ಕೋಕೋ ಕೃಷಿಕರಿಗೆ ಸಂತಸ... ಮೊದಲ ಬಾರಿಗೆ ಕೆ.ಜಿ.ಗೆ 100 ರೂ.
Published Date: 16-Feb-2024 Link-Copied
ಕೋಕೋ ಬೆಳೆ ಧಾರಣೆ ಏರುಗತಿಯಲ್ಲಿರುವುದು ಬೆಳೆಗಾರರ ಮುಖದಲ್ಲಿ ಮಂದಹಾಸ ಸೃಷ್ಟಿಸಿದೆ. ಇದೇ ಮೊದಲ ಬಾರಿಗೆ ಹಸಿ ಕೋಕೋ ಕೆ.ಜಿ.ಗೆ 100 ರೂ. ಧಾರಣೆಯನ್ನು ತಲುಪಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆ ಬೆಳೆಯುವ ಕೃಷಿಕರ ಸಂಖ್ಯೆ ಹೆಚ್ಚಾಗಿದ್ದು, ಅಡಿಕೆ, ತೆಂಗು ಜತೆ ಕೋಕೋ ಬೆಳೆಯನ್ನು ಬೆಳೆಯುತ್ತಿದ್ದಾರೆ. ಆದರೆ ಇದಕ್ಕೂ ರೋಗ ಬಾಧೆ, ಬೆಲೆ ಇಳಿಕೆ ಸಮಸ್ಯೆ ಇದ್ದು ಕೃಷಿಕರಿಗೆ ನಿರೀಕ್ಷಿತ ಆದಾಯ ಕೈಗೆ ಸಿಗುತ್ತಿರಲಿಲ್ಲ. ಕೆ.ಜಿ.ಗೆ 100 ರೂ.: ಕೋಕೋಗೆ ಉತ್ತಮ ಬೇಡಿಕೆ ಇದ್ದರೂ ಬೆಳೆಗಾರರಿಗೆ ಉತ್ತಮ ಧಾರಣೆ ಸಿಗದ ಕಾರಣ ಕೋಕೋ ಬೆಳೆಯ ಬಗ್ಗೆ ನಿರಾಸಕ್ತಿ ವಹಿಸಿದ್ದರು. ಆದರೆ ಈಗ ಹಸಿ ಕೋಕೋ ಕೆ.ಜಿ.ಗೆ 80ರಿಂದ 100 ರೂ.ಗಳಂತೆ ಕ್ಯಾಂಪ್ಕೋ ಸಂಸ್ಥೆ ಖರೀದಿಸುತ್ತಿದೆ. ಮುಂದಿನ ದಿನಗಳಲ್ಲಿ ಹಸಿ ಕೋಕೋ ಕೆ.ಜಿ.ಗೆ 100ರಿಂದ 120 ರೂ. ವರೆಗೆ ಏರಿಕೆಯಾಗುವ ಸಾಧ್ಯತೆ ಇದೆ. ಒಣ ಕೋಕೋ ಕೆ.ಜಿ.ಗೆ 370ರಿಂದ 400ರಂತೆ ಖರೀದಿಸಲಾಗುತ್ತಿದೆ. ಆದರೆ ಈ ಬೇಸಗೆಯಲ್ಲಿ ಮಾತ್ರವೇ ಸಿಗಲಿದೆ ಎನ್ನಲಾಗುತ್ತಿದೆ. ಮಳೆಗಾಲದಲ್ಲಿ ಹೆಚ್ಚಾಗಿ ನೀರಿನ ಅಂಶವನ್ನು ಹೊಂದಿರುವುದರಿಂದ ಕೋಕೋ ಹೆಚ್ಚಿನ ಧಾರಣೆ ನೀಡಲು ಸಾಧ್ಯವಾಗುತ್ತಿಲ್ಲ. ಬೇಸಗೆಯಲ್ಲಿ ಉತ್ಪನ್ನಗಳಿಗೆ ಗುಣಮಟ್ಟದ ಕೋಕೋ ಸಿಗುವುದರಿಂದ ಬೆಲೆ ಏರಿಕೆ ಆಗುತ್ತದೆ. ಬೆಲೆ ಏರಿಕೆಗೆ ಕಾರಣ-ವಿವಿಧ ಉತ್ಪನ್ನಗಳಿಗಾಗಿ ಕಂಪೆನಿಗಳು ವಿದೇಶದ ಆಶ್ರಯಿಸಿಕೊಂಡಿದ್ದವು. ಕೋಕೋಗಳನ್ನೇ ಐವರಿಕೋಸ್ಟ್ ಎಂಬಲ್ಲಿ ಕೋಕೋ ಬೆಳೆ ಉತ್ಪಾದನೆ ಕುಸಿತಗೊಂಡು ಅಲ್ಲಿಂದ ಭಾರತಕ್ಕೆ ಕೋಕೋ ಪೂರೈಕೆ ಆಗುತ್ತಿಲ್ಲ ಎನ್ನಲಾಗಿದೆ. ಇದರಿಂದ ದೇಶಿ ಕೋಕೋಗೆ ಬೇಡಿಕೆ ಹೆಚ್ಚಾಗಿದೆ. ಇತರೆ ಕೋಕೋ ಖರೀದಿ ಮಾಡುವ ವ್ಯಾಪಾರಸ್ಥರು ಹಾಗೂ ಕ್ಯಾಂಪ್ಕೋ ಸಂಸ್ಥೆ ಇದರಿಂದ ಬೆಲೆ ಏರಿಕೆ ಮಾಡಿದೆ ಎಂದು ಪ್ರಕಟಣೆಯಿಂದ ತಿಳಿದುಬಂದಿದೆ.