ಕನ್ನಡ ಸಾಹಿತ್ಯ ಪರಿಷತ್: ಸಂಸ್ಥಾಪನಾ ದಿನಾಚರಣೆ
Published Date: 07-May-2024 Link-Copied
ಉಜಿರೆ: ತಾಯಿ ಮತ್ತು ಜನ್ಮಭೂಮಿ ಸ್ವರ್ಗಕ್ಕಿಂತಲೂ ಮಿಗಿಲಾಗಿದೆ. ಕನ್ನಡನಾಡು, ನುಡಿ ಮತ್ತು ಸಂಸ್ಕೃತಿಯನ್ನು ಸದಾ ಲವಲವಿಕೆಯೊಂದಿಗೆ ಜೀವಂತವಾಗಿರಿಸಲು ಕನ್ನಡ ಸಾಹಿತ್ಯ ಪರಿಷತ್ತನ್ನು ಸದೃಢಗೊಳಿಸಬೇಕಾದ ಅನಿವಾರ್ಯತೆ ಇದೆ ಎಂದು ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕುಮಾರ ಹೆಗ್ಡೆ ಅವರು ಭಾನುವಾರ(ಮೇ 5) ಸಿದ್ಧವನ ಗುರುಕುಲದಲ್ಲಿ ಆಯೋಜಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ 110ನೆ ಸಂಸ್ಥಾಪನಾ ದಿನಾಚರಣೆ ಉದ್ಘಾಟಸಿ ಶುಭ ಹಾರೈಸಿದರು. ಇಂದು ಓದುವ ಹವ್ಯಾಸ ಕಡಿಮೆಯಾಗುತ್ತಿದ್ದು, ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಹೋಬಳಿ ಮಟ್ಟದವರೆಗೂ ಹೆಚ್ಚಿನ ಸಾಹಿತ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಎಲ್ಲರೂ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಶ್ರೀನಾಥ್ ಮಾತನಾಡಿ ಜಿಲ್ಲೆಯಲ್ಲಿ ನಾಲ್ಕುನೂರಕ್ಕೂ ಮಿಕ್ಕಿ ಕಾರ್ಯಕ್ರಮಗಳ ಮೂಲಕ ಕನ್ನಡ ಸಾಹಿತ್ಯ, ನುಡಿ, ಸಂಸ್ಕೃತಿ ಬಗ್ಗೆ ಅರಿವು, ಜಾಗೃತಿ ಮೂಡಿಸಲಾಗಿದೆ ಎಂದರು. ಪುತ್ತೂರು ವಿವೇಕಾನಂದ ಕಾಲೇಜಿನ ಸಂಸ್ಕೃತಿ ವಿಭಾಗದ ಮುಖ್ಯಸ್ಥ ಪ್ರೊ. ಶ್ರೀಶ ಕುಮಾರ್ ಅವರು ಮಾತನಾಡಿ, ಶಬ್ದ ಮತ್ತು ಅರ್ಥಗಳ ಮಂಜುಳ ಸಂಯೋಜನೆಯೇ ಮನಕ್ಕೆ ಮುದ ನೀಡುವ ಸಾಹಿತ್ಯ ಆಗುತ್ತದೆ. ಸಾಹಿತ್ಯ ಕೃತಿಗಳನ್ನು ಓದುವ, ಬರೆಯುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಮಂಗಳೂರಿನ ಡಾ. ಮಾಧವ ಎಂ.ಕೆ. ಮಾತನಾಡಿ ವಿದೇಶೀಯರ ದಾಳಿಗಳು ಕನ್ನಡ ಭಾಷೆಯ ಮೇಲೂ ಗಾಢ ಪರಿಣಾಮ ಬೀರಿವೆ. ಕನ್ನಡದ ಬಗ್ಗೆ ಕೀಳರಿಮೆ ಸಲ್ಲದು ಎಂದರು. ರಾಮಕೃಷ್ಣ ಭಟ್ ಚೊಕ್ಕಾಡಿ ಕಾರ್ಯಕ್ರಮ ನಿರ್ವಹಿಸಿದರು.