ಧರ್ಮಸ್ಥಳದಲ್ಲಿ ವ್ಯಸನ ಮುಕ್ತರ ನವಜೀವನೋತ್ಸವ


Logo

Published Date: 17-Aug-2024 Link-Copied

ಉಜಿರೆ: ಅನ್ನದಾಸೋಹ, ಅರಿವುದಾಸೋಹ ಮತ್ತು ಅಕ್ಷರದಾಸೋಹ ಎಂಬ ತ್ರಿವಿಧ ದಾಸೋಹದೊಂದಿಗೆ ಮನಪರಿವರ್ತನೆ ಮೂಲಕ ಕ್ರಾಂತಿಕಾರಿ ಸಮಾಜಸುಧಾರಣೆಯೊಂದಿಗೆ ಲೋಕಕಲ್ಯಾಣ ಕಾರ್ಯಗಳನ್ನು ನಿರಂತರ ಮಾಡುತ್ತಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗಡೆಯವರು ಸಾಧುಸಂತರಿಗಿಂತಲೂ ಮಿಗಿಲಾಗಿ ಎಲ್ಲರಿಂದಲೂ ದೇವಮಾನವರಾಗಿ ಗೌರವಿಸಲ್ಪಡುತ್ತಾರೆ. ಅವರ ದರ್ಶನದಿಂದ ದೇವರ ದರ್ಶನ ಮಾಡಿದಷ್ಟೇ ಸಂತೋಷ, ಮಾನಸಿಕ ಶಾಂತಿ ಮತ್ತು ನೆಮ್ಮದಿ ಸಿಗುತ್ತದೆ ಎಂದು ತುಮಕೂರಿನ ಕಾರದೇಶ್ವರ ಮಠದ ಕಾರದ ವೀರಬಸವ ಸ್ವಾಮೀಜಿ ಹೇಳಿದರು. ಅವರು ಶನಿವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಂಟಿ ಆಶ್ರಯದಲ್ಲಿ ಆಯೋಜಿಸಿದ ಮದ್ಯವ್ಯಸನ ಶಿಬಿರಗಳಲ್ಲಿ ಭಾಗವಹಿಸಿ ವ್ಯಸನಮುಕ್ತರಾದವರ ಶತದಿನೋತ್ಸವದ ಸಂಭ್ರಮದ ನವಜೀವನೋತ್ಸವ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ಮದ್ಯಪಾನದಂತಹ ವ್ಯಸನಗಳಿಗೆ ಬಿದ್ದವರನ್ನು ಮತ್ತು ಬೀಳುತ್ತಿರುವವರನ್ನು ಎತ್ತಿ ಹಿಡಿಯುವುದೇ ನಿಜವಾದ ಧರ್ಮವಾಗಿದೆ. “ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು” ಎನ್ನುವಂತೆ ಮನೆಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಕಾರ್ಯವಾಗಬೇಕು. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಮಾತಾ-ಪಿತರಂತೆ ಬಹಳ ಪ್ರೀತಿ-ವಿಶ್ವಾಸದಿಂದ ಸಮಾಜದ ಸರ್ವರ ಕಲ್ಯಾಣಕ್ಕಾಗಿ ಮಾಡುತ್ತಿರುವ ಸೇವಾಕಾರ್ಯಗಳು ವಿಶ್ವಮಾನ್ಯವಾಗಿವೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮಹಿಳಾಸಬಲೀಕರಣ, ಕೆರೆಗಳ ಪುನಶ್ಚೇತನ, ಶುದ್ಧ ಕುಡಿಯುವ ನೀರಿನಘಟಕ, ಮನಪರಿವರ್ತನೆ ಮೂಲಕ ಮದ್ಯವರ್ಜನ ಶಿಬಿರಗಳು, ಸ್ವ-ಉದ್ಯೋಗ ತರಬೇತಿ ಇತ್ಯಾದಿ ಸೇವಾ ಕಾರ್ಯಕ್ರಮ ಎಲ್ಲರ ಮುಕ್ತ ಪ್ರಶಂಸೆಗೆ ಪಾತ್ರವಾಗಿವೆ ಎಂದರು. ತುಮಕೂರಿನಲ್ಲಿ ತಮ್ಮ ಮಠದ ಭಕ್ತರಾದ ಚಂದ್ರಶೇಖರ ಎಂಬವರು ಮದ್ಯವ್ಯಸನಿಯಾಗಿದ್ದು ಮದ್ಯವರ್ಜನ ಶಿಬಿರಕ್ಕೆ ಸೇರಿ ವ್ಯಸನಮುಕ್ತರಾಗಿ ಈಗ ಎಂಜಿನಿಯರ್‌ರಾಗಿ ಸ್ವಂತ ಉದ್ಯಮದೊಂದಿಗೆ ಸ್ವಾವಲಂಬಿ ಜೀವನ ನಡೆಸುತ್ತಿರುವುದನ್ನು ಸ್ವಾಮೀಜಿ ಉಲ್ಲೇಖಿಸಿ ಕಾರ್ಯಕರ್ತರ ಸೇವೆಯನ್ನು ಶ್ಲಾಘಿಸಿದರು. ಸಮಾರಂಭವನ್ನು ಉದ್ಘಾಟಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಮದ್ಯವರ್ಜನ ಶಿಬಿರಗಳಲ್ಲಿ ಭಾಗವಹಿಸಿ ವ್ಯಸನಮುಕ್ತರಾದವರು ಮನ, ವಚನ, ಕಾಯದಿಂದ ದೃಢ ಸಂಕಲ್ಪ ಮಾಡಿ ಮುಂದೆ ಸಾರ್ಥಕ ಜೀವನ ನಡೆಸಬೇಕು. ಅಂತರಂಗದಲ್ಲಿಯೂ ಬಹಿರಂಗದಲ್ಲಿಯೂ ಪರಿಶುದ್ಧರಾಗಿ ದೇವರ ದರ್ಶನ ಮಾಡಿ ಅನುಗ್ರಹ ಪಡೆದು ಮುಂದೆ ಸುಖ-ಶಾಂತಿ, ನೆಮ್ಮದಿಯ ಕೌಟುಂಬಿಕ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು. ವ್ಯಸನಮುಕ್ತರ ಭಾಗ್ಯದ ಬಾಗಿಲು ತೆರೆದಿದೆ ಎಂದು ಅವರಿಗೆ ಉಜ್ವಲ ಭವಿಷ್ಯವನ್ನು ಹೆಗ್ಗಡೆಯವರು ಹಾರೈಸಿದರು. ಮಾಜಿ ವಿಧಾನಪರಿಷತ್ ಸದಸ್ಯ ಕೆ ಹರೀಶ್ ಕುಮಾರ್ ಶುಭಾಶಂಸನೆ ಮಾಡಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಕನಸು ಕಂಡ ಗ್ರಾಮ ರಾಜ್ಯದ ಮೂಲಕ ರಾಮ ರಾಜ್ಯ ಹಾಗೂ ವ್ಯಸನಮುಕ್ತ ಭಾರತವನ್ನು ಹೆಗ್ಗಡೆಯವರು ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಶೇ. ನೂರರಷ್ಟು ನನಸಾಗುವಂತೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ಶ ತದಿನೋತ್ಸವವನ್ನು ಆಚರಿಸಿದ ವ್ಯಸನಮುಕ್ತರು ಜೀವನಪರ್ಯಂತ ಆತ್ಮಸಾಕ್ಷಿಗೆ ಅನುಗುಣವಾಗಿ ಉತ್ತಮ ಜೀವನ ನಡೆಸಬೇಕು. ತಮಗೆ ಯಾವುದೇ ಸಮಸ್ಯೆ ಬಂದರೂ ಯೋಜನಾಧಿಕಾರಿ ಅಥವಾ ಶಿಬಿರಾಧಿಕಾರಿಗಳನ್ನು ಸಂಪರ್ಕಿಸಿದಲ್ಲಿ ಸೂಕ್ತ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು. ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಯ ಡಾ. ಅಭಿಷೇಕ್ ಚತುರ್ವೇದಿ ಮತ್ತು ದೇರಳೆಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಡಾ. ಮೇಖಲಾ ದಿವಾಕರ್ ಅವರು ಮದ್ಯವರ್ಜನ ಶಿಬಿರಗಳ ಬಗ್ಗೆ ರಚಿಸಿದ ಸಂಶೋಧನಾ ಪ್ರಬಂಧಗಳನ್ನು ಡಿ. ವೀರೇಂದ್ರ ಹೆಗಡೆಯವರಿಗೆ ಅರ್ಪಿಸಿದರು. ಮಂಗಳೂರಿನ ಡಾ. ಶ್ರೀನಿವಾಸ ಭಟ್, ಎಸ್. ಡಿ. ಸಂಪತ್ ಸಾಮ್ರಾಜ್ಯ, ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಪ್ರಾದೇಶಿಕ ಅಧಿಕಾರಿ ದುಗ್ಗೇಗೌಡ, ಜಿಲ್ಲಾಧ್ಯಕ್ಷ ಪದ್ಮನಾಭ ಭಟ್, ಸ್ಥಾಪಕ ಅಧ್ಯಕ್ಷ ವಸಂತ ಸಾಲಿಯಾನ್, ಕಾಸಿಂ ಮಲ್ಲಿಗೆಮನೆ ಮೊದಲಾದವರು ಉಪಸ್ಥಿತರಿದ್ದರು. ಪ್ರಾಸ್ತಾವಿಕ ಮಾತುಗಳೊಂದಿಗೆ ವಿವೇಕ್ ವಿ. ಪಾÊಸ್, ಸ್ವಾಗತಿಸಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ರಾಜಣ್ಣ ಕೊರವಿ ಧನ್ಯವಾದವಿತ್ತರು. ಯೋಜನಾಧಿಕಾರಿಗಳಾದ ನಾಗೇಶ್ ಮತ್ತು ಭಾಸ್ಕರ್, ಎನ್. ಕಾರ್ಯಕ್ರಮ ನಿರ್ವಹಿಸಿದರು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img