ಉಜಿರೆಯಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ
Published Date: 13-Jul-2024 Link-Copied
ಜನಸಂಖ್ಯಾ ಸ್ಪೋಟದಿಂದ ದೇಶದ ಪ್ರಗತಿ ಕುಂಠಿತವಾಗುತ್ತದೆ. ಎಲ್ಲರಿಗೂ ಆಹಾರ, ನೆಲ, ಜಲ, ಹಾಗೂ ಪರಿಶುದ್ಧವಾದ ಗಾಳಿ ಮೊದಲಾದ ಮೂಲಭೂತ ಸೌಕರ್ಯಗಳ ಕೊರತೆಯಾಗಿ ನಾವು ಇತರ ಗ್ರಹಗಳಿಗೆ ವಾಸ್ತವ್ಯಕ್ಕೆ ಹೋಗಬೇಕಾದ ಅನಿವಾರ್ಯತೆ ಒದಗಿ ಬಂದಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ದೀಪಾ ಪ್ರಭು ಹೇಳಿದರು. ಅವರು ಶುಕ್ರವಾರ ಉಜಿರೆಯಲ್ಲಿ ಎಸ್.ಡಿ.ಎಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಳ್ತಂಗಡಿ ತಾಲೂಕು ಪಂಚಾಯಿತಿ ಹಾಗೂ ಉಜಿರೆ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ವಿಶ್ವಜನಸಂಖ್ಯಾ ದಿನಾಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾರತದಲ್ಲಿ ಪ್ರತಿದಿನ 73,781 ರಷ್ಟು ಜನಸಂಖ್ಯೆ ಹೆಚ್ಚಾಗುತ್ತಿದೆ. ಜನಸಂಖ್ಯಾ ಸ್ಪೋಟದ ನಿಯಂತ್ರಣದಿಂದ ಮಾತ್ರ ದೇಶದ ಪ್ರಗತಿ ಸಾಧ್ಯವಾಗುತ್ತದೆ. ಚಿಕ್ಕ ಸಂಸಾರವೇ ಚೊಕ್ಕ ಸಂಸಾರವಾಗಿದ್ದು, ಸಂತಾನ ನಿಯಂತ್ರಣ ಅನಿವಾರ್ಯವಾಗಿದೆ. ಮಹಿಳೆ ಆರೋಗ್ಯವಂತಳಾದರೆ, ಕುಟುಂಬ ಹಾಗೂ ಸಮಾಜವೂ ಆರೋಗ್ಯವಂತವಾಗಿರುತ್ತದೆ. ಮಕ್ಕಳ ಜನನದ ನಡುವಿನ ಅಂತರ ಕನಿಷ್ಠ ಮೂರು ವರ್ಷಗಳಾದರೂ ಇರಬೇಕು. ಇಂದು 144 ಕೋಟಿ ಜನಸಂಖ್ಯೆಯೊಂದಿಗೆ ಭಾರತ ಪ್ರಥಮ ಸ್ಥಾನದಲ್ಲಿರುವುದು ಪ್ರಗತಿಯ ದ್ಯೋತಕವಲ್ಲ. ಜನಸಂಖ್ಯಾ ಸ್ಪೋಟದ ನಿಯಂತ್ರಣದಿಂದ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಅಭಿಪ್ರಾಯಪಟ್ಟ ಅವರು ಯುವಜನತೆ ದೇಶದ ಅಮೂಲ್ಯ ಮಾನವ ಸಂಪನ್ಮೂಲವಾಗಿದ್ದು, ಆರೋಗ್ಯವಂತ ಯುವಜನತೆಯಿಂದ ದೇಶದ ಸರ್ವತೋಮುಖ ಪ್ರಗತಿ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ಸಮಾರಂಭವನ್ನು ಉದ್ಘಾಟಿಸಿದ ಉಜಿರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಉಷಾಕಿರಣ ಕಾರಂತ ಮಾತನಾಡಿ ಗ್ರಾಮೀಣ ಪ್ರದೇಶದ ಮಹಿಳೆಯರು ಇನ್ನೂ ಹೆಚ್ಚು ಸಬಲೀಕರಣಗೊಳ್ಳಬೇಕಾಗಿದೆ. ಅಂಗನವಾಡಿ ಹಾಗೂ ಆರೋಗ್ಯ ಕಾರ್ಯಕರ್ತೆಯರು ನೀಡುವ ಮಾಹಿತಿ, ಮಾರ್ಗದರ್ಶನದ ಸದುಪಯೋಗ ಪಡೆದು ಹಾಗೂ ಸರ್ಕಾರದ ಸವಲತ್ತುಗಳ ಬಳಕೆಯೊಂದಿಗೆ ಮಹಿಳೆಯರು ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಬೇಕೆಂದು ಅವರು ಸಲಹೆ ನೀಡಿದರು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ.ಎಸ್. ಸತೀಶ್ಚಂದ್ರ ಶುಭಾಶಂಸನೆ ಮಾಡಿ, ದೇಶದ ಪ್ರಬಲ ಶಕ್ತಿಯಾದ ಯುವಜನತೆ ಎಲ್ಲಾ ಆಯಾಮಗಳಲ್ಲಿಯೂ ಸದೃಢರಾದಾಗ ದೇಶದ ಸರ್ವತೋಮುಖ ಪ್ರಗತಿಯಾಗುತ್ತದೆ. ನೌಕರರ ಕೊರತೆ ಇದ್ದರೂ ಸರ್ಕಾರಿ ಅಧಿಕಾರಿಗಳ ಕರ್ತವ್ಯಪ್ರಜ್ಞೆ, ಬದ್ಧತೆ ಮತ್ತು ಸಮರ್ಪಣಾ ಮನೋಭಾವದ ಸೇವೆಯನ್ನು ಅವರು ಶ್ಲಾಘಿಸಿ ಅಭಿನಂದಿಸಿದರು. ದ.ಕ. ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ದೀಪಾ ಪ್ರಭು, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸೌಜನ್ಯ ಮತ್ತು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯ ಸ್ತ್ರಿರೋಗ ಮತ್ತು ಪ್ರಸೂತಿ ತಜ್ಞೆ ಡಾ. ರಶ್ಮಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ, ಮಾರ್ಗದರ್ಶನ ನೀಡಿದರು. ಡಾ. ಮಂಜು, ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ಎಸ್.ಡಿ.ಎಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ವಿ. ಪ್ರಕಾಶ್ ಕಾಮತ್, ಶಿಕ್ಷಕರ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಸ್ವಾಮಿ ಕೆ.ಎ. ಉಪಸ್ಥಿತರಿದ್ದರು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ವಿಜೇತರು: ತೇಜಸ್ ವಿ.ಎಸ್., ಸರ್ಕಾರಿ ಪದವಿಪೂರ್ವ ಕಾಲೇಜು, ವೇಣೂರು (ಪ್ರಥಮ). ಧನುಷ್, ಕೆ.ಎನ್. ಮುಂಡಾಜೆ ಪದವಿಪೂರ್ವ ಕಾಲೇಜು, ಮುಂಡಾಜೆ (ದ್ವಿತೀಯ). ಫಾತಿಮತ್ ಹಿಸಾನಾ, ಸಕಾಋಇ ಪದವಿಪೂರ್ವ ಕಾಲೇಜು ಕೊಯ್ಯೂರು. ಬೆಳ್ತಂಗಡಿ ತಾಲ್ಲೂಕು ಮಟ್ಟದ ಪ್ರಬಂಧ ಸ್ಪರ್ಧೆ ವಿಜೇತರು. ಫಾತಿಮತ್ ಸುಮಯ್ಯ, ಸರ್ಕಾರಿ ಪದವಿಪೂರ್ವ ಕಾಲೇಜು ವೇಣೂರು (ಪ್ರಥಮ), ಕುಮಾರಿ ಸುರಕ್ಷಿತಾ, ವಾಣಿ ಪದವಿಪೂರ್ವ ಕಾಲೇಜು, ಬೆಳ್ತಂಗಡಿ (ದ್ವಿತೀಯ), ಕುಮಾರಿ ಜೆನಿತಾ ಪಿರೇರಾ, ಸರ್ಕಾರಿ ಪದವಿಪೂರ್ವ ಕಾಲೇಜು ಬೆಳ್ತಂಗಡಿ (ತೃತೀಯ) ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ ಸ್ವಾಗತಿಸಿದರು. ವಿಭಾಗ ಯೋಜನಾಧಿಕಾರಿ ಅಜೇಯ್ ಕಾರ್ಯಕ್ರಮ ನಿರ್ವಹಿಸಿ ಕೊನೆಯಲ್ಲಿ ಧನ್ಯವಾದವಿತ್ತರು.