ಅಡಿಕೆ ಸಸಿ ಮತ್ತು ಸಣ್ಣ ಮರಗಳಲ್ಲಿ ಎಲೆಚುಕ್ಕೆ ರೋಗ


Logo

Published Date: 15-Feb-2024 Link-Copied

ಎಲೆಚುಕ್ಕೆ ರೋಗವನ್ನು ಅಡಿಕೆ ಸಸಿ ಮತ್ತು ಸಣ್ಣ ಮರಗಳಲ್ಲಿ ಸಾಮಾನ್ಯವಾಗಿ ಬೇಸಿಗೆ ಮತ್ತು ಮಳೆಗಾಲದಲ್ಲಿ ಕಾಣಬಹುದು. ಕೆಳಭಾಗದ ಒಂದೆರಡು ಎಲೆಗಳಲ್ಲಿ ಚುಕ್ಕೆಗಳಿರುತ್ತವೆ. ಇತ್ತೀಚೆಗೆ ಈ ರೋಗವು ಹಲವೆಡೆ ಗಂಭೀರ ಸ್ವರೂಪವನ್ನು ಪಡೆದಿದೆ. ತಕ್ಷಣ ನಿರ್ವಹಣಾ ಕ್ರಮಗಳನ್ನು ಅನುಸರಿಸಿಕೊಳ್ಳಬೇಕಾದದ್ದು ಅನಿವಾರ್ಯ. ಮೊತ್ತಮೊದಲು ಎಲೆಚುಕ್ಕೆ ರೋಗದ ತೀವ್ರತೆಯನ್ನು ಗಮನಿಸಿದ್ದು ಭಾರತದ ಈಶಾನ್ಯ ರಾಜ್ಯ ತ್ರಿಪುರದ ಜಂಪುಯಿ ಹಿಲ್ಸ್ ಪ್ರದೇಶದಲ್ಲಿ, ಕರ್ನಾಟಕದ ಮೂಡಿಗೆರೆ ತಾಲೂಕಿನ ಕಳಸದ ಮರಸಣಿಗೆ ಪ್ರದೇಶದಲ್ಲಿ ಕೆಲವೇ ತೋಟಗಳಿಗೆ ಸೀಮಿತವಾಗಿದ್ದ ರೋಗಲಕ್ಷಣ, ಮರು ವರ್ಷದಲ್ಲಿ ಹಲವು ತೋಟಗಳಿಗೆ ಹಬ್ಬಿತ್ತು. ಗಾಳಿ ಮುಖೇನ ಈ ಹರಡುವ ಕಾರಣ, ಪ್ರಾಥಮಿಕ ಹಂತದಲ್ಲೇ ನಿರ್ವಹಣೆ ಮಾಡದಿದ್ದರೆ ಈ ರೋಗವನ್ನು ನಿಯಂತ್ರಿಸುವುದು ಕಷ್ಟ, ಶಿವಮೊಗ್ಗ, ಚಿಕ್ಕಮಗಳೂರು, ಮಡಿಕೇರಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ಎಲೆಚುಕ್ಕೆ ರೋಗದ ಲಕ್ಷಣಗಳು ಇತ್ತೀಚೆಗೆ ಕಾಣಿಸಿಕೊಂಡಿವೆ. ಕೇರಳ ಮತ್ತು ತಮಿಳುನಾಡಿಗೂ ರೋಗ ಪಸರಿದೆ. ರೋಗಾಣು: ಕೊಲೆಟೋಟೈಕಮ್ ಸ್ವಿಸಿಸ್ ಮತ್ತು ಫಿಲೋಸ್ಟಿಕ್ಷಾ ಅರೆಕೆ ಎನ್ನುವ ಶಿಲೀಂಧ್ರಗಳು ಸಾಮಾನ್ಯವಾಗಿ ಅಡಿಕೆಯಲ್ಲಿ ಎಲೆಚುಕ್ಕೆ ರೋಗವನ್ನು ಉಂಟುಮಾಡುತ್ತವೆ. ಆದರೆ, ಇತ್ತೀಚೆಗೆ ಗಂಭೀರ ಸ್ವರೂಪದಲ್ಲಿ ಕಾಣಿಸಿಕೊಂಡಿರುವ ಎಲೆಚುಕ್ಕೆ ರೋಗಕ್ಕೆ ಕೊಲೆಟೋಟೈಕಮ್ ಕಹಾವೆ ಸಬ್ಸ್ಟಿಸಿಸ್ ಸಿಗ್ಗಾರೊ ಎನ್ನುವ ಶಿಲೀಂಧ್ರವು ಪ್ರಮುಖ ಕಾರಣವೆಂದು ತಿಳಿದುಬಂದಿದೆ. ಎಲೆಚುಕ್ಕೆ ರೋಗದಿಂದ ಪತ್ರಹರಿತ್ತು ಕಡಿಮೆಯಾಗಿ ಉತ್ಪಾದನೆ ಕುಂಠಿತವಾಗುತ್ತದೆ. ಇದು ಮರದ ಬೆಳವಣಿಗೆ ಮತ್ತು ಇಳುವರಿಯ ಮೇಲೆ ದೀರ್ಘ ಕಾಲದ ದುಷ್ಪರಿಣಾಮ ಬೀರಬಹುದು. ರೋಗ ಲಕ್ಷಣಗಳು: ಅಡಿಕೆ ಮರದ ಎಲೆಯಲ್ಲಿ “ಹಳದಿ ಬಣ್ಣದಿಂದ ಆವೃತವಾಗಿರುವ ಕಂದು ಬಣ್ಣದ ಸಣ್ಣ ಚುಕ್ಕೆಗಳಿದ್ದರೆ, ಅದು ಎಲೆಚುಕ್ಕೆ ರೋಗವೆಂದರ್ಥ. ಕೆಲವೊಮ್ಮೆ, ಕಪ್ಪು ಬಣ್ಣದ ಅಂಚು ಇರುವ ಬೂದು ಬಣ್ಣದ ಸಣ್ಣ ಚುಕ್ಕೆಗಳನ್ನೂ ಕಾಣಬಹುದು. ಈ ರೀತಿಯ ಸಣ್ಣ ಚುಕ್ಕೆಗಳು ದೊಡ್ಡದಾಗಿ, ಈ ಒಂದಕ್ಕೊಂದು ಸೇರಿ ಇಡೀ ಸೋಗೆಗೆ ಹಬ್ಬಿ ಅದನ್ನು ಒಣಗಿಸುತ್ತವೆ. ಮೊದಲು ಕೆಳಭಾಗದ ಒಂದೆರಡು ಎಲೆಗಳಲ್ಲಿ ರೋಗಲಕ್ಷಣ ಕಾಣಿಸಿಕೊಂಡರೆ, ರೋಗ ತೀವ್ರತೆ ಹೆಚ್ಚಾದಾಗ ನಾಲ್ಕೈದು ಎಲೆಗಳಿಗದು ಹಬ್ಬುತ್ತದೆ. ಅಡಿಕೆ ಕಾಯಿ ಮತ್ತು ಹಾಳೆಯ ಮೇಲೂ ಚುಕ್ಕೆಗಳನ್ನು ಕಾಣಬಹುದು. ರೋಗಬಾಧಿತ ಕಾಯಿಗಳು ಬಲಿಯುವ ಮೊದಲೇ ಹಳದಿಯಾಗಿ ಬೀಳುತ್ತವೆ. ಕೆಲವೊಮ್ಮೆ ಕಾಯಿಯ ಮೇಲೆ ಚುಕ್ಕೆ ಮೂಡಿದ ಜಾಗವು ಸೀಳಿ ಅವು ಉದುರುವುದಿದೆ. ನಿರ್ವಹಣೆ ಹೇಗೆ: ಅಧಿಕ ರೋಗಬಾಧಿತ ಎಲೆಗಳನ್ನು ತುಂಡರಿಸಿ ತೆಗೆದು ನಾಶ ಮಾಡುವುದು ಸೋಂಕು ಕಡಿಮೆಗೊಳಿಸಲು ಪ್ರಯೋಜನಕಾರಿ. ಈ ಕೆಲಸ ಪ್ರಾಯೋಗಿಕವಾಗಿ ಕಷ್ಟ, ಆದರೆ, ತೀವ್ರ ಬಾಧೆಯಿರುವಲ್ಲಿ ಅನಿವಾರ್ಯ. ರೋಗಬಾಧಿತ ತೋಟಗಳಲ್ಲಿ ಅಡಿಕೆ ಗೊನೆಗಳಿಗೆ ಬೋರ್ಡೋ ಮಿಶ್ರಣ ಸಿಂಪಡಣೆ ಮಾಡುವಾಗ, ಎಲೆಗಳಿಗೂ ಮಾಡುವುದೊಳಿತು. ಹೆಚ್ಚು ರೋಗಬಾಧೆಯಿರುವ ತೋಟಗಳಲ್ಲಿ ಆಗಸ್ಟ್ - ಸೆಪ್ಟೆಂಬರ್ ಸಮಯದಲ್ಲಿ ಮಳೆ ಇಲ್ಲದಾಗ (Propiconazole 25EC) (Hexaconazole 5EC/5SC) ಶಿಲೀಂಧ್ರನಾಶಕವನ್ನು ಒಂದು ಲೀಟರ್ ನೀರಿಗೆ ಒಂದು ಮಿಲಿಲೀಟರ್ ಪ್ರಮಾಣದಲ್ಲಿ ಎಲೆಗಳಿಗೆ ಸಿಂಪಡಿಸಬೇಕು. ಮೂರರಿಂದ ನಾಲ್ಕು ವಾರಗಳ ನಂತರ, ಪ್ರೊಪಿನಬ್ 70WP ಶಿಲೀಂಧ್ರನಾಶಕವನ್ನು ಒಂದು ಲೀಟರ್ ನೀರಿಗೆ ಎರಡು ಗ್ರಾಂ ಪ್ರಮಾಣದಲ್ಲಿ ಸಿಂಪಡಿಸಬೇಕು. ಶಿಲೀಂದ್ರ ನಾಶಕ ದ್ರಾವಣ ತಯಾರಿಸುವಾಗ ಪ್ರತೀ ಲೀಟರ್ ದ್ರಾವಣಕ್ಕೆ ಒಂದು ಮಿಲಿಲೀಟರ್ ಪ್ರಮಾಣದಲ್ಲಿ ಅಂಟನ್ನು ಸೇರಿಸಬೇಕು. ತೀವ್ರ ರೋಗಬಾಧೆ ಇರುವಲ್ಲಿ, ಜನವರಿ ತಿಂಗಳ ನಂತರ ಸಿಂಗಾರ ಒಣಗುವ ರೋಗಕ್ಕೆ ಪ್ರೋಪಿಕೊನರೋಲ್ ಶಿಲೀಂಧ್ರನಾಶಕ ಸಿಂಪಡಿಸುವಾಗ ಎಲೆಚುಕ್ಕೆ ರೋಗವಿರುವ ಮರದ ಎಲೆಗಳಿಗೂ ಸಿಂಪಡಿಸಬಹುದು. ಮಣ್ಣು ಪರೀಕ್ಷೆ ಆಧಾರದ ಮೇಲೆ ಗೊಬ್ಬರ ನೀಡುವುದು ಮತ್ತು ಹುಳಿ ಮಣ್ಣಿಗೆ ಸುಣ್ಣ ಹಾಕುವುದು ಒಳಿತು. ಸಾಮಾನ್ಯವಾಗಿ, ಅಡಿಕೆ ಮರಕ್ಕೆ 12 ಕಿಲೋ ಗ್ರಾಂ ಹಟ್ಟಿಗೊಬ್ಬರ ಮತ್ತು ಹಸಿರೆಲೆ, ಯೂರಿಯ(220 ಗ್ರಾಂ), ರಾಕ್ ಫಾಸ್ಪೆಟ್ (200 ಗ್ರಾಂ) ಮತ್ತು ಪೊಟಾಷ್ (240 - 350 ಗ್ರಾಂ) ನೀಡಬೇಕು. ರಸಗೊಬ್ಬರಗಳನ್ನು ಕನಿಷ್ಠ ಎರಡು ಕಂತುಗಳಲ್ಲಿ ನೀಡಬೇಕು. ಜೊತೆಗೆ, ಲಘುಪೋಷಕಾಂಶಗಳಾದ ಸತುವಿನ ಸಲ್ವೇಟ್ (5 ಗ್ರಾಂ) ಮತ್ತು ಬೊರಾಕ್ಸ್ (5 ಗ್ರಾಂ) ಕೂಡ ನೀಡಬಹುದು. ಗಾಳಿಯಲ್ಲಿ ರೋಗಾಣು ಬಹಳ ಬೇಗನೆ ಹರಡುತ್ತದೆ. ಹಾಗಾಗಿ, ರೋಗ ಪೀಡಿತ ಅಡಿಕೆ ಸಸಿಗಳನ್ನು ರೋಗವಿಲ್ಲದ ಪ್ರದೇಶಕ್ಕೆ ಸಾಗಿಸದಿರುವುದು ಮತ್ತು ಸಮುದಾಯ ಮಟ್ಟದ ರೋಗ ನಿಯಂತ್ರಣ ಕ್ರಮಗಳು ಬಲು ಮುಖ್ಯವಾಗುತ್ತವೆ.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img