ಉಜಿರೆ: ಶ್ರೀ ಧ.ಮಂ. ಕಾಲೇಜಿನಲ್ಲಿ ‘ಸಂಸ್ಕೃತೋತ್ಸವ’
Published Date: 31-Aug-2024 Link-Copied
“ಸಂಸ್ಕೃತವು ಸಾರ್ವಕಾಲಿಕ ಶ್ರೇಷ್ಠ ಭಾಷೆ ಹಾಗೂ ಜ್ಞಾನ ಪರಂಪರೆಯ ಭಾಷೆ. ನಾವು ಭಾಷೆಯನ್ನು ಕಲಿಯುವುದು, ಭಾಷೆಯ ಬಗ್ಗೆ ಕಲಿಯುವುದು ಹಾಗೂ ಭಾಷೆಯ ಮೂಲಕ ಕಲಿಯುವುದು ಇದು ಪ್ರತ್ಯೇಕ ಆಯಾಮಗಳುಳ್ಳ ವಿಷಯವಾಗಿದೆ. ಇದನ್ನು ಅರಿತರೆ ಭಾಷೆಯ ಬಗ್ಗೆ ವಿಶಾಲ ವ್ಯಾಪ್ತಿಯಲ್ಲಿ ಅರಿಯಬಹುದು” ಎಂದು ಬೆಳಾಲಿನ ಎಸ್.ಡಿ.ಎಂ. ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಚೊಕ್ಕಾಡಿ ಅಭಿಪ್ರಾಯಪಟ್ಟರು. ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ ಸಂಸ್ಕೃತ ವಿಭಾಗದ ವತಿಯಿಂದ ಆ. 30ರಂದು ಆಯೋಜಿಸಿದ್ದ ‘ಸಂಸ್ಕೃತೋತ್ಸವ’ ಉದ್ಘಾಟಿಸಿ ಅವರು ಮಾತನಾಡಿದರು. "ಭಾಷೆಯ ಮೂಲಕ ಹಲವು ವಿಚಾರಗಳನ್ನು ನಾವು ತಿಳಿದುಕೊಳ್ಳುತ್ತೇವೆ. ಅಷ್ಟೇ ಅಲ್ಲದೆ ಇತ್ತೀಚಿಗೆ ವಿದೇಶಿಗರು ಕೂಡ ಸಂಸ್ಕೃತ ಭಾಷೆಯನ್ನು ಕಲಿಯುತ್ತಿದ್ದಾರೆ. ಸಂಸ್ಕೃತ ಎಲ್ಲಾ ಭಾಷೆಗಳಿಗೆ ಪ್ರೇರಣೆ ಹಾಗೂ ಪೋಷಣೆಯನ್ನು ನೀಡಿದೆ. ಶಿಕ್ಷಣದಲ್ಲಿ ಜ್ಞಾನ ಮತ್ತು ವೃತ್ತಿಯ ನಡುವೆ ಭಾಷೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ” ಎಂದು ಅವರು ಹೇಳಿದರು. “ಸಂಸ್ಕೃತ ಭಾಷೆಯ ಮೂಲಕ ನಮ್ಮ ಪ್ರಾಚೀನ ಪರಂಪರೆ ಹಾಗೂ ಸೊಗಡನ್ನು ಪಸರಿಸಬೇಕಾಗಿರುವುದು ವಿದ್ಯಾರ್ಥಿಗಳ ಜವಾಬ್ದಾರಿ" ಎಂದು ಕಿವಿಮಾತು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಬಿ. ಗಣೇಶ್ ನಾಯಕ್ ಮಾತನಾಡಿ, “ಭಾಷೆಗಳು ನಮ್ಮಲ್ಲಿರುವ ಆಲೋಚನೆಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಲು ಸಹಕಾರಿಯಾಗುತ್ತವೆ. ಸಂಸ್ಕೃತ ಭಾಷೆಯು ವ್ಯಾವಹಾರಿಕ ಹಾಗೂ ನೈತಿಕ ಬದುಕಿಗೆ ಸಹಕಾರಿಯಾಗುತ್ತದೆ. ಸಂಸ್ಕೃತ ಭಾಷೆಯ ಮೂಲಕ ತಾಂತ್ರಿಕ ದೃಷ್ಟಿಕೋನ, ಶಬ್ದ ಭಂಡಾರ, ಭಾರತೀಯ ಸಂಸ್ಕೃತಿ, ಪರಂಪರೆ, ಐತಿಹಾಸಿಕ ನೆಲೆಯ ಬಗ್ಗೆ ತಿಳಿದುಕೊಳ್ಳಬಹುದು” ಎಂದರು. ವಿಭಾಗದ 'ಸುಬೋಧಿನೀ' ಭಿತ್ತಿಪತ್ರಿಕೆ ಬಿಡುಗಡೆಗೊಳಿಸಲಾಯಿತು. ಸಂಸ್ಕೃತ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಅತಿಥಿಯನ್ನು ಸನ್ಮಾನಿಸಲಾಯಿತು. ಕಾಲೇಜಿನ ವಿಜ್ಞಾನ ನಿಕಾಯದ ಡೀನ್ ಸವಿತಾ ಕುಮಾರಿ ಹಾಗೂ ಸಂಸ್ಕೃತ ವಿಭಾಗದ ಸಹ ಪ್ರಾಧ್ಯಾಪಕ ಶ್ರೇಯಸ್ ಪಾಳಂದೆ ಉಪಸ್ಥಿತರಿದ್ದರು. ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ. ಶ್ರೀಧರ್ ಭಟ್ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಸುಮುಖ್ ಪ್ರಾರ್ಥಿಸಿ, ವಂಶಿ ಆರ್ ಭಟ್ ವಂದನಾರ್ಪಣೆಗೈದರು. ವಿದ್ಯಾರ್ಥಿನಿಯರಾದ ಸಿಂಚನ ಪಾಳಂದೆ ಹಾಗೂ ಸಿಂಚನ ಜೋಶಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ‘ಸಂಸ್ಕೃತ ಪ್ರತಿಭಾ’ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.