ರೋಟರಿಯಿಂದ ರಕ್ಷಾಬಂಧನ ಸಂಭ್ರಮಾಚರಣೆ
Published Date: 28-Aug-2024 Link-Copied
ಉಜಿರೆ : ಸಂಕುಚಿತವಾಗುತ್ತಿರುವ ಮಾನವ ಸಂಬಂಧಗಳಿಗೆ ಹಬ್ಬ- ಆಚರಣೆಗಳ ಮಹತ್ವವನ್ನು ಅರಿತುಕೊಳ್ಳಬೇಕು. ರಕ್ಷಾಬಂಧನದಂತ ಆಚರಣೆಯಿಂದ ಸಮಾಜದಲ್ಲಿ ಒಬ್ಬರನೊಬ್ಬರು ಸದಾ ಗೌರವಿಸುವ ಮತ್ತು ಪ್ರೀತಿಸುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳೋಣ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ದಿವ್ಯ ಕುಮಾರಿ ಅಭಿಪ್ರಾಯಪಟ್ಟರು. ಇವರು ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ರೋಟರಿ ಸೇವಾ ಭವನ ಕಾಶಿಬೆಟ್ಟು, ರೊ.ಕೆ ರಮಾನಂದ ಸಾಲಿಯಾನ್ ಸಭಾಂಗಣದಲ್ಲಿ ನಡೆದ ರಕ್ಷಾ ಬಂಧನ ಸಂಭ್ರಮಾಚರಣೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಪುರಾಣ ಹಾಗೂ ಇತಿಹಾಸಗಳಲ್ಲೂ ರಕ್ಷಾ ಬಂಧನಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಹಬ್ಬ ಹರಿದಿನಗಳು ತಾಂತ್ರಿಕಗೊಳ್ಳುತ್ತಿರುವ ವರ್ತಮಾನದಲ್ಲಿ ಹಬ್ಬಗಳ ವೈಜ್ಞಾನಿಕ ಮತ್ತು ಧಾರ್ಮಿಕ ಹಿನ್ನೆಲೆಯನ್ನು ಅರ್ಥ ಮಾಡಿಕೊಳ್ಳಬೇಕು ಎಂದರು. ರೋಟರಿಯ ಸೇವಾ ಮನೋಭಾವದ ಕಾರ್ಯಕ್ರಮಗಳನ್ನು ಉಲ್ಲೇಖಿಸಿ ಕಾರ್ಯಕ್ಷಮತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮಾ ಮಾತನಾಡಿ, ರಕ್ಷಾ ಬಂಧನ ರಕ್ಷೆ ಮತ್ತು ಪ್ರೀತಿಯ ಸಂಕೇತ. ಕೈ ಕಟ್ಟುವ ಒಂದಗಲದ ದಾರಕ್ಕೆ ತನ್ನದೇ ಆದ ಶಕ್ತಿ ಇದೆ ಎಂದರು. ದೀಪ ಬೆಳಗುವ ಮೂಲಕ ಗೌರವಿಸಿ ರಕ್ಷಾಬಂಧನವನ್ನು ಕಟ್ಟಿ ಸಿಹಿ ಹಂಚಲಾಯಿತು. ಕಾರ್ಯಕ್ರಮದಲ್ಲಿ ಎಂ.ಎಲ್.ಸಿ ಪ್ರತಾಪ್ ಸಿಂಹ ನಾಯಕ್, ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ಕುಮಾರ್ ರಾವ್, ರೊಟೆರಿಯನ್ ಸೋನಿಯಾ ವರ್ಮಾ ಸೇರಿದಂತೆ ಇತರೆ ಸದಸ್ಯರು ಉಪಸ್ಥಿತರಿದ್ದರು.