ಉಜಿರೆ: ಎಂಜಿನಿಯರ್‌ಗಳ ದಿನಾಚರಣೆ ಮತ್ತು ಅನುಮೋದನೆಗೊಂಡ ವೃತ್ತಿನಿರತ ಸಿವಿಲ್ ಎಂಜಿನಿಯರಿಂಗ್ ವಿಧೇಯಕ 2024


Logo

Published Date: 21-Sep-2024 Link-Copied

ಉಜಿರೆ: ದೇಶದ ಪ್ರಗತಿಗೆ ಎಂಜಿನಿಯರ್‌ಗಳ ಸೇವೆ ಮತ್ತು ಕೊಡುಗೆ ಅಮೂಲ್ಯವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಹೇಳಿದರು. ಅವರು ಗುರುವಾರ ಉಜಿರೆಯಲ್ಲಿ ಓಶಿಯನ್‌ಪರ್ಲ್ ಹೋಟೆಲ್‌ನ ಸಭಾಭವನದಲ್ಲಿ ಎಂಜಿನಿಯರ್‌ಗಳ ದಿನಾಚರಣೆ ಮತ್ತು ಅನುಮೋದನೆಗೊಂಡ ವೃತ್ತಿನಿರತ ಸಿವಿಲ್‌ಎಂಜಿನಿಯರಿಂಗ್ ವಿಧೇಯಕ-2024 “ಸಂಭ್ರಮ” ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕಲಿಯುಗದಲ್ಲಿ ಸಂಘಟನೆಯೇ ಶಕ್ತಿ ಎಂಬ ಮಾತಿದೆ. ಯಾವುದೇ ಕ್ಷೇತ್ರದಲ್ಲಿ ವೃತ್ತಿಬಾಂಧವರೆಲ್ಲ ಸಂಘಟಿತರಾಗಿ ಕೆಲಸ ಮಾಡಿದರೆ ಉನ್ನತ ಪ್ರಗತಿ ಸಾಧ್ಯವಾಗುತ್ತದೆ. ವಿಶ್ವದ ಎಲ್ಲಾ ದೇಶಗಳ ಚಿತ್ತ ಈಗ ಪ್ರಗತಿಯ ಹಾದಿಯಲ್ಲಿ ಮುನ್ನಡೆಯುತ್ತಿರುವ ಭಾರತದತ್ತ ಇದೆ. ವೃತ್ತಿನಿರತ ಸಿವಿಲ್ ಎಂಜಿನಿಯರ್‌ಗಳ ಸಂಘಟನೆ ಉತ್ತರೋತ್ತರ ಪ್ರಗತಿಯನ್ನು ಸಾಧಿಸಲೆಂದು ಅವರು ಹಾರೈಸಿದರು. ಇದೇ ಸಂದರ್ಭದಲ್ಲಿ ಲೋಗೋ ಅನಾವರಣಗೊಳಿಸಲಾಯಿತು. ಸಿವಿಲ್‌ಎಂಜಿನಿಯರ್‌ಗಳ ರಾಜ್ಯಮಟ್ಟದ ಸಂಘಟನೆಯ ಅಧ್ಯಕ್ಷ ಶ್ರೀಕಾಂತ್ ಎಸ್. ಚನ್ನಲ್ ಮಾತನಾಡಿ, ಸಿವಿಲ್‌ ಎಂಜಿನಿಯರ್‌ಗಳು, ರಾಷ್ಟ್ರನಿರ್ಮಾಪಕರು ಒಂದು ದೇಶದ ಕಟ್ಟಡಗಳ ವಿನ್ಯಾಸ ಅಲ್ಲಿನ ಜನರ ಸಂಸ್ಕೃತಿ ಮತ್ತು ನಾಗರಿಕತೆಯನ್ನು ಪ್ರತಿಬಿಂಬಿಸುತ್ತದೆ. ರಸ್ತೆ, ಸೇತುವೆ, ಕಟ್ಟಡ, ಅಣೆಕಟ್ಟು ಹಾಗೂ ವಾಣಿಜ್ಯಸಂಕೀರ್ಣಗಳ ನಿರ್ಮಾಣದಲ್ಲಿ ಸಿವಿಲ್‌ಎಂಜಿನಿಯರ್‌ಗಳ ಸೇವೆ ಅಮೂಲ್ಯವಾಗಿದೆ. ಕೇಂದ್ರಸರ್ಕಾರ ಹತ್ತು ಲಕ್ಷ ಕೋಟಿ ರೂ. ಹಾಗೂ ಖಾಸಗಿ ವಲಯದ ಉದ್ಯಮಗಳು ಹದಿನೆಂಟು ಲಕ್ಷ ಕೋಟಿ ರೂ. ಸೇರಿದಂತೆ ಒಟ್ಟು ಇಪ್ಪತ್ತೆಂಟು ಲಕ್ಷ ಕೋಟಿ ರೂ. ಸಿವಿಲ್ ಕಟ್ಟಡ ಕಾಮಗಾರಿಗಳಿಗಾಗಿ ಈಗಾಗಲೇ ವಿನಿಯೋಗಿಸಲಾಗಿದೆ. ಆದರೆ ಪರಿಣತ ಹಾಗೂ ಅಧಿಕೃತ ಸಿವಿಲ್ ಎಂಜಿನಿಯರ್‌ಗಳು ಕಟ್ಟಡ ಕಾಮಗಾರಿಯಲ್ಲಿ ಭಾಗವಹಿಸದೆ ತಾಂತ್ರಿಕಜ್ಞಾನದ ಕೊರತೆಯಿಂದಾಗಿ ಕಟ್ಟಡಗಳ ಕುಸಿತ, ಸೇತುವೆಗಳಲ್ಲಿ ಬಿರುಕು, ರಸ್ತೆಗಳ ಕಳಪೆ ಕಾಮಗಾರಿ, ಅಣೆಕಟ್ಟುಗಳಲ್ಲಿ ಬಿರುಕು ಮುಂತಾದ ಸಮಸ್ಯೆಗಳು ಉಂಟಾಗುತ್ತವೆ. ಆದುದರಿಂದ ಅಧಿಕೃತ ಪರವಾನಿಗೆ ಪಡೆದ ಸಿವಿಲ್ ಎಂಜಿನಿಯರ್‌ಗಳೆ ಕಾಮಗಾರಿಯ ಉಸ್ತುವಾರಿ ನೋಡಿಕೊಳ್ಳಬೇಕು. ಇದಕ್ಕಾಗಿ ಅನುಮೋದನೆಗೊಂಡ ವೃತ್ತಿನಿರತ ಸಿವಿಲ್‌ಎಂಜಿನಿಯರಿಂಗ್ ವಿಧೇಯಕ ಅನಿವಾರ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಈಗಾಗಲೇ ವಿಧೇಯಕವು ಸರ್ಕಾರ ಮತ್ತು ಉಭಯಸದನಗಳಲ್ಲಿ ಅನುಮೋದನೆಗೊಂಡಿದ್ದು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಗೊಂಡಿದೆ ಎಂದು ಅವರು ಹೇಳಿದರು. ಬೆಂಗಳೂರು ಎಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಎಂ.ಯು. ಅಶ್ವಥ್, ಅಜಿತ್ ಕುಮಾರ್ ಮತ್ತು ಎಂ. ಆರ್. ಕಲ್‌ಗಲ್ ತಮ್ಮ ಅನಿಸಿಕೆ ತಿಳಿಸಿದರು. ವಿಶೇಷ ಸಾಧನೆ ಮಾಡಿದ ಸಿವಿಲ್‌ಎಂಜಿನಿಯರ್‌ಗಳಾದ ಉಜಿರೆಯ ಜಗದೀಶಪ್ರಸಾದ್, ಸಂಪತ್‌ರತ್ನ ರಾವ್ ಮತ್ತು ಸುಭಾಶ್ಚಂದರ ಅವರನ್ನು ಗೌರವಿಸಲಾಯಿತು. ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದ ಉಜಿರೆಯ ಜಗದೀಶ ಪ್ರಸಾದ್ ಯಾವುದೇ ತಾಂತ್ರಿಕ ಮಾಹಿತಿ ಹಾಗೂ ಅರ್ಹತೆ ಇಲ್ಲದವರು ಸಿವಿಲ್‌ಎಂಜಿನಿಯರ್‌ಗಳ ಮೇಲೆ ಮಾಡುವ ಆಪಾದನೆ ಹಾಗೂ ದಬ್ಬಾಳಿಕೆ ತಡೆಯಲು ಸಂಘಟನೆ ಹಾಗೂ ವಿಧೇಯಕ ಅನಿವಾರ್ಯವಾಗಿದೆ ಎಂದರು. ಉಜಿರೆಯ ಎಸ್.ಡಿ.ಎಂ. ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಡಾ. ರವೀಶ್ ಪಡುಮಲೆ ಕಾರ್ಯಕ್ರಮ ನಿರ್ವಹಿಸಿದರು. ಸಮಾರಂಭಕ್ಕೆ ಮೊದಲು ಆಕರ್ಷಕ ವಾಹನ ಜಾಥಾ ನಡೆಯಿತು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img