ಮೂಡುಬಿದಿರೆ: ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ನಡೆದ ಸಾಂಸ್ಕ್ರತಿಕ ಚಟುವಟಿಕೆಗಳ ಉದ್ಘಾಟನ ಕಾರ್ಯಕ್ರಮ
Published Date: 22-Jun-2024 Link-Copied
ಪ್ರತಿಯೊಬ್ಬರಲ್ಲಿಯೂ ತಮ್ಮದೇ ಪ್ರತಿಭೆಗಳಿರುತ್ತದೆ. ನಿಮಗೆ ಸಿಗುವ ಅವಕಾಶಗಳನ್ನು ಎಂದಿಗೂ ಕಳೆದುಕೊಳ್ಳಬೇಡಿ. ಕೌಶಲ್ಯಕ್ಕೆ ಪ್ರತಿಭೆಗೆ ಯಾವುದೇ ಮಿತಿಯಿಲ್ಲ. ಕಳೆದುಕೊಂಡ ಅವಕಾಶಗಳು ಮತ್ತೊಮ್ಮೆ ಸಿಗುವುದಿಲ್ಲ. ನಿಮ್ಮೊಳಗಿರುವ ಕೌಶಲ್ಯವನ್ನು ಗುರುತಿಸಿಕೊಳ್ಳಿ. ಸಮಾಜವನ್ನು ಬದಲಾಯಿಸುವ ಶಕ್ತಿ ವಿದ್ಯೆಗಿದೆ. ಯುಪಿಎಸ್‌ಸಿ, ಐಎಎಸ್, ಐಪಿಎಸ್ ನಂತಹ ಕನಸುಗಳನ್ನು ನೀವು ಕಾಣಬೇಕು. ನಿಮಗೆ ಕಲಿಸಿದ ಗುರುಗಳು ಎದ್ದು ನಿಂತು ನಿಮಗೆ ಗೌರವ ಕೊಡುವಂತಹ ರೀತಿಯಲ್ಲಿ ಸಾಧನೆಯನ್ನು ಮಾಡಬೇಕು. ಜೀವನದಲ್ಲಿ ಯಾವತ್ತಿಗೂ ನಿರಾಶರಾಗಬೇಡಿ ಬದುಕು ನಿರಂತರವಾಗಿ ಸಾಗುವ ನದಿ ಇದ್ದ ಹಾಗೆ. ಜೀವನದಲ್ಲಿ ಸತತ ಪ್ರಯತ್ನ, ಅಭ್ಯಾಸ, ಭರವಸೆಯೊಂದಿದ್ದರೆ ಒಂದಲ್ಲಾ ಒಂದು ದಿವಸ ನೀವು ಸಾಧಕರಾಗಿ ಗುರುತಿಸಿಕೊಳ್ಳುತ್ತೀರಿ ಆದ್ದರಿಂದ ನಿಮ್ಮ ಮೇಲೆ ನಿಮಗೆ ಸಂಪೂರ್ಣ ಭರವಸೆ ಇರಲಿ ಎಂದು ಖ್ಯಾತ Daijiworld 24x7 Media Network ನ ಸಂಸ್ಥಾಪಕರಾದ ವಾಲ್ಟರ್ ನಂದಳಿಕೆ ಇವರು ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ನಡೆದ ಸಾಂಸ್ಕ್ರತಿಕ ಚಟುವಟಿಕೆಗಳ ಉದ್ಘಾಟನ ಕಾರ್ಯಕ್ರಮವನ್ನು ಉದ್ಘಾಟಿಸಿ ಹೇಳಿದರು. ಪ್ರತಿಭೆ ದೇವರು ನೀಡಿರುವ ಕೊಡುಗೆ. ನಿಮ್ಮಲ್ಲಿ ನಿಮಗೆ ಭರವಸೆ ಇರುವವರೆಗೆ ನಿಮಗೆ ಯಾವತ್ತೂ ಸೋಲಾಗುವುದಿಲ್ಲ. ನಿಮ್ಮಲ್ಲಿರುವ ಪ್ರತಿಭೆಯನ್ನು ಯಾವುದೇ ಹಿಂಜರಿಕೆಯಿಲ್ಲದೆ ಅನಾವರಣಗೊಳಿಸಿ ಎಂದು ಎಕ್ಸಲೆಂಟ್ ವಿದ್ಯಾ ಸಂಸ್ಥೆಗಳ ಕಾರ್ಯದರ್ಶಿಯವರಾದ ರಶ್ಮಿತಾ ಜೈನ್ ಹೇಳಿದರು. ಶಿಕ್ಷಣವೆಂದರೆ ಕೇವಲ ಪುಸ್ತಕ ಓದಿ ರ‍್ಯಾಂಕ್ ಪಡೆಯುವುದಲ್ಲ ಅದು ವಿಶಾಲ ವ್ಯಾಪ್ತಿಯನ್ನು ಒಳಗೊಂಡಿದೆ. ಮಗುವನ್ನು ಅತ್ಯುತ್ತಮ ಮಾನವನನ್ನಾಗಿಸುವ ಶಕ್ತಿ ಶಾಲೆಗಿದೆ. ರ‍್ಯಾಂಕ್ ಪಡೆಯುವ ಜೊತೆಗೆ ಒಳ್ಳೆಯ ಮೌಲ್ಯಗಳನ್ನು ಜೀವನದಲ್ಲಿ ಬೆಳೆಸಿಕೊಳ್ಳಬೇಕು. ಸಾಧಕರೆನಿಸಿಕೊಂಡಿರುವವರೆಲ್ಲ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅವರು ನಿಮಗೆ ಮಾದರಿಯಾಗಲಿ ಎಂದು ಮುಖ್ಯ ಅತಿಥಿಯಾಗಿ ಆಗಮಿಸಿ ಮೂಡುಬಿದಿರೆಯ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿರುಪಾಕ್ಷಪ್ಪ ಅವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿದ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಯುವರಾಜ್ ಜೈನ್ ಜೀವನವನ್ನು ಬದಲಾಯಿಸುವ ಶಕ್ತಿ ಕಲೆಗಿದೆ. ಕಲೆ ಮನುಷ್ಯನ್ನು ಯಾವತ್ತೂ ಕೈ ಬಿಡುವುದಿಲ್ಲ ಜೀವನದಲ್ಲಿ ಪ್ರಶಸ್ತಿಯನ್ನು ಪಡೆದುಕೊಳ್ಳುವುದು ಮುಖ್ಯವಲ್ಲ ಅವಕಾಶಗಳನ್ನು ಬಳಸಿಕೊಳ್ಳುವುದು ಮುಖ್ಯ. ಓದಿನ ಜೊತೆಗೆ ಇನ್ನಿತರ ಕಲಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿ ಎಷ್ಟು ಕಲಿಯಲು ಸಾಧ್ಯವೋ ಅಷ್ಟನ್ನು ಕಲಿತುಕೊಳ್ಳಿ ನಮ್ಮಲ್ಲಿ ಏನು ಇಲ್ಲ ಎಂದು ಬೇಸರದ ಬದುಕನ್ನು ಬದುಕಬೇಡಿ. ನಿಮ್ಮಲ್ಲಿರುವ ಆಸಕ್ತಿ ಕ್ಷೇತ್ರದಲ್ಲಿ ಅಭ್ಯಾಸ ಮುಂದುವರೆಸಿ ನಿಮ್ಮಿಷ್ಟದ ಕ್ಷೇತ್ರದಲ್ಲಿ ಸಾಧನೆ ಮಾಡಿ. ಸಮಾಜದಲ್ಲಿ ನಿಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಲು ಅವಕಾಶಗಳು ಸಿಗುತ್ತಲೇ ಇರುತ್ತವೆ. ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿವಿಧ ಚಟುವಟಿಕೆಗಳ ತರಬೇತುದಾರರಾದ ರಶ್ಮಿತಾ-ಭರತನಾಟ್ಯ, ಸರ್ಪಾಜ್-ಕರಾಟೆ, ಸೌಂದರ್ಯ-ಚೆಸ್, ರೂಪೇಶ್ ಕುಮಾರ್-ನೃತ್ಯ, ಪೂರ್ಣಿಮಾ ಗೋರೆ-ಸಂಗೀತ, ಮಹವೀರ ಪಾಂಡಿ-ಯಕ್ಷಗಾನ, ಚಂದ್ರಶೇಖರ ಆಚಾರ್ಯ-ಚೆಂಡೆ, ಗೌರಿಪ್ರಸಾದ್-ತಬಲ, ಬಾಸ್ಕರ್ ನೆಲ್ಯಾಡಿ-ಚಿತ್ರಕಲೆ, ಚೇತನ ಶೆಟ್ಟಿ- ಕ್ರಾಪ್ಟ್ ಹಾಗೂ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್, ಸೆಂಟ್ರಲ್ ಶಾಲೆಯ ಪ್ರಾಂಶುಪಾಲರಾದ ಸುರೇಶ್, ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಆಡಳಿತ ನಿರ್ದೇಶಕರಾದ ಡಾ| ಸಂಪತ್ ಕುಮಾರ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಿರು ವಯಸ್ಸಿನಲ್ಲಿಯೇ ಸರ್ವಕಲಾ ಪ್ರಕಾರಗಳಲ್ಲಿ ಸಾಧನೆಗೈದ ಬೆಳುವಾಯಿಯ ಶುಭಾಂಜನ ಭಟ್ ಇವರನ್ನು ಗೌರವಿಸಿ ಸಂಮಾನಿಸಲಾಯಿತು. ಕರಾಟೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಸಂಸ್ಥೆಯ ವಿದ್ಯಾರ್ಥಿ ಸುಮಿತ್ ಹಾಗೂ ಕರಾಟೆ ತರಬೇತುದಾರರಾದ ಸರ್ಫಾಜ್ ಇವರನ್ನು ಗೌರವಿಸಿ ಅಭಿನಂದನೆ ಸಲ್ಲಿಸಲಾಯಿತು. ಉಪಮುಖ್ಯೋಪಾಧ್ಯಾಯರಾದ ಜಯಶೀಲ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಸಾನಿಧ್ಯಾ ರಾವ್ ಸನ್ಮಾನಿತರನ್ನು ಪರಿಚಯಿಸಿದರು, ಸಂಜಲ ನಿರೂಪಿಸಿದರು, ರಶ್ಮಿತಾ ಸ್ವಾಗತಿಸಿದರು, ಭುವನ ವಂದಿಸಿದರು.