ಉಜಿರೆ ಶ್ರೀ ಧ.ಮಂ. ಸ್ವಾಯತ್ತ ಕಾಲೇಜಿನಲ್ಲಿ 2024-25ನೇ ಸಾಲಿನ ವಿದ್ಯಾರ್ಥಿ ಸಂಘ ಉದ್ಘಾಟನೆ


Logo

Published Date: 23-Jul-2024 Link-Copied

ಉಜಿರೆ, ಜು. 23: ಯುವಜನತೆ ಕ್ಷುಲ್ಲಕ ಕಾರಣಗಳಿಗಾಗಿ ಅತಿರೇಕದ ಕ್ರಮಗಳನ್ನು ಕೈಗೊಳ್ಳುವುದು ಬಹಳ ನೋವಿನ ಸಂಗತಿ ಎಂದು ಮಂಗಳೂರು ಉತ್ತರ ವಲಯದ ಸಹಾಯಕ ಪೊಲೀಸ್ ಆಯುಕ್ತ, ಉಜಿರೆ ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಮನೋಜ್ ಕುಮಾರ್ ನಾಯಕ್ ಹೇಳಿದರು. ಉಜಿರೆ ಶ್ರೀ ಧ.ಮಂ. ಸ್ವಾಯತ್ತ ಕಾಲೇಜಿನಲ್ಲಿ ಇಂದು (ಜು.23) 2024-25ನೇ ಸಾಲಿನ ವಿದ್ಯಾರ್ಥಿ ಸಂಘ(Students' Council 2024-25)ದ ವಿವಿಧ ವಿದ್ಯಾರ್ಥಿ ಚಟುವಟಿಕೆ ವೇದಿಕೆ(Students' Activity Fora)ಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಯಶಸ್ವಿಯಾಗಲು ವಿಫಲವಾದ ಕೂಡಲೇ ಎಲ್ಲವೂ ಮುಗಿಯಿತು ಎಂದರ್ಥವಲ್ಲ. ಪ್ರಸ್ತುತ ಯುವಜನತೆ ಪರೀಕ್ಷೆಯಲ್ಲಿ ಅನುತ್ತೀರ್ಣರಾದೆವೆಂದು, ಪೋಷಕರು ಫೋನ್ ಕೊಡಿಸಲಿಲ್ಲ ಎಂಬ ಇತ್ಯಾದಿ ಸಣ್ಣ ಸಣ್ಣ ಕಾರಣಗಳಿಗೆ ಆತ್ಮಹತ್ಯೆಯಂತಹ ಅತಿರೇಕದ ಕ್ರಮಕ್ಕೆ ಮುಂದಾಗುವುದನ್ನು ಕಂಡಾಗ ನೋವಾಗುತ್ತದೆ. ವೈಫಲ್ಯ ಮತ್ತು ಒತ್ತಡವನ್ನು ನಿಭಾಯಿಸಲು ಕಲಿಯಿರಿ” ಎಂದು ಅವರು ಹೇಳಿದರು.“ವೈಫಲ್ಯಗಳನ್ನು ಸ್ವೀಕರಿಸಿ. ಪರಿಹಾರವಿಲ್ಲದ ಸಮಸ್ಯೆಯೇ ಇಲ್ಲ. ಸಮಸ್ಯೆಯಿಂದ ದೂರ ಓಡಬೇಡಿ, ಎದುರಿಸಿ. ಒಂದೋ ಯಶಸ್ಸು ಸಿಗಬಹುದು ಇಲ್ಲವೇ ವಿಫಲವಾದರೆ ಅನುಭವ ದೊರಕಬಹುದು. ಒತ್ತಡದ ಸಂದರ್ಭದಲ್ಲಿಯೇ ನಮ್ಮಿಂದ ಅತ್ಯುತ್ತಮ ಫಲಿತಾಂಶ ಲಭಿಸುತ್ತದೆ. ದೇವರು ಕಷ್ಟದ ಸಂದರ್ಭಗಳನ್ನು ನೀಡುತ್ತಿದ್ದಾನೆಂದರೆ ನಿಮ್ಮಿಂದ ಏನೋ ಸಾಧನೆ ಆಗುವುದರಲ್ಲಿದೆ ಎಂದರ್ಥ” ಎಂದರು. ಯುವಜನತೆ ಮಾದಕ ದ್ರವ್ಯಗಳ ದಾಸರಾಗುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದ ಅವರು, “ಯಾವುದೇ ರೀತಿಯ ದುಶ್ಚಟಗಳಿಗೆ ಬಲಿಯಾಗದೆ ಕಾಲೇಜಿಗೆ, ಹುಟ್ಟಿದ ಊರಿಗೆ, ರಾಜ್ಯಕ್ಕೆ ಮತ್ತು ದೇಶಕ್ಕೆ ಒಳ್ಳೆಯ ಪ್ರಜೆಗಳಾಗಿ, ಪೋಷಕರಿಗೆ ಉತ್ತಮ ಮಕ್ಕಳಾಗಿ. ದ್ವಿಚಕ್ರ ವಾಹನ ಓಡಿಸುವಾಗ ತಪ್ಪದೆ ಹೆಲ್ಮೆಟ್ ಧರಿಸಿ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕಠಿಣ ಪರಿಶ್ರಮ ಮತ್ತು ಶಿಸ್ತು ಇದ್ದಾಗ ಜೀವನದಲ್ಲಿ ಉನ್ನತ ಸ್ಥಾನಕ್ಕೇರಲು ಸಾಧ್ಯ. ವಿದ್ಯಾರ್ಥಿಗಳಲ್ಲಿ ಪ್ರತಿಭೆ ಎಷ್ಟು ಮುಖ್ಯವೋ ಶಿಸ್ತು ಸಹ ಅಷ್ಟೇ ಮುಖ್ಯ. ಎಸ್.ಡಿ.ಎಂ. ಕಾಲೇಜಿನಲ್ಲಿ ಪಠ್ಯ ಚಟುವಟಿಕೆಗಳಿಗಷ್ಟೇ ಅಲ್ಲದೆ, ಮೌಲ್ಯ, ಕೌಶಲವೃದ್ಧಿಗೆ ಹೇರಳ ಅವಕಾಶವಿದೆ. ಸಾವಿರಾರು ಕನಸು ಹೊತ್ತು ಇಲ್ಲಿ ಬಂದಿದ್ದೀರಿ, ಒಳ್ಳೆಯ ಜಾಗಕ್ಕೆ ಬಂದಿದ್ದೀರಿ. ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಪ್ರಯತ್ನ ಮುಂದುವರಿಸಿ” ಎಂದು ಅವರು ಸಲಹೆ ನೀಡಿದರು. ಮುಖ್ಯ ಅತಿಥಿ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಮಾತನಾಡಿದರು. ನಾಯಕತ್ವವೆಂಬುದು ರಾಜಕೀಯಕ್ಕೆ ಸೀಮಿತವಲ್ಲ. ಜೀವನದಲ್ಲಿ ನಾಯಕತ್ವ ಮುಖ್ಯ. ಶಿಕ್ಷಣದ ಸಂದರ್ಭದಲ್ಲಿ ನಾಯಕತ್ವ ಗುಣ ಬೆಳೆಸಿಕೊಳ್ಳಲು ವಿದ್ಯಾರ್ಥಿ ಸಂಘಗಳು ನೆರವಾಗುತ್ತವೆ ಎಂದು ಅವರು ತಿಳಿಸಿದರು. “ಒಬ್ಬ ಗುರುವಿಗೆ ಖುಷಿ ಸಿಗುವುದು ತನ್ನ ವಿದ್ಯಾರ್ಥಿ ಶ್ರೇಷ್ಠ ಸಾಧನೆ ಮಾಡಿದಾಗ. ನಮ್ಮ ಸಂಸ್ಥೆಯಲ್ಲಿ ಕಲಿತ ಮನೋಜ್ ಕುಮಾರ್ ನಾಯಕ್ ಶಿಸ್ತು, ಪರಿಶ್ರಮ ಹಾಗೂ ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿ ಶ್ರೇಷ್ಠ ಸಾಧನೆ ಮಾಡಿದ್ದಾರೆ” ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿ ಮಾತನಾಡಿದರು. ವಿದ್ಯಾರ್ಥಿ ಸಂಘಗಳಿಂದ ವಿದ್ಯಾರ್ಥಿಗಳು ವಿವಿಧ ರಾಜಕೀಯ ಪಕ್ಷಗಳ ಸಿದ್ಧಾಂತಗಳಿಂದ ಪ್ರೇರಿತರಾಗಿ ಪರಸ್ಪರ ಹೊಡೆದಾಟ, ವೈಷಮ್ಯದಿಂದ ಇರುವುದರ ಬದಲು ಪರಸ್ಪರ ಪ್ರೀತಿ, ವಿಶ್ವಾಸದಿಂದ ಇದ್ದು, ವ್ಯಕ್ತಿತ್ವ ವಿಕಸನ ಹೊಂದಬೇಕು ಎಂಬ ಉದ್ದೇಶದಿಂದ ಅಂದಿನ ಪ್ರಾಂಶುಪಾಲ ಡಾ. ಬಿ. ಯಶೋವರ್ಮ ಅವರ ಪರಿಕಲ್ಪನೆಯಂತೆ ವಿಭಿನ್ನ ರೀತಿಯಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿ ಸಂಘ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ವಿವರಿಸಿದರು. ಪತ್ರಿಕೋದ್ಯಮ ವಿದ್ಯಾರ್ಥಿಗಳ ಪ್ರಾಯೋಗಿಕ ಪತ್ರಿಕೆ 'ಚಿಗುರು' ಹಾಗೂ ಉದ್ಘಾಟನಾ ಸಮಾರಂಭದ ಚಿತ್ರಣಗಳನ್ನೊಳಗೊಂಡ 'ಚಿಗುರು' ಭಿತ್ತಿಪತ್ರಿಕೆ ಬಿಡುಗಡೆಗೊಂಡಿತು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶ್ರೇಯಸ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಜ್ಞಾನ ಸಂಘದ‌ ಅಧ್ಯಕ್ಷ, ತೃತೀಯ ಬಿಸಿಎ ವಿದ್ಯಾರ್ಥಿ ಸುದೇಶ್ ಸ್ವಾಗತಿಸಿದರು. ವೈದೇಹಿ ಮತ್ತು ತಂಡದವರು ಪ್ರಾರ್ಥಿಸಿದರು. ಧರಿತ್ರಿ ಭಿಡೆ ಅತಿಥಿ ಪರಿಚಯ ನೀಡಿದರು. ವೀಕ್ಷಾ ವಂದಿಸಿದರು. ಮಾನಸ ಅಗ್ನಿಹೋತ್ರಿ ಮತ್ತು ರುಚಿರಾ ನಿರೂಪಿಸಿದರು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img