ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ ‘ಎಸ್ ಡಿ ಎಂ ನೆನಪಿನಂಗಳ ವಾರ್ಷಿಕ ಪುನರ್ಮಿಲನ 2024’
Published Date: 24-Aug-2024 Link-Copied
ಉಜಿರೆ, ಆ.24: ಋಣಭಾರ ಕಡಿಮೆಯಾಗದ ಹೊರತು ಜೀವನ ಸಾರ್ಥಕ್ಯ ಕಾಣಲಾರದು. ಸಮಾಜಕ್ಕೆ ಕೊಡುಗೆ ನೀಡುವ ಮೂಲಕ ಋಣಭಾರ ಕಡಿಮೆ ಮಾಡಿಕೊಳ್ಳಬಹುದು ಎಂದು ಉಜಿರೆ ಎಸ್ ಡಿ ಎಂ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಂಘದ ಬೆಂಗಳೂರು ಘಟಕದ ಅಧ್ಯಕ್ಷ ಎನ್. ಸತ್ಯನಾರಾಯಣ ಹೊಳ್ಳ ಹೇಳಿದರು. ಉಜಿರೆ ಶ್ರೀ ಧ. ಮಂ. ಕಾಲೇಜಿನಲ್ಲಿ ಆ. 24ರಂದು ಹಿರಿಯ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಹಿರಿಯ ವಿದ್ಯಾರ್ಥಿಗಳ ವಾರ್ಷಿಕ ಪುನರ್ಮಿಲನ (ಎಸ್.ಡಿ.ಎಂ. ನೆನಪಿನಂಗಳ ವಾರ್ಷಿಕ ಪುನರ್ಮಿಲನ 2024) ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ವ್ಯಕ್ತಿಗೆ ವಿದ್ಯಾಋಣ, ಅನ್ನಋಣ ಇತ್ಯಾದಿ ಋಣಗಳಿರುತ್ತವೆ. ಅದು ದೊಡ್ಡ ಭಾರವಾಗಿದ್ದು, ಸಮಾಜಕ್ಕೆ ಮರಳಿ ಕೊಡುಗೆ ನೀಡುವ ಮೂಲಕ ಋಣದ ಹೊರೆಯನ್ನು ಕಡಿಮೆ ಮಾಡಿಕೊಳ್ಳಬಹುದು. ನೈತಿಕ ಬೆಂಬಲ ನೀಡುವುದು, ಧನಸಹಾಯ ನೀಡುವುದು, ಸಂಘ ಸಂಸ್ಥೆಗಳ ಮೂಲಕ ನೆರವು ನೀಡುವುದು ಇತ್ಯಾದಿ ಕ್ರಮಗಳ ಮೂಲಕ ಋಣಭಾರ ಇಳಿಸಿಕೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟರು. “ಹಿರಿಯ ವಿದ್ಯಾರ್ಥಿ ಸಂಘವು ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಉದ್ಯೋಗ ಪಡೆಯುವಲ್ಲಿ ನೆರವು ನೀಡುತ್ತಿದ್ದು, ಆ ಮೂಲಕ ವಿದ್ಯಾಸಂಸ್ಥೆಯ ಋಣಭಾರ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ” ಎಂದರು. ಧನಾತ್ಮಕ ಚಿಂತನೆಯೊಂದಿಗೆ, ಇಚ್ಚಾಶಕ್ತಿ ಹೊಂದಿ ಜೀವನದಲ್ಲಿ ಅಭಿವೃದ್ಧಿ ಕಾಣಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಮುಖ್ಯ ಅತಿಥಿ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಮಾತನಾಡಿ, “ಗ್ರಾಮೀಣ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಧರ್ಮಸ್ಥಳದ ಅಂದಿನ ಧರ್ಮಾಧಿಕಾರಿ ರತ್ನವರ್ಮ ಹೆಗ್ಗಡೆ ಅವರಿಂದ ಪ್ರಾರಂಭವಾದ ಉಜಿರೆ ಎಸ್.ಡಿ.ಎಂ. ಕಾಲೇಜು 58 ವರ್ಷಗಳಿಂದ ಸಹಸ್ರಾರು ವಿದ್ಯಾರ್ಥಿಗಳಿಗೆ ಜೀವನೋಪಾಯಕ್ಕೆ ಮಾತ್ರವಲ್ಲದೆ, ಉತ್ತಮ ಬದುಕಿಗೆ ಹೇತುವಾಗಿದೆ. ವೀರೇಂದ್ರ ಹೆಗ್ಗಡೆ ಅವರ ಪೋಷಣೆಯಲ್ಲಿ ಸಂಸ್ಥೆ ಇನ್ನಷ್ಟು ಬೆಳೆದಿದೆ. ಸಂಸ್ಥೆಯಿಂದ ಔದ್ಯೋಗಿಕ, ವೈಯಕ್ತಿಕ ಕೊಡುಗೆ ಪಡೆದಿರುವ ನಾವು ಪ್ರಸ್ತುತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ರೀತಿಯಲ್ಲಿ ಕೊಡುಗೆ ನೀಡುವುದು ನಮ್ಮ ಜವಾಬ್ದಾರಿ. ಹಿರಿಯ ವಿದ್ಯಾರ್ಥಿಗಳಿಂದ ಸಂಸ್ಥೆಗೆ ಶ್ರೇಷ್ಠತೆ ಬರುತ್ತದೆ. ಅವರಿಂದ ಸಂಸ್ಥೆಗೆ ಬ್ರ್ಯಾಂಡ್ ವ್ಯಾಲ್ಯೂ ಲಭಿಸಿದೆ. ಸಂಸ್ಥೆಯ ಷಷ್ಟ್ಯಬ್ದಿ ಕೂಡ ಉತ್ತಮ ರೀತಿಯಲ್ಲಿ ಆಚರಿಸುವಂತಾಗಲಿ” ಎಂದರು. ಇನ್ನೋರ್ವ ಅತಿಥಿ, ಎಸ್.ಡಿ.ಎಂ. ಕಾಲೇಜು ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಮಾತನಾಡಿ, "ಎಸ್.ಡಿ.ಎಂ. ವಿದ್ಯಾ ಸಂಸ್ಥೆ ರಾಷ್ಟ್ರ ಮಟ್ಟದಲ್ಲಿ ಗುರುತಿಸಲ್ಪಟ್ಟ ಗ್ರಾಮೀಣ ಭಾಗದ ವಿದ್ಯಾಸಂಸ್ಥೆ. ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಯಲ್ಲಿ ನಮ್ಮ ಕಾಲೇಜು ಶ್ರೇಷ್ಠ ಸಾಧನೆಗಳನ್ನು ಮಾಡಿದೆ. ಇಂದಿನ ಕಾರ್ಯಕ್ರಮ ಮತ್ತೊಮ್ಮೆ ಹಿರಿಯ ವಿದ್ಯಾರ್ಥಿಗಳ ಮಿಲನಕ್ಕೆ ಕಾರಣವಾಗಿದೆ. ಹಿರಿಯ ವಿದ್ಯಾರ್ಥಿಗಳು ಅತ್ಯಂತ ಸಂವೇದನಾಶೀಲರಾಗಿ ಇಂದಿನ ವಿದ್ಯಾರ್ಥಿಗಳಿಗೆ ಅನೇಕ ರೀತಿಯಲ್ಲಿ ಸಹಕಾರ ನೀಡುತ್ತಿದ್ದಾರೆ. ಮುಂದೆಯೂ ಕೂಡ ಹಿರಿಯ ವಿದ್ಯಾರ್ಥಿಗಳ ಮಾರ್ಗದರ್ಶನ ಹೀಗೇ ಇರಲಿ" ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪೀತಾಂಬರ ಹೆರಾಜೆ ಮಾತನಾಡಿ, "ಇಂದು ವಿವಿಧ ಹುದ್ದೆಗಳಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಎಸ್.ಡಿ.ಎಂ. ವಿದ್ಯಾ ಸಂಸ್ಥೆ ವಿದ್ಯಾರ್ಥಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ರತ್ನವರ್ಮ ಹೆಗ್ಗಡೆ ಅವರ ಕನಸು ಸಾಕಾರಗೊಂಡಿದೆ. ಕಾಲೇಜಿನ ಬೆಳವಣಿಗಾಗಿ ಹಿರಿಯ ವಿದ್ಯಾರ್ಥಿ ಸಂಘ ಸದಾ ನಿಲ್ಲುತ್ತದೆ. ಪ್ರತಿ ತಿಂಗಳ ನೆನಪಿನಂಗಳ ಕಾರ್ಯಕ್ರಮದ ಆಯೋಜನೆ ಹಾಗೂ ವಿವಿಧ ಚಟುವಟಿಕೆಗಳ ಆಯೋಜನೆ ಮಾಡುವುದರ ಮೂಲಕ ನಮ್ಮ ಮಾತೃ ಸಂಸ್ಥೆ ಎಸ್.ಡಿ.ಎಂ. ಕಾಲೇಜಿನ ಋಣವನ್ನು ಭರಿಸಲು ಸಾಧ್ಯವಾಗಿದೆ. ಸಂಘಟನೆಗೆ ಅಂದಿನ ಪ್ರಾಂಶುಪಾಲ ಡಾ. ಬಿ. ಯಶೋವರ್ಮ ಭದ್ರ ತಳಪಾಯ ಹಾಕಿದ್ದಾರೆ. ಮಾರ್ಗದರ್ಶನ ನೀಡಿದ್ದಾರೆ" ಎಂದರು. ಕಾಲೇಜಿನ ವಿದ್ಯಾರ್ಥಿಗಳ ಮಧ್ಯಾಹ್ನದ ಊಟಕ್ಕೆ ಸಂಘದ ವತಿಯಿಂದ 5 ಲಕ್ಷ ರೂ. ಚೆಕ್ ಹಸ್ತಾಂತರಿಸಲಾಯಿತು. ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಕಾಲೇಜಿನ ವಿದ್ಯಾರ್ಥಿಗಳಾದ ಸುಶಾಂತ್ ಶೆಟ್ಟಿ ಮತ್ತು ಸಿರಿ ಶರ್ಮ ಅವರನ್ನು ಸನ್ಮಾನಿಸಲಾಯಿತು. ಪ್ರಾಸ್ತಾವಿಕ ನುಡಿಗಳನ್ನಾಡಿದ ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಬಿ.ಕೆ. ಧನಂಜಯ ರಾವ್, "ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳಿಗೆ ಎಸ್.ಡಿ.ಎಂ. ವಿದ್ಯಾಸಂಸ್ಥೆ ವರದಾನವಾಗಿದೆ. ಇಂತಹ ವಿದ್ಯಾಸಂಸ್ಥೆಯ ಜೊತೆ ಒಡನಾಟವನ್ನು ಹಾಗೆಯೇ ಉಳಿಸಿಕೊಳ್ಳಬೇಕು, ಆಗಾಗ ಕಾಲೇಜಿಗೆ ಭೇಟಿ ನೀಡಿ ನಮ್ಮ ಸಂಬಂಧವನ್ನು ನೆನಪಿಸಿಕೊಳ್ಳಬೇಕು ಎನ್ನುವುದೇ ಸಂಘದ ಉದ್ದೇಶ” ಎಂದರು. ಎಸ್ ಡಿ ಎಂ ಹಿರಿಯ ವಿದ್ಯಾರ್ಥಿಗಳ ಸಂಘವು ಪ್ರಸ್ತುತ ಅತ್ಯಂತ ರಚನಾತ್ಮಕ ಚಟುವಟಿಕೆಗಳನ್ನು ನಡೆಸುತ್ತಿದೆ. ಕಾಲೇಜಿನಲ್ಲಿ ಪ್ರತಿ ತಿಂಗಳು ನಿರಂತರ ಎಸ್.ಡಿ.ಎಂ. ನೆನಪಿನಂಗಳ (ಹಿರಿಯ ವಿದ್ಯಾರ್ಥಿಯೊಂದಿಗೆ ಸಂವಾದ) ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಈವರೆಗೆ 14 ಕಾರ್ಯಕ್ರಮ ನಡೆದಿದ್ದು ಒಟ್ಟು 14 ಹಿರಿಯ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಇವರು ತಲಾ 5 ಸಾವಿರದಂತೆ ಒಟ್ಟು 75 ಸಾವಿರ ರೂ. ವಿದ್ಯಾರ್ಥಿ ವೇತನವನ್ನು ಅರ್ಹ 15 ಮಂದಿ ವಿದ್ಯಾರ್ಥಿಗಳಿಗೆ ವಿತರಿಸಿ ಉದಾರತೆ ತೋರಿದ್ದಾರೆ ಎಂದರು. ಸಂಘದ ಉಪಾಧ್ಯಕ್ಷ ಗುರುನಾಥ ಪ್ರಭು, ಕಾಲೇಜಿನ ಬೋಧಕ- ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು, ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿ ಹಾಗೂ ಸ್ಥಳೀಯ ಎಸ್.ಡಿ.ಎಂ. ಸಂಸ್ಥೆಗಳ ಸಿಬ್ಬಂದಿ ಉಪಸ್ಥಿತರಿದ್ದರು. ವೈದೇಹಿ ಮತ್ತು ಬಳಗದವರು ಪ್ರಾರ್ಥಿಸಿದರು. ಸಂಘದ ಕಾರ್ಯಕ್ರಮ ಸಂಯೋಜಕ ಡಾ. ಎಂ.ಪಿ. ಶ್ರೀನಾಥ್ ವಂದಿಸಿದರು. ಡಾ. ದಿವಾಕರ ಕೆ. ಮತ್ತು ದಿವ್ಯಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು. ಉಡುಪಿಯ ಕಲಾಮಯಂ ತಂಡದವರಿಂದ ವಿಶೇಷ ರಸಮಂಜರಿ ಕಾರ್ಯಕ್ರಮ ನಡೆಯಿತು.