ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆ
Published Date: 04-Sep-2026 Link-Copied
ಮೂಡುಬಿದಿರೆ: ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ರಾಜಸಭಾಂಗಣದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವವನ್ನು ಅತ್ಯಂತ ವಿಜೃಂಭಣೆ, ಶ್ರದ್ಧೆ ಮತ್ತು ಸಾಂಸ್ಕೃತಿಕ ವೈಭವದೊಂದಿಗೆ ಆಚರಿಸಲಾಯಿತು. ಸ್ವಾಗತ ನೃತ್ಯದ ಮೂಲಕ ಗಣ್ಯರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಮುದ್ದು ಕೃಷ್ಣ ಮತ್ತು ಯಶೋಧೆಯರ ಸಮ್ಮುಖದಲ್ಲಿ ಗಣ್ಯರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಅವರು ಪ್ರಾಸ್ತಾವಿಕ ನುಡಿಗಳ ಮೂಲಕ ಎಲ್ಲರನ್ನು ಸ್ವಾಗತಿಸಿ, ಶ್ರೀಕೃಷ್ಣನ ಜೀವನ ಮೌಲ್ಯಗಳು , ಧರ್ಮ ಹಾಗೂ ಸಂಸ್ಕೃತಿಯ ಮಹತ್ವವನ್ನು ವಿವರಿಸಿದರು. ಮುಖ್ಯ ಅತಿಥಿಗಳಾಗಿ ಮಾತನಾಡಿದ ಎಸ್ ಡಿ ಎಮ್ ಕಲಾ ಕೇಂದ್ರದ ಮುಖ್ಯ ಸಲಹೆಗಾರರಾದ ಸೋನಿಯಾ ವರ್ಮಾ ಮಾತನಾಡಿ, “ಪ್ರತಿಯೊಬ್ಬರ ಆತ್ಮದಲ್ಲಿಯೂ ದೈವಿಕ ಶಕ್ತಿ ಅಡಗಿದೆ. ಆಧುನಿಕ ವ್ಶೆಜ್ಞಾನಿಕ ತಂತ್ರಜ್ಞಾನದ ಜೊತೆಗೆ ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳ ಅರಿವು ವಿದ್ಯಾರ್ಥಿಗಳಲ್ಲಿ ಬೆಳೆಸುವುದು ಅತ್ಯಂತ ಅಗತ್ಯವಾಗಿದೆ. ಪ್ರತಿಯೊಬ್ಬ ಮಗುವಿನಲ್ಲಿಯೂ ವಿಶೇಷವಾದ ಸಾಮರ್ಥ್ಯ ಅಡಗಿರುತ್ತದೆ. ಹೇಗೆ ಸಾಮಾನ್ಯವಾದ ಬಿದಿರು ಸುಂದರವಾದ ಕೊಳಲಾಗಿ ರೂಪುಗೊಳ್ಳುತ್ತದೆಯೋ ಹಾಗೆಯೇ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಬೆಳೆಸುವ ಜವಾಬ್ದಾರಿ ಶಿಕ್ಷಕರು ಹಾಗೂ ಪೋಷಕರ ಮೇಲಿದೆ.” ಎಂದು ಹೇಳಿದರು. “ಶ್ರೀ ಕೃಷ್ಣನ ಜನ್ಮದಿನವು ಕೇವಲ ಒಂದು ಹಬ್ಬವಲ್ಲ, ಅದು ಕೃಷ್ಣನ ಧರ್ಮ, ಕರ್ತವ್ಯ ಮತ್ತು ಜೀವನ ಸಂದೇಶಗಳನ್ನು ಸ್ಮರಿಸುವ ಪವಿತ್ರ ಸಂದರ್ಭವಾಗಿದೆ. ಇಂತಹ ಹಬ್ಬಗಳು ಸಮಾಜದ ಎಲ್ಲರನ್ನು ಒಗ್ಗೂಡಿಸಿ, ಸಂಸ್ಕೃತಿ ಮತ್ತು ಬಾಂಧವ್ಯವನ್ನು ಗಟ್ಟಿಗೊಳಿಸುತ್ತವೆ.” ಎಂದು ಅವರು ಅಭಿಪ್ರಾಯಪಟ್ಟರು. ಸಂಸ್ಥೆಯ ನಿರ್ದೇಶಕರಾದ ಬಿ.ಪಿ.ಸಂಪತ್ ಕುಮಾರ್ ಜೈನ್ ಅವರು ಮಾತನಾಡಿ, “ಎಲ್ಲರನ್ನು ತನ್ನತ್ತ ಸೆಳೆಯುವ ಆಯಸ್ಕಾಂತೀಯ ವ್ಯಕ್ತಿತ್ವ ಶ್ರೀ ಕೃಷ್ಣನದು. ‘ಕೃಷ್ಣಂ ವಂದೇ ಜಗದ್ಗುರುಂ’ ಎಂಬ ಮಾತಿನಂತೆ, ಕೃಷ್ಣನು ಜಗತ್ತಿಗೆ ಮಾರ್ಗದರ್ಶಕನಾಗಿದ್ದಾನೆ. ಕೃಷ್ಣನ ಜೀವನದಲ್ಲಿ ಭಕ್ತಿ, ಜ್ಞಾನ ಮತ್ತು ವೈರಾಗ್ಯದಂತಹ ಉನ್ನತ ತತ್ವಗಳು ಅಡಗಿವೆ. ಇವುಗಳ ಸಮನ್ವಯದಿಂದ ಅಪೂರ್ವ ವ್ಯಕ್ತಿತ್ವವನ್ನು ನಾವು ಶ್ರೀಕೃಷ್ಣನಲ್ಲಿ ಕಾಣಬಹುದು.” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮತ್ತೋರ್ವ ಅತಿಥಿಯಾಗಿ ಆಗಮಿಸಿದ್ದ ಖ್ಯಾತ ನೃತ್ಯ ಸಂಯೋಜಕರಾದ ರೂಪೇಶ್ ಶೆಟ್ಟಿ ಅವರು ಮಾತನಾಡಿ, ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಶ್ಲಾಘಿಸುತ್ತಾ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಸಂಸ್ಥೆಯ ಕಾರ್ಯವನ್ನು ಮೆಚ್ಚಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ಅವರು ಮಾತನಾಡಿ, “ಜೀವನದಲ್ಲಿ ಸಂಸ್ಕಾರ ಮತ್ತು ಉತ್ತಮ ಮೌಲ್ಯಗಳು ಇದ್ದರೆ ನಾವು ಎಲ್ಲಿ ಬೇಕಾದರೂ ನೆಮ್ಮದಿಯಿಂದ ಬದುಕಬಹುದು ಎಂಬುದಕ್ಕೆ ಶ್ರೀ ಕೃಷ್ಣನ ಜೀವನವೇ ಸಾಕ್ಷಿಯಾಗಿದೆ. ಯಾವುದೇ ಫಲಾಪೇಕ್ಷೆಯಿಲ್ಲದೆ ಪ್ರಾಮಾಣಿಕತೆ, ನಿಷ್ಠೆ ಮತ್ತು ಧರ್ಮದ ಹಾದಿಯಲ್ಲಿ ಜೀವನ ನಡೆಸಿದಾಗ ಭಗವಂತನ ಅನುಗ್ರಹ ಸದಾ ನಮ್ಮೊಂದಿಗಿರುತ್ತದೆ. ಶ್ರೀ ಕೃಷ್ಣನ ಆದರ್ಶಗಳು ನಮ್ಮ ಬದುಕಿಗೆ ದಾರಿದೀಪವಾಗಲಿ.” ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸೋನಿಯಾ ವರ್ಮಾ ಅವರನ್ನು ಸಂಸ್ಥೆಯ ವತಿಯಿಂದ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. ಕೃಷ್ನ ಜನ್ಮಾಷ್ಟಮಿ ಪ್ರಯುಕ್ತ ಹಮ್ಮಿಕೊಂಡಿದ್ದ ಯಶೋದಾ-ಕೃಷ್ಣ ವೇಷಭೂಷನ ಸ್ಪರ್ಧೆ ಹಾಗೂ ಇನ್ನಿತರ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಗಣ್ಯರ ಉಪಸ್ಥಿತಿಯಲ್ಲಿ ಬಹುಮಾನ ವಿತರಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಶಿವಪ್ರಸಾದ್ ಭಟ್, ಉಪಮುಖ್ಯ ಶಿಕ್ಷಕ ಜಯಶೀಲ, ಸಿ.ಬಿ.ಎಸ್.ಸಿ ವಿಭಾಗದ ಸಂಯೋಜಕಿ ವಿಮಲಾ ಶೆಟ್ಟಿ, ಅಪೇಕ್ಷಾ ಜೈನ್, ಮಾಲಕರು ಪ್ರಭಾತ್ ಸಿಲ್ಕ್ ಮೂಡುಬಿದಿರೆ, ಯಶಸ್ವಿ ವೆಲ್ಡಿಂಗ್ ಇಂಜಿನಿಯರಿಂಗ್ ವರ್ಕ್ಸ್ ಇದರ ಮಾಲಕರಾದ ಲೀಲೇಶ್ ಕೋಟ್ಯಾನ್ ಸೇರಿದಂತೆ ಸಂಸ್ಥೆಯ ಶಿಕ್ಷಕ ವೃಂದದವರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಭಾಗವಹಿಸಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು. ಕು. ಸಾನ್ವಿ ಹಾಗೂ ಕು.ಮಾನಸ ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಕು. ಮೌಲ್ಯ ವೈ ಆರ್ ಜೈನ್ ಇವರು ಅತಿಥಿಗಳ ಪರಿಚಯ ಭಾಷಣವನ್ನು ಮಾಡಿದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಂದ ಮನಮೋಹಕ ನೃತ್ಯ ಕಾರ್ಯಕ್ರಮಗಳು ಪ್ರದರ್ಶನಗೊಂಡವು. ಶ್ರೀ ಕೃಷ್ಣನ ಜೀವನದ ವಿವಿಧ ಪ್ರಸಂಗಗಳನ್ನು ಬಿಂಬಿಸುವ ನೃತ್ಯ ರೂಪಕಗಳು ಪ್ರೇಕ್ಷಕರ ಮನಸೂರೆಗೊಂಡವು. ವಿದ್ಯಾರ್ಥಿಗಳ ಅದ್ಭುತ ಪ್ರತಿಭೆ, ಶಿಸ್ತು ಮತ್ತು ಕಲಾ ನೈಪುಣ್ಯವು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.