ಕಾರ್ಗಿಲ್ ವಿಜಯ ದಿವಸ್ ಬೆಳ್ಳಿಹಬ್ಬ ಆಚರಣೆ; ಎನ್ನೆಸ್ಸೆಸ್ ಸರಣಿ ಕಾರ್ಯಕ್ರಮಗಳ ಸಮಾರೋಪ


Logo

Published Date: 08-Aug-2024 Link-Copied

ಉಜಿರೆ, ಆ.7: ಕಾರ್ಗಿಲ್ ವಿಜಯ ದಿನಾಚರಣೆಯು ದೀಪಾವಳಿ ಹಬ್ಬದಂತೆ ಸಮಸ್ತ ದೇಶವಾಸಿಗಳಿಂದ ಆಚರಿಸಲ್ಪಡುತ್ತಿರುವುದು ಸಂತಸದ ಸಂಗತಿ ಎಂದು ಕಾರ್ಗಿಲ್ ಯುದ್ಧ ಸೇನಾನಿ ಕ್ಯಾಪ್ಟನ್ ನವೀನ್ ನಾಗಪ್ಪ ಹೇಳಿದರು. ಉಜಿರೆಯ ಶ್ರೀ ಧ. ಮಂ. ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕವು ಇಂದು (ಆ.7) ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ್ ಬೆಳ್ಳಿಹಬ್ಬ ಆಚರಣೆ ಹಾಗೂ ಕಾರ್ಗಿಲ್ ವಿಜಯ ದಿವಸ್ ಸರಣಿ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿದ್ದರು. ಆರಂಭದಲ್ಲಿ ಕಾರ್ಗಿಲ್ ವಿಜಯ ದಿನಾಚರಣೆಯು ಸೈನ್ಯದಿಂದ ಮಾತ್ರ ಆಚರಿಸಲ್ಪಡುತ್ತಿತ್ತು. ಕ್ರಮೇಣ ನಾಗರಿಕರು ಆಚರಿಸಲು ಆರಂಭಿಸಿದರು. ಪ್ರಸ್ತುತ ದೇಶಾದ್ಯಂತ ವ್ಯಾಪಕವಾಗಿ ಆಚರಿಸಲ್ಪಡುತ್ತಿದೆ ಎಂದು ಅವರು ಹೇಳಿದರು. “ದೇಶದ ಪ್ರಾಂತೀಯ ಸಮಗ್ರತೆಗಾಗಿ ನಾವು ಹೋರಾಟ ಮಾಡಿದೆವು. ಕಿರಿಯ ವಯಸ್ಸಿನ ಸೈನಿಕರು ಪ್ರಾಣತ್ಯಾಗ ಮಾಡಿದರು. ಇಲ್ಲಿಯವರೆಗೆ ನಾವು ದೇಶವನ್ನು ಮುಂದೆ ತೆಗೆದುಕೊಂಡು ಬಂದಿದ್ದೇವೆ, ಇನ್ನು ಮುಂದೆ ದೇಶವನ್ನು ಮುನ್ನಡೆಸಬೇಕಾದವರು ನೀವು. ಈಗ ನಿಮ್ಮ ಸರದಿ” ಎಂದರು. “ದೇಶವು ಸುರಕ್ಷಿತ ಕೈಗಳಲ್ಲಿದೆ” ಎಂದು ಅವರು ಸಮಾಧಾನ ವ್ಯಕ್ತಪಡಿಸಿದರು. “ಈ ಮಣ್ಣಿನಲ್ಲಿ ಹುಟ್ಟಲು ನಾನು ಅದೃಷ್ಟ ಮಾಡಿದ್ದೇನೆ. ಹಲವು ಜನರಿಗೆ ಹಲವು ಪ್ರಯತ್ನಗಳ ಬಳಿಕವೂ ಸೈನ್ಯ ಸೇರಲು ಸಾಧ್ಯವಾಗುವುದಿಲ್ಲ. ಆದರೆ ನಾನು ಪ್ರಥಮ ಪ್ರಯತ್ನದಲ್ಲಿಯೇ ಯಶಸ್ವಿಯಾದೆ. ಯುದ್ಧದಲ್ಲಿ ಪಾಲ್ಗೊಳ್ಳುವ ಅವಕಾಶವೂ ಸಿಕ್ಕಿತು. ಭಾರತಾಂಬೆಗೆ ಅಳಿಲುಸೇವೆ ಸಲ್ಲಿಸುವ ಅವಕಾಶ ನನಗೆ ಸಿಕ್ಕಿತು. ದೇಶಕ್ಕೆ ಈಗ ಸೇವೆ ಮಾಡದಿದ್ದಲ್ಲಿ ಇನ್ನು ಯಾವಾಗ? ನಾವಲ್ಲದೆ ಇನ್ನಾರು?” ಎಂದು ಅವರು ಹೇಳಿದರು. ಅತಿಥಿ, ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಮಾತನಾಡಿದರು. ದೇಶಕ್ಕೆ ಸೈನ್ಯ ಮತ್ತು ಸೈನಿಕರು ಎಷ್ಟು ಅನಿವಾರ್ಯ ಎಂಬುವುದು ಎಲ್ಲರಿಗೂ ಗೊತ್ತು. ನಾವು ರಾತ್ರಿ ನೆಮ್ಮಯಿಂದ ಮಲಗಿ ನಿದ್ದೆ ಹೋಗುತ್ತೇವೆ ಎಂದರೆ ಅದಕ್ಕೆ ಕಾರಣ ನಮ್ಮ ಹೆಮ್ಮೆಯ ಯೋಧರು. ದೇಶವನ್ನು ಕಾಪಾಡುವವರು ಯೋಧರು. ಆದ್ದರಿಂದ ಸೈನ್ಯದ ವ್ಯವಸ್ಥೆ ದೇಶಕ್ಕೆ ಅತೀ ಅಗತ್ಯ ಎಂದರು. ಮಾತೃಋಣ, ಪಿತೃಋಣ, ಗುರುಋಣಕ್ಕಿಂತಲೂ ಸೈನ್ಯ ಋಣ ಮಿಗಿಲು. ನಮ್ಮ ನಮ್ಮ ಕರ್ತವ್ಯದಲ್ಲಿ ಸೈನಿಕರ ಬದ್ಧತೆ, ಸೇವಾ ಮನೋಭಾವ ಅಳವಡಿಸಿಕೊಳ್ಳುವ ಮೂಲಕ ಆ ಋಣ ತೀರಿಸಬಹುದು. ಆ ನಿಟ್ಟಿನಲ್ಲಿ ಈ ಕಾರ್ಯಕ್ರಮ ಪೂರಕ ಎಂದು ಅವರು ಅಭಿಪ್ರಾಯಪಟ್ಟರು. ದೈಹಿಕ, ಮಾನಸಿಕ, ಭಾವನಾತ್ಮಕ ದೃಢತೆ ಬೆಳೆಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ, ದೇಶದ ಸೈನಿಕರು ದೇಶದ ರಕ್ಷಣೆ ಮಾಡುವಾಗ ದೇಶವಾಸಿಗಳಾದ ನಾವು ದೇಶದೊಳಗಡೆ ಏನು ಮಾಡುತ್ತಿದ್ದೇವೆ ಎಂಬುದನ್ನು ಅವಲೋಕನ ಮಾಡಬೇಕಿದೆ. ಸೈನಿಕರ ಶ್ರಮವನ್ನು ಯುವಜನರು ಅರಿತುಕೊಳ್ಳಬೇಕು. ನಮ್ಮ ಕಾಲೇಜಿನ ಎನ್ನೆಸ್ಸೆಸ್ ಘಟಕ ತನ್ನ ಸುವರ್ಣ ಸಂಭ್ರಮದ ಸಂದರ್ಭದಲ್ಲಿ ಈ ಕಾರ್ಯಕ್ರಮ ಆಯೋಜಿಸಿರುವುದು ಸಂತಸದಾಯಕ ಎಂದರು. ಭಾರತ ಎಂದಿಗೂ ಯಾವ ದೇಶದ ಮೇಲೆಯೂ ಕೂಡ ಯುದ್ಧ ಸಾರಿಲ್ಲ. ಆದರೆ ತನ್ನ ಮೇಲೆ ದಾಳಿ ಮಾಡಿದವರನ್ನು ಎಂದಿಗೂ ಸದೆ ಬಡಿಯದೆ ಬಿಟ್ಟಿಲ್ಲ ಎಂಬುದಕ್ಕೆ ಕಾರ್ಗಿಲ್ ಯುದ್ಧವೇ ಸಾಕ್ಷಿ ಎಂದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಎನ್ ಎಸ್ ಎಸ್ ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್., "24ನೇ ಕಾರ್ಗಿಲ್ ವಿಜಯ ದಿನಾಚರಣೆ ಸಂದರ್ಭದಲ್ಲಿ ನಾವು ಸರಣಿ ಕಾರ್ಯಕ್ರಮಗಳನ್ನು ನಡೆಸುವ ಸಂಕಲ್ಪ ಮಾಡಿದ್ದೆವು. ಶಾಲಾ ಕಾಲೇಜುಗಳಲ್ಲಿ ದೇಶಭಕ್ತಿ ಕುರಿತ ಸರಣಿ ಕಾರ್ಯಕ್ರಮ ನಡೆಸಿ, ಇಂದು ಸಮಾರೋಪ ಸಮಾರಂಭ ಆಯೋಜಿಸಿದ್ದೇವೆ" ಎಂದರು. ಕಾರ್ಗಿಲ್ ವಿಜಯ ದಿವಸದ ಪ್ರಯುಕ್ತ ನಡೆಸಿದ ಭಾಷಣ ಮತ್ತು ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಪಟ್ಟಿಯನ್ನು ಎನ್ ಎಸ್ ಎಸ್ ಯೋಜನಾಧಿಕಾರಿ ಪ್ರೊ. ದೀಪ ಆರ್.ಪಿ. ವಾಚಿಸಿದರು. ಗಣ್ಯರು ಬಹುಮಾನ ವಿತರಿಸಿದರು. ಎನ್ನೆಸ್ಸೆಸ್’ನ ಭಿತ್ತಿ ಪತ್ರಿಕೆ ‘ಯುವ ಚೇತನ’ದ ನೂತನ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಭಾರತಾಂಬೆ ಭಾವಚಿತ್ರ ಹಾಗೂ ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಲಾಯಿತು. ಅತಿಥಿಯನ್ನು ಸನ್ಮಾನಿಸಲಾಯಿತು. ಪ್ರಥಮ ಬಿ.ಕಾಂ. ವಿದ್ಯಾರ್ಥಿ ಶಯನ್ ಕುಮಾರ್ ರಚಿಸಿದ ಪೆನ್ಸಿಲ್ ಸ್ಕೆಚ್ ಅನ್ನು ಅತಿಥಿಗೆ ನೀಡಿದರು. ಸ್ವಯಂಸೇವಕಿಯರಾದ ಶ್ವೇತಾ ಕೆ ಜಿ ನಿರೂಪಿಸಿ, ಸಿಂಚನ ಕಲ್ಲೂರಾಯ ವಂದಿಸಿದರು. ಬಳಿಕ, ಕ್ಯಾಪ್ಟನ್ ಅವರೊಂದಿಗೆ ಎನ್ನೆಸ್ಸೆಸ್ ಅಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ ಎಚ್. ಸಂವಾದ ನಡೆಸಿದರು. ವಿದ್ಯಾರ್ಥಿಗಳಿಂದ ಗಾಯನ ಕಾರ್ಯಕ್ರಮ ನಡೆಯಿತು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img