ಮೂಡುಬಿದಿರೆ: ‘ಸಿಎ’ ಕೌನ್ಸೆಲಿಂಗ್ ಪ್ರೋಗ್ರಾಮ್
Published Date: 31-Aug-2024 Link-Copied
ಆಳ್ವಾಸ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ಸಂಘ ಹಾಗೂ ಐ.ಸಿ.ಎ.ಐ ಮಂಗಳೂರು ಚಾಪ್ಟರ್ ವತಿಯಿಂದ ಆಳ್ವಾಸ್ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಸಿಎ ವೃತ್ತಿಯ ಕುರಿತು ಮಾಹಿತಿ ಕಾರ‍್ಯಕ್ರಮ ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ- ಇತ್ತೀಚಿನ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ವೈದ್ಯಕೀಯ ಇಲ್ಲವೇ ತಾಂತ್ರಿಕ ಪದವಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ, ಆದರೆ ವಾಣಿಜ್ಯ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ನೂರಾರು ದಾರಿಗಳಿವೆ. ಅದನ್ನು ಅವರು ಅರಿತುಕೊಳ್ಳಬೇಕು ಎಂದರು. ಸಿಎಯನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ಬೇಕಾದ ಪೂರ್ವ ತಯಾರಿಯನ್ನು ಆರಂಭಿಕ ಹಂತದಲ್ಲೇ ಮಾಡಿಕೊಳ್ಳಬೇಕು. ಇದಕ್ಕೆ ಬೇಕಾದ ಎಲ್ಲಾ ಅವಕಾಶಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪದವಿ ಪೂರ್ವ ಹಂತದಲ್ಲಿ ಕಲ್ಪಿಸಲಾಗುವುದು ಎಂದು ತಿಳಿಸಿದರು. ಸಿಎ ಕಾರ್ತಿಕೇಯ ಶೆಣೈ ಮಾತನಾಡಿ ಸಿಎ ಆರಂಭಿಕ ಹಂತದಿಂದ ಹಿಡಿದು ಕೊನೆಯ ತನಕ ಎಲ್ಲಾ ಪರೀಕ್ಷೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು. ಸಿಎ ಗೌತಮ್ ನಾಯಕ್ ಮಾತನಾಡಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರ ಉದ್ದೇಶಗಳ ಬಗ್ಗೆ ವಿವರಿಸಿದರು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಮೊಹಮ್ಮದ್ ಸದಾಕತ್ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಸಿಎ ಡೇನಿಯಲ್ ಪಿರೇರಾ ಹಾಗೂ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ ಎಂ.ಡಿ ಇದ್ದರು. ವಾಣಿಜ್ಯ ಸಂಘದ ಸಂಯೋಜಕಿ ರಶ್ಮಿನ್ ತನ್ವೀರ್ ಕಾರ್ಯಕ್ರಮ ನಿರೂಪಿಸಿದರು.