ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ ಕಾವ್ಯ ರಚನಾ ಕಮ್ಮಟ
Published Date: 15-Sep-2024 Link-Copied
ಉಜಿರೆ, ಸೆ.12: ಸಾಹಿತ್ಯವೆನ್ನುವುದು ಸಮುದ್ರ ಇದ್ದಂತೆ. ಕನ್ನಡ ಸಾಹಿತ್ಯಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಇಡೀ ಜಗತ್ತಿನ ಸಾಹಿತ್ಯ ತಿಳಿಯಲು ಒಂದು ಜನ್ಮ ಸಾಕಾಗುವುದಿಲ್ಲ. ಯಾವ ಭಾವಕ್ಕೆ ಎಷ್ಟು ಒತ್ತು ನೀಡುತ್ತೇವೆ ಎಂಬುದು ಸಾಹಿತ್ಯದಲ್ಲಿ ಮುಖ್ಯವಾಗುತ್ತದೆ ಎಂದು ಯುವ ಕವಿ, ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಮಧು ಬಿರಾದಾರ ಹೇಳಿದರು. ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ ಕನ್ನಡ ಸಂಘದ ವತಿಯಿಂದ ಇಂದು (ಸೆ. 12) ಆಯೋಜಿಸಿದ್ದ ‘ಕಾವ್ಯ ಕಟ್ಟುವ ಬಗೆ’ ಕಾವ್ಯ ರಚನಾ ಕಮ್ಮಟದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿದ್ದರು. ಪಂಪ, ರನ್ನ, ಕುವೆಂಪು ಬರೆದಿರುವುದು ಮಹಾಭಾರತವೇ. ಆದರೆ ಅವರ ಕಾಲಘಟ್ಟ, ರಾಜಕೀಯ, ಸಾಮಾಜಿಕ, ಆರ್ಥಿಕ ಸ್ಥಿತಿ ಬೇರೆಯಾಗಿದೆ. ಆದ್ದರಿಂದ ಅವರ ಕೃತಿ ವಿಶಿಷ್ಟತೆ ಹೊಂದಿದೆ. ಪ್ರವಾಹದ ಎದುರು ನಿಲ್ಲುವ ಕವಿಗಳು ಮಾತ್ರ ನೆನಪಿನಲ್ಲಿ ಇರುತ್ತಾರೆ. ಅನುಭವವಿದ್ದರೆ ಕವನ ತುಂಬಾ ಸುಲಭವಾಗುತ್ತದೆ ಎಂದು ಅವರು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ, “ಕವಿತೆ ಬರೆಯುವುದು ಬಲು ಸುಲಭ. ಇದಕ್ಕೆ ಸೂಕ್ಷ್ಮಗ್ರಹಿಕೆ, ಸಹೃದಯತೆ ಜತೆಗೆ ವಿದ್ಯಮಾನಗಳ ಕುರಿತು ಕುತೂಹಲವಿರಬೇಕು. ಇದರ ಮೇಲೆ ನಮ್ಮ ಅಂತರಂಗದಲ್ಲಿ ಮೂಡುವ ಭಾವನೆಗಳಿಗೆ ಅಕ್ಷರ ನೀಡಿದರೆ ಅದು ಕವನವಾಗುತ್ತದೆ” ಎಂದರು. “ಪ್ರಾಸ, ಭಾವ ಪೂರ್ಣವಾಗಿದ್ದರೆ ಅದುವೇ ಕಾವ್ಯ. ಭಾವನಾತ್ಮಕವಾಗಿ ನಮ್ಮನ್ನು ಹಿಂದಕ್ಕೆ ಕರೆದೊಯ್ಯುವ ಶಕ್ತಿ ಕಾವ್ಯಕ್ಕಿದೆ. ನಾವು ಹಿಂದೆ ಕೇಳಿದ ಪದ್ಯಗಳನ್ನು ಮತ್ತೆ ಕೇಳಿದಾಗ ನಮ್ಮ ಹಿಂದಿನ ದಿನಗಳು ನೆನಪಾಗುತ್ತವೆ” ಎಂದರು. ಕನ್ನಡ ಅಧ್ಯಾಪಕರಾದ ಡಾ. ದಿವಾಕರ ಕೊಕ್ಕಡ, ಡಾ ಎಂ.ಪಿ. ಶ್ರೀನಾಥ್, ಡಾ. ರಾಜಶೇಖರ್, ಭವ್ಯಶ್ರೀ, ತೇಜಸ್ವಿ ಕಾರ್ಯಕ್ರಮ ಸಂಯೋಜಕ ಡಾ. ನಾಗಣ್ಣ ಡಿ.ಎ. ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಬೋಜಮ್ಮ ಕೆ. ಎನ್. ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಉಲ್ಲೇಖ ವಂದಿಸಿ, ಹಿಮಾಲಿ ಎಂ. ಪಿ. ಕಾರ್ಯಕ್ರಮ ನಿರೂಪಿಸಿದರು.