ವಿಶ್ವವಿದ್ಯಾಲಯ (ರಾಜ್ಯ) ಮಟ್ಟದ ಪುರುಷರ ಮತ್ತು ಮಹಿಳಾ ಕಬಡ್ಡಿ ಚಾಂಪಿಯನ್‌ಶಿಪ್
Published Date: 18-Jun-2024 Link-Copied
ಮೂಡುಬಿದಿರೆ: ಕಾಲೇಜು ಮಟ್ಟದಲ್ಲಿ ಕ್ರೀಡೆಗೆ ಪ್ರಾಮುಖ್ಯತೆಯನ್ನು ನೀಡಿದರೆ ಮಾತ್ರ ದೇಶದಲ್ಲಿ ಕ್ರೀಡೆ ಬೆಳೆಯಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಅಮೆಚ್ಯೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ರಾಕೇಶ್ ಮಲ್ಲಿ ಹೇಳಿದರು. ಇಲ್ಲಿರುವ ಆಳ್ವಾಸ್ ಕಾಲೇಜಿನ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ ಸ್ಮಾರಕ ಶೆಟ್ಟಿ ಸಭಾಂಗಣದಲ್ಲಿ ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಆತಿಥ್ಯದಲ್ಲಿ ನಡೆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ರಾಜ್ಯ) ಮಟ್ಟದ ಪುರುಷರ ಮತ್ತು ಮಹಿಳಾ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಅವರು ಮಾತನಾಡಿದರು. ಕ್ರೀಡೆಯನ್ನು ಬೆಳೆಸುವಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕೊಡುಗೆ ಅಪಾರ. ಸರ್ಕಾರದ ನೆರವಿಲ್ಲದೆಯೂ ಆಳ್ವಾಸ್ ಸಂಸ್ಥೆ ಕ್ರೀಡಾಪಟುಗಳ ಬೆಳವಣಿಗೆಗೆ ಶ್ರಮ ಪಡುತ್ತಿದೆ. ಈ ಮಾದರಿ ದೇಶದಲ್ಲೇ ಮೊದಲು ಎಂದರು. ಮುಂದಿನ ದಿನಗಳಲ್ಲಿ ನಮ್ಮ ಫೆಡರೇಶನ್ ಕಪ್ ಅನ್ನು ಆಳ್ವಾಸ್‌ನಲ್ಲೆ ನಡೆಸಲಾಗುವುದು ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ವೈದ್ಯಕೀಯ ವಿದ್ಯಾರ್ಥಿಗಳು ದೇಶಿಯ ಕ್ರೀಡೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ಸಂತೋಷ ಉಂಟುಮಾಡಿದೆ. ಆಳ್ವಾಸ್ ಸಂಸ್ಥೆಯೂ ಕ್ರೀಡೆಯ ಪೋಷಣೆ ಹಾಗೂ ಬೆಳವಣಿಗೆಗೆ ಮಹತ್ವವನ್ನು ನೀಡುತ್ತದೆ. ಇದರ ಫಲವಾಗಿ ನಮ್ಮ ಸಂಸ್ಥೆಯಿಂದ 7 ಕ್ರೀಡಾಪಟುಗಳು ಒಲಿಂಪಿಕ್‌ನಲ್ಲಿ ಸ್ಪರ್ಧಿಸಲು ಸಾಧ್ಯವಾಯಿತು ಎಂದರು. ರಾಷ್ಟ್ರಮಟ್ಟದ ಅಂತರ ವಿಶ್ವವಿದ್ಯಾಲಯ ಕಬಡ್ಡಿ ಟೂರ್ನಿ ಹಾಗೂ ಖೇಲೊ ಇಂಡಿಯಾ ಟೂರ್ನಿಯಲ್ಲಿ ಚಿನ್ನದ ಪದಕ ಗಳಿಸಿದ ಆಳ್ವಾಸ್ ವಿದ್ಯಾರ್ಥಿ ಜಿತಿನ್ ನಾಯ್ಕ್, ಪ್ರೊ ಕಬಡ್ಡಿ ಆಟಗಾರರಾದ ರಂಜಿತ್ ನಾಯ್ಕ್ ಹಾಗೂ ಶಶಾಂಕ್ ಬಿ. ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಪುರುಷೋತ್ತಮ್ ಪೂಜಾರಿ ಹಾಗೂ ರೋಹಿತ್ ತೊಕ್ಕೊಟ್ಟು ಇದ್ದರು. ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಡಾ. ವನಿತಾ ಶೆಟ್ಟಿ ಸ್ವಾಗತಿಸಿ, ಆಳ್ವಾಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಯತಿ ಕುಮಾರ್ ವಂದಿಸಿ, ವಿದ್ಯಾರ್ಥಿ ಅನಂತಕೃಷ್ಣ ನಿರೂಪಿಸಿದರು. ಈ ಟೂರ್ನಿಯಲ್ಲಿ ಒಟ್ಟು 64 ಪುರುಷರ ಹಾಗೂ 19 ಮಹಿಳಾ ತಂಡಗಳು ಪಾಲ್ಗೊಂಡಿದ್ದು, ಮೂರು ದಿನಗಳ ಕಾಲ ಟೂರ್ನಿ ನಡೆಯಲಿದೆ. ಜೂನ್ 20ರಂದು ಅಂತಿಮ ಹಣಾಹಣಿ ಪಂದ್ಯಗಳು ಹಾಗೂ ಸಮಾರೋಪ ನಡೆಯಲಿದೆ.