ಶ್ರೀ ಧ. ಮಂ. ಕಾಲೇಜಿನಲ್ಲಿ ರಾಷ್ಟ್ರಮಟ್ಟದ ವಿಚಾರ ಸಂಕಿರಣ


Logo

Published Date: 28-Jul-2024 Link-Copied

ಉಜಿರೆ: ಬ್ಯಾಂಕಿಂಗ್‌ ಸಂಸ್ಥೆಗಳು ಜಾಗತಿಕ ಆರ್ಥಿಕತೆಯಲ್ಲಿನ ಬೆಳವಣಿಗೆಯಲ್ಲಿ ಬಹುದೊಡ್ಡ ಪಾತ್ರವನ್ನು ವಹಿಸುತ್ತಿವೆ. ಬ್ಯಾಂಕಿಂಗ್‌ ಕ್ಷೇತ್ರದಲ್ಲಾಗುವ ಬೆಳವಣಿಗೆಗಳ ಬಗ್ಗೆ ತಿಳಿದುಕೊಂಡಾಗ ಇಂದಿನ ಆಧುನಿಕ ಯುಗದಲ್ಲಿ ಬದುಕು ಮತ್ತಷ್ಟು ಸರಾಗವಾಗುತ್ತದೆ ಎಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಹೇಳಿದರು. ಉಜಿರೆಯ ಶ್ರೀ ಧ. ಮಂ. ಕಾಲೇಜಿನಲ್ಲಿ ವಾಣಿಜ್ಯ ವಿಭಾಗ, ವ್ಯವಹಾರ ಆಡಳಿತ ವಿಭಾಗ, ಶ್ರೀ ಧ. ಮಂ. ವಾಣಿಜ್ಯ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗ ವತಿಯಿಂದ ಇಂಟರ್ನಲ್‌ ಕ್ವಾಲಿಟಿ ಅಶ್ಯೂರೆನ್ಸ್‌ ಸೆಲ್‌ ಸಹಯೋಗದಲ್ಲಿ ಜು.27 ಆಯೋಜಿಸಿದ್ದ ‘ಬ್ಯಾಂಕಿಂಗ್, ಹಣಕಾಸು ಮತ್ತು ವಿಮೆಯಲ್ಲಿ ಇತ್ತೀಚಿನ ಪ್ರವೃತ್ತಿಗಳು’ ಕುರಿತ ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. 1947ರ ಸಮಯದಲ್ಲಿ ಜನರು ಕೇವಲ ರೋಟಿ, ಕಪಡಾ ಮತ್ತು ಮಕಾನ್‌ (ಅಶನ, ವಸನ, ವಸತಿ)ಗಳ ಬಗ್ಗೆ ಮಾತ್ರ ಗಮನ ಹರಿಸುತ್ತಿದ್ದರು. ಆದರೆ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಜನರ ಬೇಡಿಕೆಗಳು ಹೆಚ್ಚಾಗಿವೆ. ಆರ್ಥಿಕ ವ್ಯವಸ್ಥೆಯನ್ನು ಸರಾಗಗೊಳಿಸುವಲ್ಲಿ ಬ್ಯಾಂಕಿಂಗ್ ಸಂಸ್ಥೆಗಳು ಅನೇಕ ರೀತಿ ಯೋಜನೆಗಳನ್ನು ಮುನ್ನೆಲೆಗೆ ತರುತ್ತಿವೆ. ಆದರೆ ಮಾಹಿತಿಯ ಕೊರತೆಯಿಂದಾಗಿ ಅನೇಕ ರೈತರು, ಅನಕ್ಷರಸ್ಥರು ಹಾಗೂ ಗ್ರಾಮೀಣ ಭಾಗದವರು ಬ್ಯಾಂಕಿಂಗ್ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಅವರು ಹೇಳಿದರು. “ವಿದ್ಯಾರ್ಥಿ ಹಂತದಲ್ಲಿ ಈ ರೀತಿಯ ವಿಚಾರ ಸಂಕಿರಣಗಳ ಮೂಲಕ ಮಾಹಿತಿ ನೀಡುವುದು ಉತ್ತಮ ಆಲೋಚನೆ. ಸಂಸ್ಥೆಯು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗುವಂತೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ವಿದ್ಯಾರ್ಥಿಗಳು ಈ ರೀತಿಯ ಅವಕಾಶಗಳ ಮೂಲಕ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು” ಎಂದು ಅವರು ಕರೆ ನೀಡಿದರು. ಮುಖ್ಯ ಅತಿಥಿ, ಕಾಲೇಜಿನ ಹಿರಿಯ ವಿದ್ಯಾರ್ಥಿ, ಅಬುದಬಿಯ ಝಯದ್‌ ಸಂಸ್ಥೆಯ ಮಾಜಿ ಹಣಕಾಸು ನಿಯಂತ್ರಕ ಸಿಎ ಅಬ್ದುಲ್ಲ ಮಾಡುಮೂಲೆ, “ನಮ್ಮ ಸುತ್ತಮುತ್ತಲಿನ ಬೆಳವಣಿಗೆ ಅರಿತುಕೊಂಡು ನಾವು ಅದಕ್ಕೆ ಹೊಂದಿಕೊಳ್ಳಬೇಕು, ಇಲ್ಲವಾದರೆ ನಮ್ಮ ಉಳಿಯುವಿಕೆ ಕಷ್ಟಸಾಧ್ಯ. ಬದಲಾವಣೆಗಳನ್ನು ಗಮನಿಸಿ ವಿಶ್ಲೇಷಿಸಿ ನಂತರ ಅವುಗಳನ್ನು ಮೈಗೂಡಿಸಿಕೊಳ್ಳುವುದು ಯಶಸ್ಸಿನ ಬಹುದೊಡ್ಡ ಮಾರ್ಗ. ನಿರಂತರ ಕಲಿಕೆ ನಮ್ಮದಾಗಲಿ” ಎಂದರು. ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಆಗಿರುವ ತಾಂತ್ರಿಕ ಮತ್ತು ಆಡಳಿತಾತ್ಮಕ ಬೆಳವಣಿಗೆಗಳ ಬಗ್ಗೆ ಬೆಳಕು ಚೆಲ್ಲಿದರು. ಸಂಪನ್ಮೂಲ ವ್ಯಕ್ತಿ, ಮುಂಬೈ ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಪ್ರಾಧ್ಯಾಪಕಿ ಸಿಎಂಎ ಡಾ. ಕಿನ್ನರಿ ಥಾಕರ್‌, ನಮ್ಮ ಯಶಸ್ಸಿನ ಮಾನದಂಡ ನಾವು ಸಮಾಜಕ್ಕೆ ಎಷ್ಟರ ಮಟ್ಟಿಗೆ ಕೊಡುಗೆ ನೀಡಬಲ್ಲೆವು ಎಂಬುದರ ಮೇಲೆ ನಿಂತಿದೆ. ಬ್ಯಾಂಕಿಂಗ್ ಸಂಸ್ಥೆಗಳು ಸಮಾಜದ ಏಳಿಗೆಗೆ ಅನಿವಾರ್ಯ ಎಂಬುದನ್ನು ನಾವು ಒಪ್ಪಲೇಬೇಕು. ಬ್ಯಾಂಕಿಂಗ್‌ ಕ್ಷೇತ್ರ ಸೇರಿದಂತೆ ಉಳಿದೆಲ್ಲ ಕ್ಷೇತ್ರಗಳು ಸುಸ್ಥಿರ ಯೋಜನೆಗಳನ್ನು ತಮ್ಮದಾಗಿಸಿಕೊಳ್ಳಬೇಕು” ಎಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ, ವಾಣಿಜ್ಯ ಕ್ಷೇತ್ರದ ತಜ್ಞರು ಮತ್ತು ಗ್ರಾಹಕರ ನಡುವೆ ಸೇತುವೆ ಕಟ್ಟುವ ಕೆಲಸವಾಗಬೇಕಿದೆ. ತಂತ್ರಜ್ಞಾನ ಬಳಕೆಯಿಂದ ಬ್ಯಾಂಕಿಂಗ್ ಕ್ಷೇತ್ರಗಳು ಮತ್ತಷ್ಟು ಮುಂದುವರಿದಿವೆ. ಆದರೆ ತಂತ್ರಜ್ಞಾನದ ನ್ಯೂನತೆಯಿಂದ ಎದುರಾಗುವ ಸೈಬರ್‌ ಕ್ರೈಮ್‌ ನಂತಹ ಸವಾಲುಗಳನ್ನು ಎದುರಿಸಬೇಕಾದ ಪರಿಸ್ಥಿತಿ ಬಂದಿದೆ. ಬ್ಯಾಂಕಿಂಗ್ ವಿಚಾರದ ಹೊರತಾಗಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಆಯೋಜಿಸಲಾದ ಈ ವಿಚಾರ ಸಂಕಿರಣ ಸೂಕ್ತವಾಗಿದೆ ಎಂದು ಹೇಳಿದರು. ಕಾರ್ಯಕ್ರಮ ಸಂಯೋಜಕರಾದ ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥೆ ಶಕುಂತಲಾ, ಶ್ರೀ ಧ. ಮಂ. ವಾಣಿಜ್ಯ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥೆ ಡಾ. ಪ್ರಿಯಾ ಕುಮಾರಿ, ಸಂಘಟನಾ ಕಾರ್ಯದರ್ಶಿ, ವ್ಯವಹಾರ ಆಡಳಿತ ವಿಭಾಗದ ಪ್ರಾಧ್ಯಾಪಕ ಶರಶ್ಚಂದ್ರ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕಿ, ವಾಣಿಜ್ಯ ವಿಭಾಗ ಮುಖ್ಯಸ್ಥೆ ಡಾ. ರತ್ನಾವತಿ ಕೆ. ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ. ಲಕ್ಷ್ಮೀನಾರಾಯಣ ಕೆ.ಎಸ್‌. ವಂದಿಸಿದರು. ವಿದ್ಯಾರ್ಥಿನಿ ಕ್ಷಿತಿ ಹಾಗೂ ತಂಡದವರು ಪ್ರಾರ್ಥಿಸಿದರೆ, ವಾಣಿಜ್ಯ ಪ್ರಾಧ್ಯಾಪಕಿಯರಾದ ದೀಕ್ಷಿತ ಕುಮಾರಿ ಮತ್ತು ಫಾತಿಮ ಶಫೀರ ಕಾರ್ಯಕ್ರಮ ನಿರ್ವಹಿಸಿದರು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img