿಕೆಗಳು ಸಮರ್ಥವಾಗಿ ನಿಭಾಯಿಸಿಕೊಂಡು ಬರುತ್ತಿವೆ. ಇದರ ಜೊತೆಯಲ್ಲಿ ಸಾಮಾಜಿಕ ಜಾಗೃತಿ, ಜನ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರಾಮೀಣ ಪತ್ರಿಕೋದ್ಯಮದ ಅವಕಾಶಗಳು, ಗ್ರಾಮೀಣ ವರದಿಗಾರರು ಎದುರಿಸುವ ಸಮಸ್ಯೆಗಳು, ಅಭಿವೃದ್ಧಿ ಪತ್ರಿಕೋದ್ಯಮ ಮತ್ತು ಪಾಸಿಟಿವ್ ಹಾಗೂ ನೆಗೆಟಿವ್ ಪತ್ರಿಕೋದ್ಯಮದ ಕುರಿತು ಚರ್ಚೆ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಜರುಗಿತು. ಕಾರ್ಯಕ್ರಮದಲ್ಲಿ ಸುದ್ದಿ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಹಿರಿಯ ಪತ್ರಕರ್ತ ಜಿತೇಂದ್ರ ಕುಂದೇಶ್ವರ, ಪುತ್ತೂರಿನ ಅಂಬಿಕಾ ವಿದ್ಯಾಲಯದ ಪ್ರಾಂಶುಪಾಲರಾದ ರಾಕೇಶ್‌ ಕುಮಾರ್ ಕಮ್ಮಾಜೆ ಉಪಸ್ಥಿತರಿದ್ದರು. ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ್ ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸುದ್ದಿ ಬಿಡುಗಡೆಯ ಸಂತೋಷ್ ಕುಮಾರ್ ವಂದಿಸಿದರು. ವಿದ್ಯಾರ್ಥಿನಿ ದಿವ್ಯಶ್ರೀ ಹೆಗಡೆ ನಿರೂಪಿಸಿದರು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img